ಬೆಂಗಳೂರು, ಜುಲೈ 24: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಿರುದ್ಧ ನಿಗಮದ ಮಾಜಿ ಪದನಿಮಿತ್ತ ನಿರ್ದೇಶಕ ಕಲ್ಲೇಶ್ ಬಿ ದೂರು ನೀಡಿದ್ದಾರೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ, ಐಟಿ ದುರ್ಬಳಕೆ ಮಾಡಿಕೊಂಡಿದೆ ಅಂತ ಆರೋಪಿಸಿ, ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಬಿಜೆಪಿ ಪ್ರತಿಕ್ರಿಯಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ “ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯನವರಿಂದ ಇನ್ನಿಲ್ಲದ ದುಸ್ಸಾಹಸ. ಇಂದು ಇಡಿ ವಿರುದ್ಧ ಕಂಪ್ಲೇಂಟ್ ಮಾಡಿರುವ ಕಲ್ಲೇಶ್ ಬಿ ಎಂಬ ಅಧಿಕಾರಿಯನ್ನು ಕಳೆದ ತಿಂಗಳು ಭ್ರಷ್ಟಾಚಾರದ ಆರೋಪದಡಿ ರಾಜ್ಯ ಸರ್ಕಾರ ಅಮಾನತ್ತಿನಲ್ಲಿಟ್ಟಿತ್ತು. ಇಡಿ ತನಿಖೆಯಲ್ಲಿ ಸಿಎಂ ಹಾಗೂ ಡಿಸಿಎಂಗಳ ಕೈವಾಡದ ಬಗ್ಗೆ ಈ ಅಧಿಕಾರಿ ಮಾಹಿತಿ ನೀಡಿದ್ದಾನೆ ಎಂಬ ವಿಷಯ ತಿಳಿದ ತಕ್ಷಣ ಕಾಂಗ್ರೆಸ್ ನಾಟಕ ಒಂದನ್ನು ಆರಂಭಿಸಿದೆ” ಎಂದು ವಾಗ್ದಾಳಿ ಮಾಡಿದೆ.