ಪ್ಯಾರಿಸ್‌ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಬಿಜೆಪಿ ಶಾಸಕಿ ಶ್ರೇಯಸಿ ಸಿಂಗ್ ಆಯ್ಕೆ

Ravi Talawar
ಪ್ಯಾರಿಸ್‌ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಬಿಜೆಪಿ ಶಾಸಕಿ ಶ್ರೇಯಸಿ ಸಿಂಗ್ ಆಯ್ಕೆ
WhatsApp Group Join Now
Telegram Group Join Now

ಜುಲೈ 26 ರಿಂದ ಪ್ಯಾರಿಸ್‌ನಲ್ಲಿ ಶುರುವಾಗಲಿರುವ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಬಿಜೆಪಿ ಶಾಸಕಿ ಶ್ರೇಯಸಿ ಸಿಂಗ್  ಆಯ್ಕೆಯಾಗಿದ್ದಾರೆ. ಈ ಹಿಂದೆ ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯನ್ ಗೇಮ್ಸ್​ ಶೂಟಿಂಗ್​ನಲ್ಲಿ ಪದಕ ಗೆದ್ದಿದ್ದ ಶ್ರೇಯಸಿ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಹಿಂದೆ ಒಲಿಂಪಿಕ್ಸ್​ಗೆ ಆಯ್ಕೆ ಮಾಡಲಾದ ಶೂಟರ್​ಗಳ ಪಟ್ಟಿಯಲ್ಲಿ ಶ್ರೇಯಸಿ ಸಿಂಗ್ ಅವರ ಹೆಸರು ಇರಲಿಲ್ಲ. ಅಲ್ಲದೆ ಪಿಸ್ತೂಲ್ ಶೂಟರ್ ವಿಭಾಗದಲ್ಲಿ ಪಾಲಕ್ ಅವರು ಅರ್ಹತೆ ಪಡೆದುಕೊಂಡಿದ್ದರು.

ಮತ್ತೊಂದೆಡೆ ಮನು ಪ್ರಭಾಕರ್ ಏರ್ ಪಿಸ್ತೂಲ್ ಮತ್ತು ಸ್ಪೋರ್ಟ್ಸ್ ಪಿಸ್ತೂಲ್ ಎರಡರಲ್ಲೂ ಅಗ್ರಸ್ಥಾನ ಗಳಿಸಿದ್ದರು. ಎರಡು ವಿಭಾಗಗಳಲ್ಲೂ ಆಯ್ಕೆಯಾಗಿದ್ದ ಮನು ಪ್ರಭಾಕರ್​, ಒಂದೇ ಕೋಟಾದಲ್ಲಿ ಎರಡು ಈವೆಂಟ್‌ಗಳಲ್ಲಿ ಸ್ಪರ್ಧಿಸಬಹುದಾಗಿದೆ. ಹೀಗಾಗಿ ಮನು ಬಳಿಯಿದ್ದ ಒಂದು ಕೋಟಾವನ್ನು ಮಹಿಳಾ ಟ್ರ್ಯಾಪ್ ಶೂಟರ್‌ಗಾಗಿ ಬದಲಿಸಲಾಗಿದೆ.

ಈ ಬದಲಾವಣೆಗಾಗಿ ನ್ಯಾಷನಲ್ ರೈಫಲ್ ಅಸೋಸಿಯೇಷನ್ ​​ಆಫ್ ಇಂಡಿಯಾ ( ಎನ್‌ಆರ್‌ಎಐ ) ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ (ISSF) ಗೆ ಮನವಿ ಸಲ್ಲಿಸಿತ್ತು. ಇದೀಗ ಈ ಮನವಿಯನ್ನು ಪುರಸ್ಕರಿಸಲಾಗಿದ್ದು, ಅದರಂತೆ ಶ್ರೇಯಸಿ ಸಿಂಗ್​ಗೆ ಮಹಿಳಾ ವಿಭಾಗದ ಶೂಟಿಂಗ್​ ಸ್ಪರ್ಧೆಯಲ್ಲಿ ಅವಕಾಶ ಲಭಿಸಿದೆ.

ಶ್ರೇಯಸಿ ಸಿಂಗ್, ದಿವಂಗತ ಮಾಜಿ ಸಚಿವ ದಿಗ್ವಿಜಯ್ ಸಿಂಗ್ ಅವರ ಪುತ್ರಿ. ಅಲ್ಲದೆ ಬಿಹಾರದ ಜಮುಯಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ. ಇದೀಗ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯುವ ಮೂಲಕ ಬಿಹಾರದಿಂದ ಆಯ್ಕೆಯಾದ ಏಕೈಕ ಸ್ಪರ್ಧಿ ಎನಿಸಿಕೊಂಡಿದ್ದಾರೆ.

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವುದು ನನ್ನ ತಂದೆಯ ದೊಡ್ಡ ಕನಸಾಗಿತ್ತು. ಇದೀಗ ಈ ಕನಸು ನನಸಾಗಿದೆ. ಒಲಂಪಿಕ್ಸ್‌ನಲ್ಲಿ ದೇಶಕ್ಕಾಗಿ ಚಿನ್ನದ ಪದಕ ಗೆಲ್ಲುವ ವಿಶ್ವಾಸವಿದೆ. ಜುಲೈ 30 ಮತ್ತು 31 ರಂದು ನಡೆಯಲಿರುವ ಸ್ಪರ್ಧೆಯಲ್ಲಿ ದೇಶಕ್ಕಾಗಿ ಚಿನ್ನದ ಪದಕವನ್ನು ಗೆಲ್ಲುವಂತೆ ಪ್ರಾರ್ಥಿಸಲು ಜಮುಯಿ ಜನತೆಗೆ ಶ್ರೇಯಸಿ ಸಿಂಗ್ ಮನವಿ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article