ಬೆಂಗಳೂರು, ಅಕ್ಟೋಬರ್ 07: ಕರ್ನಾಟಕ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಸಚಿವ ಸತೀಶ್ ಜಾರಕಿಹೊಳಿ ಅವರನ್ನು ದಿಢೀರ್ ಭೇಟಿಯಾಗಿದ್ದಾರೆ. ಶಿವಾನಂದ ಸರ್ಕಲ್ ಬಳಿಯ ಸರ್ಕಾರಿ ನಿವಾಸದಲ್ಲಿ ಬಿವೈ ವಿಜಯೇಂದ್ರ ಮತ್ತು ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ. ಇಬ್ಬರು ನಾಯಕರ ಭೇಟಿ ಭಾರಿ ಕುತೂಹಲ ಮೂಡಿಸಿದೆ.
ಟೋಲ್ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದೇನೆ. ಶಿಕಾರಿಪುರ ಬಳಿ ರಾಜ್ಯ ಹೆದ್ದಾರಿಯಲ್ಲಿ ಎರಡು ಟೋಲ್ ಬರುತ್ತವೆ. ಈ ಎರಡು ಟೋಲ್ನಿಂದ ರೈತರಿಗೆ ಸಮಸ್ಯೆ ಆಗುತ್ತಿದೆ. ಟೋಲ್ ಶಿಫ್ಟ್ ಮಾಡುವಂತೆ ಸಚಿವರಿಗೆ ಮನವಿ ಮಾಡಿದ್ದೇವೆ. ಸಚಿವರು ಸಕಾರಾತ್ಮಕವಾಗಿ ಭರವಸೆ ಕೊಟ್ಟಿದ್ದಾರೆ. ಈ ವಿಚಾರವಾಗಿ ಶೀಘ್ರದಲ್ಲೇ ಸಭೆ ಕರೆಯುವುದಾಗಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.
ಬಿವೈ ವಿಜಯೇಂದ್ರ ಮತ್ತು ನನ್ನ ಭೇಟಿಗೆ ರಾಜಕೀಯ ಟಚ್ ಕೊಡೋದು ಸರಿಯಲ್ಲ. ಅದಕ್ಕೆ ಕಾರಣಗಳೂ ಏನೂ ಇಲ್ಲ. ವಿಪಕ್ಷದ ಶಾಸಕರು ಇಲಾಖೆ ಕೆಲಸ ಇದ್ದಾಗ ಬರಲೇಬೇಕಾಗುತ್ತದೆ. ಈಗ ಸಿಎಂ ಆಗುವಂತ ಅವಕಾಶವೂ ಇಲ್ಲ, ಸನ್ನಿವೇಶವೂ ಇಲ್ಲ. ಸಿಎಂ ಬದಲಾವಣೆ ವಿಚಾರವಾಗಿ ಕಳೆದ ದಸರಾದಿಂದಲೇ ಚರ್ಚೆ ಇದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬಸ್ ಅಲ್ಲಿಯೇ ನಿಂತಿದೆ, ನಾನೊಬ್ಬನೇ ಮೈಸೂರಿಗೆ ಹೋಗುತ್ತಿದ್ದೇನೆ. ಮುಡಾ ವಿವಾದ ಶುರುವಾಗಿದ್ದು ಈಗ ಮೂರು ತಿಂಗಳಿಂದ ಈಚೆಗೆ. ಅದಕ್ಕಿಂತ ಮೊದಲೂ ಹಲವು ಇಲಾಖೆಯ ಸಚಿವರನ್ನು ಭೇಟಿ ಮಾಡಿದ್ದೇನೆ. ಇಲಾಖೆ ಭೇಟಿ ಬಿಟ್ಟು ಬೇರೇನೂ ಇಲ್ಲ ಎಂದರು.