ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಬಿಎನ್‌ಎಚ್‌ಎಸ್ ಮನವಿ

Hasiru Kranti
ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಬಿಎನ್‌ಎಚ್‌ಎಸ್ ಮನವಿ
WhatsApp Group Join Now
Telegram Group Join Now
ಬಳ್ಳಾರಿ,ಡಿ.16.. ಬಳ್ಳಾರಿ ನಗರದಲ್ಲಿ ಸಮರ್ಪಕ ನಾಗರಿಕ ಸೌಲಭ್ಯಗಳಿಗಾಗಿ ಒತ್ತಾಯಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿತು.
ನಗರವು, ಕಳೆದ ಮೂರು ದಶಕಗಳಿಂದ ನಾಲ್ಕು ದಿಕ್ಕುಗಳಲ್ಲಿ ವಿಸ್ತಾರಗೊಳ್ಳುತ್ತಲಿದೆ. ಜನಸಂಖ್ಯೆಯು ಗಣನೀಯವಾಗಿ ಹೆಚ್ಚಿದೆ. ಲಘು ವಾಹನಗಳ ಸಂಖ್ಯೆ ಹೆಚ್ಚಿದೆ. ಬಳ್ಳಾರಿ ಸುತ್ತಲೂ ಬೃಹತ್ ಮತ್ತು ಸಣ್ಣ ಕೈಗಾರಿಕೆಗಳ ಹೆಚ್ಚಳದಿಂದ ನಗರದ ಮುಖಾಂತರ ೫೦-೬೦ ಟನ್ ಭಾರದ ನೂರಾರು ವಾಹನಗಳು ದಿನಂಪ್ರತಿ ಚಲಿಸುತ್ತವೆ. ಆದರೆ ಈ ಬೆಳವಣಿಗೆಗೆ ತಕ್ಕಂತೆ, ಸೂಕ್ತ ನಾಗರಿಕ ಸೌಲಭ್ಯಗಳು ಸೃಷ್ಟಿಯಾಗಿಲ್ಲ. ಬಳ್ಳಾರಿ ನಗರವು ಹತ್ತಾರು ಸಮಸ್ಯೆಗಳ ಆಗರವಾಗಿದೆ. ಕುಣಿಗಳಿಂದ  ತುಂಬಿರುವ ರಸ್ತೆಗಳು, ನಗರಾದ್ಯಂತ ದೂಳಿನ ವಾತಾವರಣ, ಸ್ವಚ್ಛತೆಯ ಅಭಾವ, ಬೀದಿ ನಾಯಿಗಳ ಬಿಡಾಡಿ ದನಗಳ ಉಪಟಳ, ಎದ್ದು ಕಾಣುತ್ತದೆ ಎಂದಿದ್ದಾರೆ.
ಬಳ್ಳಾರಿ ನಗರದಲ್ಲಿ ಆಧ್ಯತೆಗನುಗುಣವಾಗಿ, ಯೋಜನಾಬದ್ಧವಾಗಿ ಯಾವ ಕಾಮಗಾರಿಗಳು ನಡೆಯುತ್ತಿಲ್ಲವೆನ್ನುವುದು ಹಾಗೂ ನಿರ್ವಹಣೆ ಎನ್ನುವುದು ಶೂನ್ಯವಾಗಿದೆ ಎನ್ನುವುದು ನಾಗರಿಕರ ಅನಿಸಿಕೆಯಾಗಿದೆ.
ನಗರಕ್ಕೆ ಕುಡಿಯುವ ನೀರಿನ ಯೋಜನೆಗೆ ೧೬೦ ಕೋಟಿ ರೂಪಾಯಿಗಳನ್ನು ವಿನಿಯೋಗಿಸಿದರೂ ಇಂದಿಗೂ ಕುಡಿಯುವ ನೀರಿನ ನಳಗಳಲ್ಲಿ ಚರಂಡಿ ನೀರು ಮಿಶ್ರಣವಾಗಿ ಬರುತ್ತದೆ ಎಂದು ಜನತೆಯ ದೂರು ಕೇಳಿಬರುತ್ತಿದೆ ಎಂದಿದೆ.
ನಗರಕ್ಕೆ ಅತ್ಯಾವಶ್ಯಕವಾದ ವರ್ತುಲ ರಸ್ತೆ ಇಲ್ಲಿಯವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಟ್ರಾಫಿಕ್ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅವಶ್ಯಕವಾದ ರೈಲ್ವೆ ಮೇಲ್ಸೇತುವೆ ಅಗಲೀಕರಣ, ಬಸ್-ಬೇಗಳು, ಸಾರ್ವಜನಿಕ ಪಾರ್ಕಿಂಗ್ ವ್ಯವಸ್ಥೆ ಮಾಡದೇ, ಸಾರ್ವಜನಿಕರ ಕೋಟ್ಯಾಂತರ ರೂಪಾಯಿ ವಿನಿಯೋಗಿಸಿ, ಅವೈಜ್ಞಾನಿಕವಾದ ಪ್ರತಿಗಳಿಗೆಯಲ್ಲಿ ಟ್ರಾಫಿಕ್‌ಗೆ ಅಡ್ಡಿಯಾಗುವ ರಾಯಲ್ ಸರ್ಕಲ್ ನಿರ್ಮಾಣ ಮಾಡಲಾಗಿದೆ. ಇದಲ್ಲದೇ ಆದ್ಯತೆರಹಿತವಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಎಸ್.ಪಿ. ಸರ್ಕಲ್ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ.
ಆದ್ದರಿಂದ ನಗರದ ಸಮಸ್ಯೆಗಳ ಪರಿಹರಿಸುವ ನಿಟ್ಟಿನಲ್ಲಿ ಜನತೆಯ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಆದ್ಯತೆಯ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಬಳ್ಳಾರಿ ನಾಗರಿಕ ಹೋರಾಟ ಸಮಿತಿಯು ಆಗ್ರಹಿಸಿದೆ.
ಬೇಡಿಕೆ: ಕೆಟ್ಟು ಹಳ್ಳ ಹಿಡಿದಿರುವ ರಸ್ತೆಯಾದ ಸಂಗಮ್ ಸರ್ಕಲ್‌ನಿಂದ ಹಳೇ ಕೆ.ಇ.ಬಿ. ಕಛೇರಿಯವರೆಗೆ ರಸ್ತೆ ನಿರ್ಮಾಣ ಮಾಡಬೇಕು. ಬಳ್ಳಾರಿ ನಗರಕ್ಕೆ ಅವಶ್ಯಕವಾದ ವರ್ತುಲ ರಸ್ತೆ ನಿರ್ಮಿಸಿ, ಅಲ್ಲಿಯವರೆಗೆ ಹಗಲಿನಲ್ಲಿ ನಗರದಲ್ಲಿ ಭಾರಿ ವಾಹನಗಳ ಚಲನೆಗೆ ನಿರ್ಬಂಧ ಮಾಡಬೇಕು. ವಡ್ಡರಬಂಡ ಮೋರಿಗೆ ಸಮರ್ಪಕವಾದ ಸೇತುವೆ ನಿರ್ಮಿಸಬೇಕು. ಕುಡಿಯುವ ನೀರಿನ ನಲ್ಲಿಯಲ್ಲಿ ಚರಂಡಿ ನೀರು ಸೇರಿಕೊಳ್ಳದಂತೆ ಮಾಡಲು ತುರ್ತಾಗಿ ಕ್ರಮಕೈಗೊಳ್ಳಬೇಕು. ರೇಡಿಯೋ ಪಾರ್ಕ್ನ ಸ್ವತಂತ್ರ ನಗರದಲ್ಲಿ ರಾಜಕಾಲುವೆ ಹಾಗೂ ಹೊರ ಚಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ, ಹಾಗೂ ಇತರೆಡೆಗಳಲ್ಲಿ ಹೊರ ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ನಗರಪಾಲಿಕೆಗೆ ಅವಶ್ಯಕ ಸಂಖ್ಯೆಯಲ್ಲಿ ಸಫಾಯಿ ಕರ್ಮಚಾರಿಗಳನ್ನು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಬಳ್ಳಾರಿ ನಗರದಲ್ಲಿ ಈಗಾಗಲೇ ಕೈಗೊಂಡ ಕಾಮಗಾರಿಗಳನ್ನು ಸುಧಾಕ್ರಾಸ್ ಸೇತುವೆ ಸಹಿತವಾಗಿ ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಬಳ್ಳಾರಿ ನಗರದಲ್ಲಿ ಯಾವುದೇ ಕಾಮಗಾರಿ ಕೈಗೊಂಡರೂ, ಕಾನೂನುಬದ್ಧವಾಗಿ ಸಾರ್ವಜನಿಕರಿಗೆ ಗೋಚರವಾಗುವ ಸ್ಥಳದಲ್ಲಿ ಎಲ್ಲಾ ವಿವರಗಳನ್ನು (ಗುತ್ತಿಗೆದಾರರ ಹೆಸರು, ವೆಚ್ಚ, ಕಾಲಾವಧಿ ಕಾಮಗಾರಿ ವಿವರಗಳ) ಫಲಕಗಳನ್ನು ಹಾಕಬೇಕು. ಬೀದಿ ನಾಯಿಗಳು ಹಾಗೂ ಬಿಡಾಡಿ ದನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಸತ್ಯನಾರಾಯಣಪೇಟೆ ಕೆಳ ಸೇತುವೆಯಲ್ಲಿ ಚರಂಡಿ ಹರಿಯದಂತೆ ಮಾಡಲು ಸೂಕ್ತಕ್ರಮ ಕೈಗೊಳ್ಳಬೇಕು.
ಈ ಸಂದರ್ಭದಲ್ಲಿ ಸಂಚಾಲಕ ಆರ್.ಸೋಮಶೇಖರಗೌಡ,  ಕಾರ್ಯಕಾರಿ ಸಮಿತಿಯ ಡಾ|| ಪ್ರಮೋದ್, ಶಾಂತಾ, ನಾಗರತ್ನ,  ಶರ್ಮಾಸ್, ಸುರೇಶ್ ಜಿ, ವಿದ್ಯಾ, ಶಾಂತಿ, ಜಾಫರ್,  ಬಾಬು,  ಚಂದ್ರಶೇಖರ್ ಅಬ್ಬಾಸ್, ರಮೇಶ್, ಉಮಾಮಹೇಶ್, ಶಬ್ಬೀರ್, ಆಂಥೋನಿ ತಿಳಿಸಿದರು.
WhatsApp Group Join Now
Telegram Group Join Now
Share This Article