ಪಣಜಿ/ಬೆಂಗಳೂರು: ಗೋವಾದ ಸಂಗೋಲ್ಡಾದಲ್ಲಿ ಕನ್ನಡಿಗರಿಗೆ ಸೇರಿದ ಮನೆಗಳನ್ನು ನೆಲಸಮಗೊಳಿಸಲಾಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಸಿದ್ದರಾಮಯ್ಯ ಅವರು, ‘ಗೋವಾದ ಸಂಗೋಲ್ಡಾದಲ್ಲಿ ಕನ್ನಡಿಗರ ಮನೆಗಳು ಧ್ವಂಸಗೊಂಡಿರುವುದು ತೀವ್ರ ಕಳವಳಕಾರಿಯಾಗಿದೆ. ಪರ್ಯಾಯ ಕ್ರಮಗಳನ್ನು ಒದಗಿಸುವವರೆಗೆ ಮುಂದಿನ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರಿಗೆ ಮನವಿ ಮಾಡುತ್ತೇನೆ. ಸ್ಥಳಾಂತರಗೊಂಡ ಕುಟುಂಬಗಳಿಗೆ ಸೂಕ್ತ ಪುನರ್ವಸತಿ ಒದಗಿಸುವಂತೆಯೂ ಕೇಳಿಕೊಳ್ಳುತ್ತೇನೆಂದು ಹೇಳಿದ್ದರು.
ಈ ಹೇಳಿಕೆ ವಿರುದ್ದ ಗೋವಾ ಬಿಜೆಪಿ ವಕ್ತಾರ ಗಿರಿರಾಜ್ ಪೈ ವೆರ್ಣೇಕರ್ ಆಕ್ರೋಶ ವ್ಯಕ್ತಪಡಿಸಿದ್ದುು, ತಮ್ಮ ರಾಜ್ಯದ ಸಮಸ್ಯೆಗಳ ಬಗ್ಗೆ ಮೊದಲು ಗಮನಕೊಡಲಿ ಎಂದಿದ್ದಾರೆ.
ಬರಗಾಲದಿಂದ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಕರ್ನಾಟಕದ ಮುಖ್ಯಮಂತ್ರಿಗೆ ತನ್ನ ಸ್ವಂತ ಜನರನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೊದಲು ತಮ್ಮ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿ ಎಂದು ಟೀಕಿಸಿದ್ದಾರೆ.
ಸಂಗೋಲ್ಡಾದಲ್ಲಿ ಅನಧಿಕೃತವಾಗಿ ನಿರ್ಮಿಸಿದ ಮನೆಗಳ ವಿರುದ್ಧ ಕಮ್ಯುನಿಡೇಡ್ ನ್ಯಾಯಾಲಯದ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಮನೆಗಳನ್ನು ನೆಲಸಮಗೊಳಿಸಲಾಗಿದೆ. ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಗೋವಾ ಮುಖ್ಯಮಂತ್ರಿ ಈಗಾಗಲೇ ಭರವಸೆ ನೀಡಿದ್ದಾರೆ ಎಂದು ಇದೇ ವೇಳೆ ತಿಳಿಸಿದ್ದಾರೆ.