ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತು. ಫ್ರೀಡಂಪಾರ್ಕ್ನಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿದರು.
ಬಿಜೆಪಿ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು: ಸಿಎಂ ಮನೆಗೆ ಮುತ್ತಿಗೆ ಹಾಕಲು ಎತ್ತಿನಗಾಡಿಯಲ್ಲಿ ತೆರಳುತ್ತಿದ್ದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಮಾರ್ಗ ಮಧ್ಯೆಯೇ ತಡೆದರು. ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ, ವಿಧಾನಪರಿಷತ್ ಸದಸ್ಯರಾದ ಸಿ.ಟಿ.ರವಿ, ರವಿಕುಮಾರ್, ಮಾಜಿ ಸಂಸದ ಮುನಿಸ್ವಾಮಿ ಮತ್ತಿತರ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಬಸ್ನಲ್ಲಿ ಕರೆದೊಯ್ದರು.
ಜನವಿರೋಧಿ ನಿರ್ಧಾರ ಹಿಂಪಡೆಯುವ ವರೆಗೆ ಬಿಜೆಪಿ ಹೋರಾಟ – ಬಿ.ವೈ.ವಿಜಯೇಂದ್ರ: ಇದಕ್ಕೂ ಮುನ್ನ ಫ್ರೀಡಂಪಾರ್ಕ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು, ಪೆಟ್ರೋಲ್ ಬೆಲೆ ಲೀಟರ್ಗೆ 3 ರೂ, ಡೀಸೆಲ್ ಬೆಲೆ 3.5 ರೂ. ಹೆಚ್ಚಳ ಅವಿವೇಕದ ಮತ್ತು ಜನವಿರೋಧಿ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರ ಕೈಗೊಂಡಿದೆ. ಏರಿಸಿದ ದರ ಹಿಂಪಡೆಯುವವರೆಗೆ ಬಿಜೆಪಿ ಹೋರಾಟ ಮಾಡಲಿದೆ ಎಂದು ಹೇಳಿದರು.
ನಾವು ವಿಪಕ್ಷವಾಗಿ ಜನರ ಪರವಾಗಿ ಧ್ವನಿ ಎತ್ತಬೇಕಿದೆ. ರಾಜ್ಯದ ರೈತರು, ಬಡವರು, ಜನಸಾಮಾನ್ಯರಿಗೆ ನ್ಯಾಯ ಕೊಡಿಸುವ ಕೆಲಸವನ್ನು ನಾವು-ನೀವೆಲ್ಲರೂ ಸೇರಿ ಮಾಡಬೇಕಿದೆ ಎಂದು ತಿಳಿಸಿದರು. ಜನವಿರೋಧಿ ಸರ್ಕಾರ ಮತ್ತು ಜನವಿರೋಧಿ ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಹೋರಾಟ ಕೈಗೆತ್ತಿಕೊಂಡಿದೆ ಎಂದು ತಿಳಿಸಿದರು.
ಬೆಲೆ ಏರಿಕೆ, ಹಣದುಬ್ಬರದ ಕುರಿತು ತಿಳಿದಿದ್ದರೂ ಅನುಭವಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಲೋಕಸಭಾ ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ದರ ಹೆಚ್ಚಳದ ಈ ಜನವಿರೋಧಿ ನಿರ್ಧಾರ ಮಾಡಿದ್ದು, ಇದು ಅಕ್ಷಮ್ಯ ಅಪರಾಧ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಎರಡು ನಾಲಿಗೆ ಎಂದು ಟೀಕಿಸಿದರು. ಹಿಂದೆ ಅವರು ವಿರೋಧ ಪಕ್ಷದಲ್ಲಿದ್ದಾಗ ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಯನ್ನು ಖಂಡಿಸಿದ್ದರು ಎಂದು ಸಿದ್ದರಾಮಯ್ಯ ಅವರ ವಿಡಿಯೋ ಪ್ರದರ್ಶನ ಮಾಡಿದರು.
ಸಿದ್ದರಾಮಯ್ಯಗೆ ಮಾನಮರ್ಯಾದೆ ಇಲ್ಲದ ಕಾಂಗ್ರೆಸ್ಸಿಗೆ ಸೇರಿದವರು. ಸಿದ್ರಾಮಣ್ಣ ನುಂಗಣ್ಣ ಎಂದರಲ್ಲದೆ, ವಾಲ್ಮೀಕಿ ನಿಗಮಕ್ಕೆ ಸೇರಿದ 187 ಕೋಟಿ ನುಂಗಿದ ನಾಗೇಂದ್ರರ ವಿಕೆಟ್ ಪತನವಾಗಿದೆ. ಈಗ ಎರಡನೇ ವಿಕೆಟ್ ಸಿದ್ದರಾಮಯ್ಯ ಅವರದ್ದು ಎಂದು ತಿಳಿಸಿದರು.