ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಯತ್ನ

Ravi Talawar
ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಯತ್ನ
WhatsApp Group Join Now
Telegram Group Join Now

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕರು, ಪರಿಷತ್ ಸದಸ್ಯರು, ಮಾಜಿ ಶಾಸಕರು, ಮುಖಂಡರು ಇಂದು ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಯತ್ನ ನಡೆಸಿದರು.

ನಗರದ ಕುಮಾರಕೃಪಾ ಅತಿಥಿಗೃಹದಿಂದ ಕಾವೇರಿಗೆ ಕಾಲ್ನಡಿಗೆ ಜಾಥಾ ಮೂಲಕ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಅತಿಥಿಗೃಹದ ಮುಂಭಾಗದ ರಸ್ತೆಯಲ್ಲಿಯೇ ಬಿಜೆಪಿ ನಾಯಕರನ್ನು ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಬಿಜೆಪಿ ಮುಖಂಡರ ನಡುವೆ ವಾಗ್ವಾದ, ನೂಕಾಟ ನಡೆಯಿತು. ವಿಜಯೇಂದ್ರ, ಅಶೋಕ್, ಸುನೀಲ್ ಕುಮಾರ್ ಸೇರಿದಂತೆ ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, “ಉತ್ತಮ ಆಡಳಿತ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಿಂದ ದಿನಕ್ಕೊಂದು ಹಗರಣ ಬೆಳಕಿಗೆ ಬರುತ್ತಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ವಿಶೇಷ ತನಿಖಾ ದಳವು ಇಲ್ಲಿಯವರೆಗೂ ನಾಗೇಂದ್ರ ಅವರನ್ನು ವಿಚಾರಣೆಗೆ ಕರೆದಿಲ್ಲ. ನೂರಾರು ಕೋಟಿ ರೂಪಾಯಿಗಳನ್ನು ನಮ್ಮ ರಾಜ್ಯದಿಂದ ಹೊರರಾಜ್ಯಕ್ಕೆ ವರ್ಗಾಯಿಸಿ ಲೋಕಸಭಾ ಚುನಾವಣೆಯಲ್ಲಿ ಬೇರೆ ಬೇರೆ ರಾಜ್ಯಗಳಿಗೆ ಬಳಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇಲ್ಲಿಯವರೆಗೂ ಮಾಜಿ ಸಚಿವರನ್ನು ಯಾಕೆ ವಿಚಾರಣೆಗೆ ಕರೆದಿಲ್ಲ?, ಇವರ ಭಂಡತನ ಜಗಜ್ಜಾಹೀರಾಗಿದೆ. ಮುಖವಾಡ ಕಳಚಿ ಬಿದ್ದಿದೆ” ಎಂದು ಆರೋಪಿಸಿದರು.

“ಮತ್ತೊಂದೆಡೆ, ಮೈಸೂರಿನ ಮುಡಾ ಹಗರಣ ಬೆಳಕಿಗೆ ಬಂದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ್ದು ನೂರಾರು ಕೋಟಿ ಹಗರಣ ನಡೆದಿದ್ದರೆ, ಮುಡಾದಲ್ಲಿ ಮೂರರಿಂದ ನಾಲ್ಕು ಸಾವಿರ ಕೋಟಿ ಹಗರಣ ನಡೆದಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಜಿಲ್ಲಾಧಿಕಾರಿಗಳು ವರದಿ ಕೊಟ್ಟಿದ್ದಾರೆ. ಅವ್ಯವಹಾರ ನಡೆದಿದೆ ಎಂದು ವರದಿ ಕೊಟ್ಟು ಏಳು ತಿಂಗಳಾದರೂ ಆ ವರದಿಯನ್ನು ಜೇಬ್​ನಲ್ಲಿ ಇಟ್ಟುಕೊಂಡು ಯಾರ ಗಮನಕ್ಕೂ ತಾರದೆ ಇಂದು ಭ್ರಷ್ಟರನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ”.

WhatsApp Group Join Now
Telegram Group Join Now
Share This Article