ಬಳ್ಳಾರಿ. ಅ. 30.: ಕನ್ನಡ ಚಿತ್ರರಂಗದ ಮೇರು ಪ್ರತಿಭೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪುಣ್ಯ ತಿಥಿ ಅಂಗವಾಗಿ ಇಂದು ನಗರದ ದೊಡ್ಡ ಮಾರುಕಟ್ಟೆಯ ಹತ್ತಿರ ಅಪ್ಪು ಸೇವಾ ಸಮಿತಿ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಈ ರಕ್ತದಾನ ಶಿಬಿರದಲ್ಲಿ ಇಂದು ಮುಂಜಾನೆಯಿಂದಲೇ ಹಲವಾರು ಜನ ಅಪ್ಪು ಅಭಿಮಾನಿಗಳು ಪುರುಷರು ಮಹಿಳೆಯರು ಎನ್ನದೆ ಸರತಿ ಸಾಲಿನಲ್ಲಿ ನಿಂತು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಅಪ್ಪು ಸೇವಾ ಸಮಿತಿಯ ಮಂಜು ಮಾಧ್ಯಮದ ಜೊತೆ ಮಾತನಾಡಿ, ಅಪ್ಪು ಒಬ್ಬ ಮಾನವೀಯತೆಯ ಪ್ರತಿಕವಾಗಿದ್ದರು ಮತ್ತು ಅವರು ಜೀವ ಮತ್ತು ಜೀವನವನ್ನು ರಕ್ಷಿಸಲು ಯಾವುದೇ ತ್ಯಾಗಕ್ಕೆ ಸಿದ್ಧರಾಗಿದ್ದರು ಅವರ ಅಭಿಮಾನಿಗಳಾದ ನಾವು ಇಂದು ಅಪ್ಪು ಹೆಸರಿನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಈ ಮೂಲಕ ಜೀವವನ್ನು ಉಳಿಸುವ ಮಹತ್ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಇದು ಅಪ್ಪು ಸೇವಾ ಸಮಿತಿಯ ಹೆಮ್ಮೆಯ ವಿಷಯವಾಗಿದೆ ಎಂದರು.
ಖಾಸಗಿ ಶಾಲೆಯ ಶಿಕ್ಷಕಿ ಸಂತೋಷ ಅವರು ಈ ಶಿಬಿರದಲ್ಲಿ ಸ್ವತಃ ತಾವೇ ಮುಂದೆ ಬಂದು ಆಯೋಜಕರನ್ನು ಸಂಪರ್ಕಿಸಿ ರಕ್ತದಾನವನ್ನು ಮಾಡಿದರು ಇದು ಅಪ್ಪು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಯಿತು.
ಈ ರಕ್ತದಾನ ಶಿಬಿರದಲ್ಲಿ ಮಹೇಶ್ ಮಂಜು ಸತೀಶ್ ಸೇರಿದಂತೆ ಹಲವಾರು ಅಪ್ಪು ಅಭಿಮಾನಿಗಳು ಇದ್ದರು.
ಅಪ್ಪು ಅಭಿಮಾನಿಗಳು ಇಂದು ಮುಂಜಾನೆಯಿಂದಲೇ ವಿವಿಧ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಅಪ್ಪು ಅಲಿಯಾಸ್ ಪುನೀತ್ ರಾಜಕುಮಾರ್ ಅವರ ಹೆಸರನ್ನು ಅಜರಾಮರವಾಗಿಸಲು ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ನಗರದಲ್ಲಿ ಹಮ್ಮಿಕೊಂಡಿದ್ದು ಕಂಡುಬಂದಿತು.


