ಬೆಂಗಳೂರು, ಏಪ್ರಿಲ್ 23: ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಇದೀಗ ನಗರದ ಖಾಸಗಿ ಹೋಟೆಲ್ಗೆ ಬಾಂಬ್ ಬೆದರಿಕೆ ಪತ್ರ ರವಾನಿಸಲಾಗಿದೆ. ಪೋಸ್ಟ್ ಮೂಲಕ ಹೋಟೆಲ್ಗೆ ಬಾಂಬ್ ಬೆದರಿಕೆ ಪತ್ರ ರವಾನೆ ಮಾಡಿದ್ದು, ಖಾಸಗಿ ಹೋಟೆಲ್ನಲ್ಲಿದ್ದ ಗ್ರಾಹಕರನ್ನು ಹೊರಕಳಿಸಿ ಜಾಲಹಳ್ಳಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಎಚ್‌ಎಂಟಿ ಮೈದಾನ ಬಳಿಯ ಕದಂಬ ಹೋಟೆಲ್ ಸುತ್ತಮುತ್ತ ಬಾಂಬ್ ಇರಿಸಲಾಗಿದೆ ಎಂದು ಜಾಲಹಳ್ಳಿ ಪೊಲೀಸ್ ಠಾಣೆಗೆ ಅನಾಮಧೇಯ ಪತ್ರ ಬಂದಿದೆ.
ಕಳೆದ ಮಾರ್ಚ್ 1 ರಂದು ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಟ ಮಟ ಮಧ್ಯಾಹ್ನ ಬಾಂಬ್ ಸ್ಫೋಟವಾಗಿತ್ತು. ಕಿಕ್ಕಿರಿದು ತುಂಬಿದ್ದ ಜನರ ಮಧ್ಯೆ ಗ್ರಾಹಕರಂತೆ ಬಂದು ಬಾಂಬ್ ಇಟ್ಟು ಹೋಗಿದ್ದ ಶಂಕಿತ ಬಾಂಬರ್ ಕೊನೆಗೂ ಲಾಕ್ ಆಗಿದ್ದ. ಬರೋಬ್ಬರಿ 43 ದಿನಗಳ ಬಳಿಕ ಪಶ್ಚಿಮ ಬಂಗಾಳದಲ್ಲಿ NIA ತೋಡಿದ ಖೆಡ್ಡಾಗೆ ಬಾಂಬರ್ ಬಿದ್ದಿದ್ದ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದ ಶಂಕಿತ ಉಗ್ರ ಮುಸಾವಿರ್ ಹುಸೇನ್ ಮತ್ತು ಆತನಿಗೆ ಮಾರ್ಗದರ್ಶನ ನೀಡಿದ್ದ ಮತೀನ್ ತಾಹನನ್ನು ಬಂಧಿಸಲಾಗಿತ್ತು.
ತಮಿಳುನಾಡಿನ ಕಡಲೂರಿನಲ್ಲಿ ಶಂಕಿತರ ಬಾಂಬರ್ ಮುಸಾವಿರ್ ಮತ್ತು ಮತೀನ್ ಬಾಂಬ್ ತಯಾರಿಸಿದ್ದರು. ಅದೇ ಬಾಂಬ್ ಎತ್ತಿಕೊಂಡು ಬೆಂಗಳೂರಿನ ಕೆ.ಆರ್.ಪುರಂ ಮೂಲಕ ರಾಮೇಶ್ವರಂ ಕೆಫೆಗೆ ಮುಸಾವಿರ್ ಬಂದಿದ್ದನಂತೆ. ಮತೀನ್ ಮಾಡಿದ್ದ ಪ್ಲ್ಯಾನ್‌ನಂತೆಯೇ ಬಾಂಬ್ ಇಟ್ಟು ಹೋಗಿದ್ದ. ಬಾಂಬ್ ಇಟ್ಟ ಬಳಿಕ ಉಗ್ರ ಮುಸಾವಿರ್ ಪಶ್ಚಿಮಬಂಗಾಳಕ್ಕೆ ಪರಾರಿಯಾಗಿದ್ದ.
ಇನ್ನು ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ ಕೆಲವೇ ದಿನಗಳ ಬಳಿಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಜಿ. ಪರಮೇಶ್ವರ್ ಸೇರಿದಂತೆ ಸಂಪುಟದ ಇತರೆ ಸಚಿವರಿಗೆ ಬಾಂಬ್ ಬೆದರಿಕೆ ಇಮೇಲ್ ಕೂಡ ಬಂದಿತ್ತು.
[email protected]’ ಎಂಬ ಐಡಿಯಿಂದ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, 2.5 ಮಿಲಿಯನ್ ಡಾಲರ್‌ಗೆ ಬೇಡಿಕೆ ಇಡಲಾಗಿತ್ತು. ಸರ್ಕಾರ ಹಣ ಪಾವತಿಸಲು ವಿಫಲವಾದರೆ ರಾಜ್ಯದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಇಮೇಲ್ ಬೆದರಿಕೆ ಹಾಕಲಾಗಿತ್ತು.
ಅಷ್ಟೇ ಅಲ್ಲದೆ ಇತ್ತೀಚೆಗೆ ಬೆಂಗಳೂರಿನ 15ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಕೂಡ ಬಾಂಬ್ ಬೆದರಿಕೆ ಹಾಕಲಾಗಿತ್ತು. ಬಸವೇಶ್ವರ ನಗರದ ಖಾಸಗಿ ಶಾಲೆಗಳಿಗೆ ಹಾಗೂ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಗೂ ಕಿಡಿಗೇಡಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದರು.