ಬೆಳಗಾವಿ: ಪಂಚಮಸಾಲಿ ಲಿಂಗಾಯತ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್ ಖಂಡಿಸಿ ಬಿಜೆಪಿ ಶಾಸಕರು ಸುವರ್ಣಸೌಧದ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರವು ವಾಕ್ ಸ್ವಾತಂತ್ರ್ಯ, ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದು ಲಿಂಗಾಯತ ವಿರೋಧಿ ಸರ್ಕಾರ ಎಂದು ಧಿಕ್ಕಾರ ಕೂಗಿದರು. ಪ್ರಜಾಪ್ರಭುತ್ವ ಧಮನ ಮಾಡುತ್ತಿದೆ, ಸರ್ವಾಧಿಕಾರ ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ, ಅಲ್ಪಸಂಖ್ಯಾತರಿಗೆ ಕೋಟಿ ಕೋಟಿ ಲಿಂಗಾಯತರಿಗೆ ಲಾಠಿ ಏಟು ಎಂಬ ಘೋಷಣೆಗಳೊಂದಿಗೆ ಶಾಸಕರು ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ಸರ್ಕಾರ ಸ್ವಾಮಿಗಳ ಕ್ಷಮೆಯಾಚಿಸಬೇಕು. ಹಲ್ಲೆ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಈ ಬಗ್ಗೆ ನ್ಯಾಯಾಂಗ ತನಿಖೆ ಮಾಡಬೇಕು” ಎಂದು ಆಗ್ರಹಿಸಿದರು.
ಸಿಎಂ ಸಿದ್ದರಾಮಯ್ಯ ಕುಮ್ಮಕ್ಕಿನಿಂದ ಲಾಠಿ ಪ್ರಹಾರ: ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ”ಶಾಂತಿಯುತ ಪಂಚಮಸಾಲಿ ಮೀಸಲಾತಿ ಹೋರಾಟದ ಮೇಲೆ ಸಿಎಂ ಕುಮ್ಮಕ್ಕಿನಿಂದ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಈ ಮುಂಚೆನೂ ಸಿಎಂ ಆಗಿದ್ದಾಗ ಲಿಂಗಾಯತ ಸಮಾಜದ ವಿರುದ್ಧ ಸಿದ್ದರಾಮಯ್ಯ ಅವರು ಒಡೆದು ಆಳುವ ನೀತಿ ಅನುಸರಿಸಿದ್ದರು. ಇಂದು ಶಾಂತಿಯುತವಾಗಿ ಧರಣಿ ನಡೆಯುತ್ತಿರುವಾಗ ಪೊಲೀಸರನ್ನು ಛೂ ಬಿಟ್ಟಿದ್ದೀರಿ. ಸಿದ್ದರಾಮಯ್ಯ ಅವರೇ ನಿಮಗೆ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇಲ್ಲವೇ? ಎಂದು ಪ್ರಶ್ನಿಸಿದರು.
”ಮೀಸಲಾತಿ ಹೋರಾಟ ನಡೆದಾಗ ಸೌಜನ್ಯ ಇದ್ದಿದ್ದರೆ ಸಿಎಂ ಅವರು ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿಯಾಗಬೇಕಿತ್ತು. ಸಿಎಂ ಸಿದ್ದರಾಮಯ್ಯ ಅಹಂ, ದುರಹಂಕಾರದಿಂದ ನಡೆದುಕೊಳ್ಳುತ್ತಿದ್ದಾರೆ. ಅಧಿಕಾರ ಎಂಬುದು ಶಾಶ್ವತ ಅಲ್ಲ. ನೀವು ಅಧಿಕಾರವನ್ನು ಸದ್ಬಳಕೆ ಮಾಡದೇ, ಜಾತಿ, ಧರ್ಮ ಮಧ್ಯೆ ವಿಷ ಬೀಜ ಬಿತ್ತಿದ್ದೀರಿ. ಲಾಠಿ ಪ್ರಹಾರ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಸ್ವಾಮಿಗಳು ಹಾಗೂ ಪಂಚಮಸಾಲಿ ಸಮಾಜದ ಕ್ಷಮಾಪಣೆ ಕೇಳಬೇಕು. ದೌರ್ಜನ್ಯ ಮಾಡಿದ ಪೊಲೀಸರ ವಿರುದ್ಧ ಕ್ರಮ ತೆಗದುಕೊಳ್ಳಬೇಕು” ಎಂದು ಆಗ್ರಹಿಸಿದರು.