ಮೈಸೂರು: ಸರ್ಕಾರಿ ಜಾಗದಲ್ಲಿ ಸಂಘ–ಸಂಸ್ಥೆಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಬಗ್ಗೆ 2013ರಲ್ಲಿ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಆದೇಶ ಹೊರಡಿಸಿದ್ದರು. ಈ ಆದೇಶ ಆರ್ಎಸ್ಎಸ್ಗೂ ಅನ್ವಯವಾಗುತ್ತದೆ. ಅದನ್ನೇ ನಾವು ಈಗ ನಾವು ಜಾರಿಗೊಳಿಸಿದ್ದೇವೆ, ಆಗ ವಿರೋಧ ಮಾಡದವರು ಈಗ ಯಾಕೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಶನಿವಾರ ಮೈಸೂರಿನಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಟಾರ್ಗೆಟ್ ಆರ್ ಎಸ್ ಎಸ್ ಅಲ್ಲವೇ ಅಲ್ಲ, ಶಾಲಾ ಆವರಣದಲ್ಲಿ ಸಂಘ–ಸಂಸ್ಥೆಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಬಗ್ಗೆ 2013ರಲ್ಲಿ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ ಸುತ್ತೋಲೆ ಹೊರಡಿಸಿದ್ದರು.
ಅದನ್ನೇ ನಾವೀಗ ಜಾರಿಗೊಳಿಸುತ್ತಿದ್ದೇವೆ. ಸರ್ಕಾರದ ಆದೇಶ ಕೇವಲ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಮಾತ್ರವಲ್ಲ, ಎಲ್ಲಾ ಸಂಘ–ಸಂಸ್ಥೆಗಳ ಚಟುವಟಿಕೆಗಳಿಗೂ ಅನ್ವಯವಾಗುತ್ತದೆ. ಸರ್ಕಾರಿ ಶಾಲೆ, ಆಟದ ಮೈದಾನ, ಸರ್ಕಾರಿ ಸ್ಥಳಗಳು, ಉದ್ಯಾನವನಗಳಲ್ಲಿ, ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಎಲ್ಲಾ ಸಂಘ–ಸಂಸ್ಥೆಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ ಎಂದರು.