ಇಂದೋರ್,10: ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ವೇಳೆ ಬಿಜೆಪಿ ಕಚೇರಿ ಹೊತ್ತಿ ಉರಿದಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ. ಭಾನುವಾರ ರಾತ್ರಿ ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ನಾಲ್ಕು ಅಂತಸ್ತಿನ ಬಿಜೆಪಿ ಕಚೇರಿಯ ಮೇಲ್ಛಾವಣಿಗೆ ಬೆಂಕಿ ಆವರಿಸಿದ್ದು, ಪಕ್ಷದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರದ ವೇಳೆ ಪಟಾಕಿ ಸಿಡಿಸಿದ್ದರು.
ಕಟ್ಟಡದ ಮೇಲ್ಛಾವಣಿಯಲ್ಲಿದ್ದ ಪ್ಲೈವುಡ್, ಹಳೆಯ ಸೋಫಾ, ತ್ಯಾಜ್ಯ ವಸ್ತುಗಳು ಮತ್ತು ಇತರ ಪೀಠೋಪಕರಣಗಳ ತುಣುಕುಗಳಿಗೆ ಕೆಲವು ಬೆಂಕಿ ಕಿಡಿಗಳು ತಾಗಿ ಹೊತ್ತಿ ಉರಿದಿವೆ.
ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. “ಬಿಜೆಪಿ ಕಚೇರಿಯ ಕೆಳಗೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾಗ, ರಾಕೆಟ್ ಅಥವಾ ಪಟಾಕಿಗಳಿಂದ ಕಚೇರಿಯ ಮೇಲಿನ ಮಹಡಿ, 4 ನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಇಂದೋರ್ ಎಸಿಪಿ ತುಷಾರ್ ಸಿಂಗ್ ಹೇಳಿದ್ದಾರೆ.
ಸೋಫಾ ಹಾಗೂ ಕೆಲವು ತ್ಯಾಜ್ಯ ವಸ್ತುಗಳು ಅಲ್ಲಿ ಬಿದ್ದಿದ್ದರಿಂದ ಬೆಂಕಿ ಹೊತ್ತಿಕೊಂಡಿತ್ತು, ಸಮಯಕ್ಕೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಮತ್ತು ಹೆಚ್ಚಿನ ಹಾನಿಯಾಗಿಲ್ಲ ಎಂದು ಅವರು ಹೇಳಿದರು.
ಲೋಕಸಭಾ ಚುನಾವಣೆ ಮುಗಿದಿದ್ದು ಫಲಿತಾಂಶ ಹೊರಬಿದ್ದಿದೆ, ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಬಹುಮತ ಪಡೆದಿದೆ. ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.