ವಿಜಯಪುರ ಜಿಲ್ಲೆಯ ಪಂಚಮಸಾಲಿ ಸಮಾಜದ ಸಂಘಟನೆಯಲ್ಲಿ ಕೇಳಿ ಬರುವ ಬಹು ದೊಡ್ಡ ಹೆಸರು ಅದು ಬಿ ಎಂ ಪಾಟೀಲ ದೇವರಹಿಪ್ಪರಗಿ ಅವರದು. ಮಡಿವಾಳ ಮಾಚಿದೇವರ ಜನ್ಮಭೂಮಿ ಐತಿಹಾಸಿಕ ದೇವರ ಹಿಪ್ಪರಗಿಯಲ್ಲಿ ಮೇ 30 1958 ರಂದು ಜನಿಸಿದ ಶ್ರೀಯುತರು ಬಾಲ್ಯದಲ್ಲಿಯೇ ತಮ್ಮ ಚುರುಕುಮತಿ ಹೊಂದಿದ್ದರು. ದೈಹಿಕ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ಇವರು ಮಾಜಿ ಸಚಿವ ಬಿ ಎಸ್ ಪಾಟೀಲ ಮನಗೂಳಿ ಅವರು ಬಸವಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ಸ್ಥಾಪಿಸಿದ ಜನತಾ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಪ್ರಾಧ್ಯಾಪಕರಾಗಿ ಸುಮಾರು 33 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ್ದಾರೆ.
ತಮ್ಮ ವೃತ್ತಿ ಬದುಕಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅವಿರತ ಸೇವೆಗಾಗಿ ಶಿಕ್ಷಣ ಇಲಾಖೆ ಕೊಡಮಾಡುವ ಬಸವನಬಾಗೇವಾಡಿ ತಾಲೂಕು ಹಾಗೂ ವಿಜಯಪುರ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.ವಿಜಯಪುರ ಜಿಲ್ಲಾಡಳಿತ ಕೊಡುವ 2025 ನೇ ಸಾಲಿನ ವಿಜಯಪುರ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಬಹುಮುಖ ಪ್ರತಿಭೆಯ ಆದರ್ಶ ಪ್ರಾಧ್ಯಾಪಕ ಪಾಟೀಲರನ್ನು ಸನ್ಮಾನಿಸಿ ಗೌರವಿಸಿ ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿವೆ
ಬಸವಾದಿ ಶರಣರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಬಿ ಎಂ ಪಾಟೀಲರು ತಮ್ಮ ವಿಶ್ರಾಂತ ಜೀವನವನ್ನು ಸಮಾಜ ಸೇವೆಗಾಗಿ ಮುಡುಪಾಗಿಟ್ಟಿದ್ದಾರೆ.ತನ್ನ ಕಾಯಕ ಶ್ರದ್ದೆಯಿಂದ ವಿಶ್ವಗುರು ಬಸವಣ್ಣನವರ ಪ್ರೀತಿಗೆ ಪಾತ್ರರಾಗಿರುವ ಕಲ್ಯಾಣ ಕ್ರಾಂತಿಯ ವೀರಗಣಾಚಾರಿ ಮಡಿವಾಳ ಮಾಚಿದೇವರ ಹೆಸರಿನಲ್ಲಿ ಪ್ರತಿಷ್ಠಾನವನ್ನು ಸ್ಥಾಪಿಸಿ ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವರಹಿಪ್ಪರಗಿ ತಾಲೂಕು ಸೇರಿದಂತೆ ವಿಜಯಪುರ ಜಿಲ್ಲೆಯಲ್ಲಿ ಸಂಘಟಿಸುವ ಮೂಲಕ ಬಸವಾದಿ ಶರಣರ ಮೌಲ್ಯಗಳನ್ನು ನಿರಂತರವಾಗಿ ಪ್ರಸಾರ ಮಾಡುತ್ತಿದ್ದಾರೆ.
ಪ್ರತಿವರ್ಷ ದೇವರಹಿಪ್ಪರಗಿಯಲ್ಲಿ ಮಾಚಿದೇವರ ಹೆಸರಿನಲ್ಲಿ ಹಮ್ಮಿಕೊಳ್ಳುತ್ತಾ ಬಂದಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಡಿನ ಸಾಧಕರಿಗೆ ವೀರಗಣಾಚಾರಿ ಮಡಿವಾಳ ಮಾಚಿದೇವ ಪ್ರಶಸ್ತಿ ಪ್ರದಾನ ಮಾಡುತ್ತ ಬಂದಿದ್ದಾರೆ. ಆ ಮೂಲಕ ಬಸವಾದಿ ಪ್ರಮಥರ ತಾತ್ವಿಕ ಚಿಂತನೆಗಳನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಹಿರಿದಾದ ಕಾರ್ಯ ಮಾಡುತ್ತಿರುವುದು ಇವರ ಕಾರ್ಯ ಚತುರತೆಗೆ ಹಿಡಿದ ಕನ್ನಡಿಯಾಗಿದೆ.
ಬಿ ಎಂ ಪಾಟೀಲರು ಸಾಮಾಜಿಕ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಜಗದ್ಗುರು 2008 ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಪಂಚಮಸಾಲಿ ಸಮಾಜದ ವಿಜಯಪುರ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ ಪಾಟೀಲರ ಮೇಲೆ ದೊಡ್ಡ ಜವಾಬ್ದಾರಿ ಒಂದನ್ನು ಹೊರಸಿದ್ದಾರೆ. ಲಿಂಗಾಯತ ಸಮಾಜದಲ್ಲಿ ದೊಡ್ಡ ಉಪಪಂಗಡವಾದ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷರಾಗಿ ಜಿಲ್ಲೆಯಲ್ಲಿ ಸಮಾಜವನ್ನು ಯಶಸ್ವಿಯಾಗಿ ಸಂಘಟಿಸುತ್ತ ಬಂದಿದ್ದಾರೆ.
ಇತ್ತೀಚಿಗೆ ನಡೆದ ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿ ಜಿಲ್ಲೆಯ ಸಮುದಾಯದ ಜನ ದೊಡ್ಡ ಪ್ರಮಾಣದಲ್ಲಿ ಪಾಲ್ಗೊಳ್ಳವಂತೆ ಮಾಡುವಲ್ಲಿ ಪಾಟೀಲರು ವಹಿಸಿದ ಶ್ರಮ ದೊಡ್ಡದು.ವಿಜಯಪುರ ಜಿಲ್ಲೆಯಲ್ಲಿ ಪಂಚಮಸಾಲಿ ಸಮಾಜವನ್ನು ಯಶಸ್ವಿಯಾಗಿ ಸಂಘಟಿಸುವ ಮೂಲಕ ಕೂಡಲ ಸಂಗಮ ಜಗದ್ಗುರುಗಳ ಪ್ರೀತಿಗೆ ಪಾತ್ರರಾಗಿದ್ದಾರೆ.ಬಸವಣ್ಣನವರ ಸಮಾಸಮಾಜದ ಚಿಂತನೆ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಆಶಯದಲ್ಲಿ ನಂಬಿಕೆ ಇಟ್ಟು ಬದುಕು ಸಾಗಿಸುತ್ತಿರುವ ಬಿಎಂಪಿ ಅವರು ಸಮಾಜದ ಎಲ್ಲ ಸಮುದಾಯದ ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ.
ಮೂಲತಃ ಕೃಷಿಕ ಮನೆತನದವರಾಗಿರುವ ಪಾಟೀಲರು ನಿವೃತ್ತಿ ನಂತರ ತಮ್ಮ ತೋಟದಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ತೋಟಗಾರಿಕೆ ಸೇರಿದಂತೆ ಹಲವು ಬೆಳೆಗಳನ್ನು ಬೆಳೆದು ಮಾದರಿ ರೈತರಾಗಿ ಗುರುತಿಸಿಕೊಂಡಿದ್ದಾರೆ.
ಪಾಟೀಲರ ಸಮಾಜಸೇವೆಯನ್ನು ಗುರುತಿಸಿ ದೇವರಹಿಪ್ಪರಗಿ ಜನರು ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆ ಮಾಡಿ ಸಾರ್ವಜನಿಕ ಸೇವೆ ಮಾಡಲು ಕೈ ಬಲ ಪಡಿಸಿದ್ದಾರೆ. ಬಹುಮುಖಿ ಚಿಂತಕ 67 ರ ಚಿರ ಯೌವ್ವನದ ಬಿ ಎಂ ಪಾಟೀಲರಿಗೆ ಭವಿಷ್ಯದಲ್ಲಿ ಮತ್ತಷ್ಟು ಉನ್ನತ ಸ್ಥಾನ- ಮಾನಗಳು ದೊರೆತು ಆ ಮೂಲಕ ಮತ್ತಷ್ಟು ಸಮಾಜಸೇವೆ ಮಾಡುವ ಶಕ್ತಿ ದೊರೆಯಲಿ ಎಂಬುದು ಅವರ ಅಭಿಮಾನಿಗಳ ಆಶಯವಾಗಿದೆ. ಲಾಯಪ್ಪ ಇಂಗಳೆ, ಸಾಹಿತಿಗಳು 9632096714 ಗೆ ಸಂಪರ್ಕಿಸಿ