ಬಿಜೆಪಿಯವರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಾಗಿತ್ತು: ಸಿಎಂ ಸಿದ್ದರಾಮಯ್ಯ

Ravi Talawar
ಬಿಜೆಪಿಯವರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಾಗಿತ್ತು: ಸಿಎಂ ಸಿದ್ದರಾಮಯ್ಯ
WhatsApp Group Join Now
Telegram Group Join Now

ಬೆಂಗಳೂರು: ಜನಸಾಮಾನ್ಯರ ಮೇಲೆ ಕಾಳಜಿ ಇದ್ದರೆ, ಬಿಜೆಪಿಯವರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಾಗಿತ್ತು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ಬಿಜೆಪಿ, ಜೆಡಿಎಸ್ ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಪ್ರತಿಭಟನೆ ಮಾಡುತ್ತಿದ್ದಾರೆ. ಪೆಟ್ರೋಲ್ ಹಾಗೂ ಡಿಸೇಲ್ ದರ ತಲಾ 3 ರೂ. ಏರಿಕೆ ಮಾಡಲಾಗಿದೆ. ಇವರು ಪ್ರತಿಭಟನೆ ಮಾಡಬೇಕಾಗಿರುವುದು ಕೇಂದ್ರ ಸರ್ಕಾರದ ವಿರುದ್ಧ. ಮೋದಿ ಪ್ರಧಾನಿ ಆದ ಮೇಲೆ ಬೆಲೆ ಕಡಿಮೆ ಮಾಡುತ್ತೇನೆ ಅಂದಿದ್ದರು. ಆದರೆ, ಅದಕ್ಕೆ ತದ್ವಿರುದ್ಧವಾಗಿ ಮೋದಿ ನಡೆದುಕೊಂಡಿದ್ದಾರೆ. ಅವರು ಪ್ರಧಾನಿ ಆದಾಗ ಪೆಟ್ರೋಲ್ ಬೆಲೆ 72.26 ರೂ. ಇತ್ತು. ಅದು ಜೂನ್ 2024ರಲ್ಲಿ 104 ರೂ. ಆಯಿತು. ಈಗ ಅದು ಸ್ವಲ್ಪ ಕಡಿಮೆ ಆಗಿದೆ. 57.28 ರೂ. ಇದ್ದ ಡಿಸೇಲ್ ಬೆಲೆಯನ್ನು 98.25 ರೂ. ಮಾಡಿದರು ಎಂದು ವಾಗ್ದಾಳಿ ನಡೆಸಿದರು.

ಮನಮೋಹನ್ ಸಿಂಗ್ ಅವರು ಪ್ರಧಾನಿ ಇದ್ದಾಗ ಕಚ್ಚಾ ತೈಲ ಬೆಲೆ ಬ್ಯಾರೆಲ್​ಗೆ 113 ಡಾಲರ್ ಇತ್ತು. ಈಗ 82.35 ಡಾಲರ್ ಇದೆ. 2015ರಲ್ಲಿ 50 ಡಾಲರ್ ಇತ್ತು. ಮೋದಿ ಕಾಲದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾದಾಗ, ಪೆಟ್ರೋಲ್ ದರ ಜಾಸ್ತಿ ಆಗಿದೆ. ಬಿಜೆಪಿಯವರು ಜನಸಾಮಾನ್ಯರ ಮೇಲೆ ಕಾಳಜಿ ಇದ್ದರೆ ಯಾರ ವಿರುದ್ಧ ಪ್ರತಿಭಟನೆ ಮಾಡಬೇಕು? ಕೇಂದ್ರ ಸರ್ಕಾರ ಜಿಎಸ್​​ಟಿ ತಂದ ಮೇಲೆ ರಾಜ್ಯ ಸರ್ಕಾರಕ್ಕೆ ತೆರಿಗೆ ಮೇಲಿನ ನಿಯಂತ್ರಣ ಕಡಿಮೆ ಆಗಿದೆ. ನಮಗೆ ಅದರಲ್ಲಿ ರಾಜ್ಯದ ಪಾಲು ಕಡಿಮೆ ಕೊಡುತ್ತಾರೆ. 2014ರಿಂದ 2015ನೇ ಹಣಕಾಸು ಆಯೋಗದವರೆಗೆ ರಾಜ್ಯಕ್ಕೆ 1.83 ಲಕ್ಷ ಕೋಟಿ ರೂ.‌ನಷ್ಟ ಆಗಿದೆ. ನಮ್ಮ ತೆರಿಗೆ ಪಾಲು ಕಡಿಮೆಯಾಗಿದೆ ಎಂದು ದೂರಿದರು.

ರಾಜ್ಯಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ಕೊಡಬೇಕು ಎಂದು ಹಣಕಾಸು ಆಯೋಗ ಹೇಳಿತ್ತು. ಅದರ ಬಗ್ಗೆ ಬಿಜೆಪಿಯವರು ಏನೂ ಮಾತನಾಡಿಲ್ಲ. ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಾದಾಗ ಮಾತನಾಡಿಲ್ಲ. ಕರ್ನಾಟಕ ಸರ್ಕಾರ ಈಗ ಪಾಪರ್ ಆಗಿದೆ ಅಂತಾರೆ‌. ಅದರ ಅರ್ಥ ಅಶೋಕ್​​ಗೆ ಗೊತ್ತಾ?. ನಾವು ಯಾವುದಾದರೂ ಸಂಬಳ ನಿಲ್ಲಿಸಿದ್ದೇವಾ?. ಬಜೆಟ್​​ನಲ್ಲಿ ಘೋಷಿಸಿದ ಹಣ ಕೊಡುವುದನ್ನು ನಿಲ್ಲಿಸಿದ್ದೇವಾ? 2014ರಲ್ಲಿ ಪೆಟ್ರೋಲ್‌ ಮೇಲೆ ಸೆಂಟ್ರಲ್ ಸೆಸ್ 9.48 ರೂ. ಇತ್ತು. ಮೇ 2020ಕ್ಕೆ ಅದು 32.98 ರೂ.ಗೆ ಏರಿಕೆ ಆಯಿತು. ಆಗ ಪ್ರತಿಭಟನೆ ಮಾಡಿದರಾ? ಆಗ ಜನಸಾಮಾನ್ಯರಿಗೆ ಹೊರೆ ಆಗಿಲ್ಲವಾ? ಎಂದು ಸಿಎಂ ಪ್ರಶ್ನಿಸಿದರು.

ಆಗ ಇವರು ಬಡವರ ಪರವಾಗಿ ಮಾತನಾಡಬೇಕಾಗಿತ್ತು. ಇವರು ನಮಗೆ ಪಾಠ ಹೇಳಿ ಕೊಡುತ್ತಾರಾ?. ಬರಗಾಲದ ಪರಿಹಾರ ಪಡೆಯಲು ನಾವು ಕೋರ್ಟ್​ಗೆ ಹೋಗಬೇಕಾಯಿತು. ಬಳಿಕ ಪರಿಹಾರ ಬಿಡುಗಡೆ ಮಾಡಿದರು?. ಬಿಜೆಪಿಯವರು ಬಡವರು, ದಲಿತರ, ಜನಸಾಮಾನ್ಯರ ವಿರುದ್ಧವಾಗಿದ್ದಾರೆ. ಗ್ಯಾರಂಟಿ ಕೊಟ್ಟಿದ್ದು ಎಲ್ಲ ಜಾತಿಯ ಬಡವರಿಗಲ್ವಾ?. ಸಂಸದರು ಈವರೆಗೆ ಅಕ್ಕಿ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದರಾ? 3 ರೂ. ಏರಿಕೆ ಮಾಡಿದರೂ ಕೂಡ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ತೈಲ ಬೆಲೆ ಕಡಿಮೆ ಇದೆ ಎಂದು ತಿಳಿಸಿದರು.

ರಾಜ್ಯದ ಅಭಿವೃದ್ಧಿಗಾಗಿ ತೆರಿಗೆ ಬೇಕಲ್ವಾ?. ನಮಗೆ ಇರುವ ತೆರಿಗೆ ಮೂಲ ಇರುವುದು ತೈಲ ಹಾಗೂ ಮದ್ಯ. ಕರ್ನಾಟಕವನ್ನು ಅಭಿವೃದ್ಧಿಗೆ ಕೊಂಡೊಯ್ಯಲು ಸಂಪನ್ಮೂಲ ಕ್ರೋಢೀಕರಣ ಮಾಡಲು ಈ ರೀತಿ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ ‌ನೀಡಿದ್ದಾರೆ.

ಬಿಜೆಪಿಯವರಿಗೆ ಯಾವ ನೈತಿಕತೆ ಇದೆ? ಬಡವರ ಹೊಟ್ಟೆಗೆ ಹೊಡೆಯುವುದೇ ಅವರ ಕೆಲಸವಾಗಿದೆ. ಬಿಜೆಪಿ ಇರುವ ರಾಜ್ಯಗಳಲ್ಲಿ ನಮಗಿಂತ ತೈಲ ಬೆಲೆ ಹೆಚ್ಚು ಇದೆ. ನಮ್ಮ ತೆರಿಗೆ ನಮ್ಮ ಹಕ್ಕು ಹೋರಾಟ ಮಾಡಿದ್ದೇವೆ. ಬರಗಾಲ ಬಂದಿದ್ದಾಗ ಮಾತನಾಡಿಲ್ಲ. ಅಶೋಕ್​ಗೆ ಆರ್ಥಿಕತೆ ಗೊತ್ತಿದೆಯಾ, ಇಲ್ವೋ ಗೊತ್ತಿಲ್ಲ. ಕುಮಾರಸ್ವಾಮಿ ಅವರು ದಂಗೆ ಏಳಿ ಅಂತಾರೆ. ಕೇಂದ್ರದ ಸಚಿವರಾಗಿ ಹಾಗೆ ಅನ್ನಬಹುದಾ? ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ತೈಲ ಬೆಲೆ ಏರಿಕೆಯಿಂದ ನಮಗೆ 3,000 ಕೋಟಿ ರೂ. ಹೆಚ್ಚು ಬರಬಹುದು ಅಷ್ಟೇ. ಆದರೆ, ಗ್ಯಾರಂಟಿ ಯೋಜನೆಗೆ ಸುಮಾರು 60,000 ಕೋಟಿ ರೂ. ಬೇಕಾಗುತ್ತೆ. ನಾವು ಅದನ್ನು ಶ್ರೀಮಂತರಿಗೆ ಕೊಡುತ್ತಿದ್ದೇವಾ?. ಉದ್ಯಮಿಗಳ ಸಾಲಮನ್ನಾ ಮಾಡುತ್ತೇವಾ?. ನನ್ನ ಬಳಿ ಬಂದು ಯಾವ ಶಾಸಕರೂ ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ ಅಂತ ಹೇಳಿಲ್ಲ ಎಂದರು.

WhatsApp Group Join Now
Telegram Group Join Now
Share This Article