ಗುರ್ಲಾಪುರ್ : ರೈತರು ಕಬ್ಬಿನ ದರ ನಿಗದಿಗಾಗಿ ಮಾಡುತ್ತಿರುವಂತ ಹೋರಾಟಕ್ಕೆ ರಾಜ್ಯ ಸರ್ಕಾರ ಇಂದು ಸಂಜೆ 5 ಗಂಟೆ ಒಳಗಾಗಿ ಯಾವುದೇ ಒಂದು ತೀರ್ಮಾನಕ್ಕೆ ಬರಬೇಕು ಇಲ್ಲವಾದರೆ ನಾಳೆ ಕೂಡಾ ರೈತರ ಜೊತೆಗಿದ್ದು ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮಂಗಳವಾರದಂದು ಗುರ್ಲಾಪೂರ್ ಕ್ರಾಸ್ ಬಳಿ ನಡೆಯುತ್ತಿರುವ ರೈತರು ಕಬ್ಬಿನ ದರ ನಿಗದಿಗಾಗಿ ಮಾಡುತ್ತಿರುವ ಆರನೇ ದಿನಕ್ಕೆ ಕಾಲಿಟ್ಟ ರೈತರು ಹೋರಾಟಕ್ಕೆ ಆಗಮಿಸಿ ಮಾತನಾಡಿದವರು, ರೈತರು ಬೀದಿಗಿಳಿದು ಮಾಡುತ್ತಿರುವ ಹೋರಾಟದ ಕಿಚ್ಚು ಇಲ್ಲೇ ಆರಿಸುವಂತ ಕೆಲಸ ರಾಜ್ಯ ಸರ್ಕಾರ ಮಾಡಬೇಕು ಇಲ್ಲವಾದರೆ ಈ ಕಿಚ್ಚು ಇಡೀ ರಾಜ್ಯದಾದ್ಯಂತ ಹರಡುತ್ತದೆ, ಅದಕ್ಕೆ ಅವಕಾಶ ಮಾಡಿಕೊಡದೆ ಇವಾಗ್ಲೇ ಎಚ್ಚೆತ್ತುಕೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ರೈತರು ರಸ್ತೆಗಿಳಿದು ಹೋರಾಟ ಮಾಡುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದ ಕೂಡಲೇ ಇಲ್ಲಿಗೆ ಬರಲು ತೀರ್ಮಾನಿಸಿದ್ದು, ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಅಥವಾ ಶಿಕಾರಿಪುರದ ಶಾಸಕನಾಗಿ ಇಲ್ಲಿಗೆ ಬಂದಿಲ್ಲ. ರೈತರ ಜೊತೆಗೆ ನಿರಂತರವಾಗಿ ಹೋರಾಟ ಮಾಡಿದ ಯಡಿಯೂರಪ್ಪನವರ ಮಗನಾಗಿ ಬಂದಿದ್ದೇನೆ. ಹಾಗಾಗಿ ರೈತರು ಪರವಾಗಿ ಇರುವಂತ ಜನಪ್ರತಿನಿಧಿಗಳು ರೈತರ ಬೆಂಬಲಕ್ಕೆ ನಿಲ್ಲುವಂತಾಗಬೇಕು. ಆದರೆ ಕಳೆದ ಆರು ದಿನಗಳಿಂದ ಮಾಡುತ್ತಿರುವಂತ ರೈತರ ಹೋರಾಟದ ಸ್ಥಳಕ್ಕೆ ಬಂದು ಅವರ ಬೇಡಿಕೆ ಏನು ಎಂದು ಕೇಳಲು ಬಾರದೇ ಇರುವಂತ ಸರ್ಕಾರ ಲಜ್ಜೆಗೆಟ್ಟ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಬೀದಿಗಿಳಿದು ಹೋರಾಟ ಮಾಡುವುದು ಇದು ಮೊದಲಲ್ಲ, 2014ರಲ್ಲಿ ಇದೇ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಬೆಳಗಾವಿ ಅಧಿವೇಶನ ನಡೆಯುವಂತ ಸಂದರ್ಭದಲ್ಲಿ ರೈತರು ತಮ್ಮ ಕಬ್ಬಿನ ಬೆಳಿಗ್ಗೆ ವೈಜ್ಞಾನಿಕ ಬೆಲೆ ಸಿಗಲೇಬೇಕು ಅಂತ ಹೋರಾಟ ಮಾಡುವಾಗ ವಿಠ್ಠಲ್ ಅರಬಾವಿ ಎಂಬತ ರೈತ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಾಗ ಯಡಿಯೂರಪ್ಪನವರು ಸುಮ್ಮನೆ ಕುಂಡ್ರಲಿಲ್ಲ. ಸದನದ ಒಳಗಡೆ ಹೊರಗಡೆ ಗುಡುಗಿದ ಪರಿಣಾಮ ಇದೇ ಸಿದ್ದರಾಮಯ್ಯ ಅಂದಿನ ಮುಖ್ಯಮಂತ್ರಿಗಳಾಗಿದಾಗ 150 ರೂ, ಹೆಚ್ಚಿಗೆ ದರ ನೀಡುವಂತೆ ಅನಿವಾರ್ಯತೆ ಉದ್ಭವವಾಯಿತು ಎಂದು ನೆನಪಿಸಿದರು.
ಇಡೀ ದೇಶದಲ್ಲಿ ಎಫ್.ಆರ್.ಪಿ ದರ ಇರುವಂತದ್ದು, ಅದೇ ಮಹಾರಾಷ್ಟ್ರದಲ್ಲಿ 3400 ರೂ, ಕೊಡುತ್ತಾರೆ ಆದರೆ ಇಲ್ಲಿ ಏನಾಗಿದೆ. ಇದು ಮುಖ್ಯಮಂತ್ರಿಗಳ ಕರ್ತವ್ಯ ಅಲ್ವಾ?, ರೈತರ ಮೇಲೆ ಕಾಳಜಿ ಇರುವಂತ ಸರ್ಕಾರವಾಗಿದ್ದರೆ ಕಾರ್ಖಾನೆಗಳು ಪ್ರಾರಂಭವಾಗುವಕಿಂತ ಮುಂಚಿತವಾಗಿ ರೈತ ಮುಖಂಡರ ಹಾಗೂ ಕಾರ್ಖಾನೆ ಮಾಲೀಕರ ಸಭೆ ನಡೆಸಿ ದರ ನಿಗದಿ ಮಾಡುವಂತಹ ಕಾರ್ಯವಾಗಬೇಕಾಗಿತ್ತು. ಹಾಗಾಗಿ ಗುರ್ಲಾಪೂರ್ ಕ್ರಾಸದಲ್ಲಿ ನಡೆಯುವಂತ ರೈತರ ಚಳುವಳಿ ಇಲ್ಲಿಗೆ ಮಾತ್ರ ಸೀಮಿತವಾಗಿಲ್ಲ ಅನೇಕ ಜಿಲ್ಲೆ, ಊರುಗಳಲ್ಲಿ ಹೋರಾಟಗಳು ನಿರಂತರವಾಗಿವೆ ಎಂದರು.
ನಾಳೆ ದಿನ ನನ್ನ ಹುಟ್ಟುಹಬ್ಬ ಇದ್ದರೂ ಸಹ ನಾನು ಬೆಂಗಳೂರಿಗೆ ಹೋಗದೆ, ರೈತರ ಹೋರಾಟದ ಜೊತೆಗೆ ನಾನು ಜೊತೆಯಾಗಿ ನಿಂತು ನ್ಯಾಯ ದೊರಕಿಸುವಂತೆ ಕೆಲಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಮಾಜಿ ಶಾಸಕ ಪಿ ರಾಜೀವ , ವಿಶ್ವನಾಥ್ ಪಾಟೀಲ್, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಮಾಜಿ ಜಿಪಂ ಸದಸ್ಯ ಗೋವಿಂದ ಕೊಪ್ಪದ, ಅಡಿಗನಾಳದ ಮುತೇಶ್ವರ ಸ್ವಾಮೀಜಿ ಹಾಗೂ ವಿವಿಧ ಜಿಲ್ಲೆಯ ರೈತ ಮುಖಂಡರು ಉಪಸ್ಥಿತರಿದ್ದರು.


