ಬೆಂಗಳೂರು, ಆಗಸ್ಟ್ 4: ಕೆಆರ್ಎಸ್ ಡ್ಯಾಂಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂಬ ಸಚಿವ ಡಾ. ಹೆಚ್ಸಿ ಮಹದೇವಪ್ಪ ಹೇಳಿಕೆಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಈ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಮೊದಲಿನಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಮನೆತನದ ಬಗ್ಗೆ ಅಸಡ್ಡೆಯಿಂದ ನಡೆದುಕೊಂಡಿದ್ದಾರೆ, ಮೊನ್ನೆಯಷ್ಟೇ ನಾಲ್ವಡಿ ಅವರಿಗಿಂತಲೂ ತಮ್ಮ ತಂದೆಯೇ ಮಿಗಿಲು ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಹೇಳಿಕೊಂಡಿದ್ದರು. ಇದೀಗ ಮುಖ್ಯಮಂತ್ರಿಗಳ ಹಿಂಬಾಲಕ ಸಚಿವ ಹೆಚ್. ಸಿ. ಮಹದೇವಪ್ಪ ಅವರು ಕನ್ನಂಬಾಡಿ ಕಟ್ಟೆಗೆ ಮೊದಲು ಅಡಿಪಾಯ ಹಾಕಿದ್ದು ಟಿಪ್ಪು ಎಂದು ಹೇಳುವ ಮೂಲಕ ಕನ್ನಂಬಾಡಿ ಕಟ್ಟೆ (ಕೃಷ್ಣರಾಜ ಸಾಗರ)ನಿರ್ಮಾಣದ ಹಿಂದಿನ ತ್ಯಾಗ- ಪರಶ್ರಮದ ಇತಿಹಾಸ ಹಾಗೂ ನಾಲ್ವಡಿಯವರ ಕೊಡುಗೆಯನ್ನು ಅಪಮಾನಿಸಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.
‘ಕನ್ನಂಬಾಡಿ ಕಟ್ಟೆಗೆ (ಕೃಷ್ಣರಾಜ ಸಾಗರ) ರೋಚಕ ಇತಿಹಾಸವಿದೆ, ತ್ಯಾಗ ಮೆರೆದ ಹೆಗ್ಗಳಿಕೆ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನಸು ಹಾಗೂ ಪರಿಶ್ರಮದ ಫಲವೇ ಕನ್ನಂಬಾಡಿ ಕಟ್ಟೆ (ಕೃಷ್ಣರಾಜ ಸಾಗರ) ನಿರ್ಮಾಣವಾಯಿತು ಎಂಬುದಕ್ಕೆ ಐತಿಹಾಸಿಕ ದಾಖಲೆಗಳಿವೆ, ತ್ಯಾಗ, ಕೊಡುಗೆಗಳ ಹೆಗ್ಗಳಿಕೆಯಿದೆ. 1908 ರಲ್ಲಿ ರೂಪಿಸಲಾದ ಯೋಜನೆಯನ್ನು ಮತ್ತಷ್ಟು ಪರಿವರ್ತಿಸಿ ಹತ್ತು ಹಲವು ಅಡ್ಡಿ ಆತಂಕ ತೊಂದರೆ ಅವಮಾನಗಳ ನಡುವೆ ಬ್ರಿಟಿಷ್ ಆಡಳಿತದಿಂದ ಅನುಮತಿ ಪಡೆದುಕೊಂಡ ಹಿನ್ನೆಲೆಯ ಪ್ರತಿ ಹೆಜ್ಜೆಗಳಿಗೂ ಪುಟ ಪುಟಗಳ ದಾಖಲೆಗಳು ಇಂದಿಗೂ ಜೀವಂತವಾಗಿವೆ’ ಎಂದು ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.