ದೆಹಲಿ 25: ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು ಟೀಕಿಸಿದ್ದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಉಸ್ಮಾನ್ ಘನಿಯನ್ನು ಬಿಜೆಪಿಯಿಂದ ಉಚ್ಛಾಟಿಸಲಾಗಿದೆ. ರಾಜಸ್ಥಾನದಲ್ಲಿ ಪ್ರಧಾನಿ ಮೋದಿ ಅವರ ಇತ್ತೀಚಿನ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಕ್ಕಾಗಿ ಬಿಜೆಪಿ ಘನಿಯನ್ನು ಪಕ್ಷದಿಂದ ಹೊರಹಾಕಿದೆ.
ಪಕ್ಷದ ವರ್ಚಸ್ಸಿಗೆ ಕಳಂಕ ತಂದ ಆರೋಪದ ಮೇಲೆ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಘನಿ ರಾಜ್ಯದಲ್ಲಿ 25 ಸ್ಥಾನಗಳಲ್ಲಿ 3-4 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಹೇಳಿದ್ದರು. ರಾಜ್ಯದಲ್ಲಿ ಚುನಾವಣಾ ರ್ಯಾಲಿಗಳಲ್ಲಿ ಪ್ರಧಾನಿ ಮೋದಿ ಮುಸ್ಲಿಮರ ವಿರುದ್ಧ ಮಾಡಿದ ಹೇಳಿಕೆಗಳನ್ನು ಟೀಕಿಸಿದ್ದರು.
ಪ್ರಧಾನಿ ಮೋದಿ ಅವರ ಮುಸ್ಲಿಮರ ವಿರುದ್ಧದ ಹೇಳಿಕೆಯ ಬಗ್ಗೆ ಕೇಳಿದಾಗ ಒಬ್ಬ ಮುಸಲ್ಮಾನನಾಗಿ ಅವರ ಹೇಳಿಕೆ ಬೇಸರ ತಂದಿದೆ ಎಂದಿದ್ದರು. ಬಿಜೆಪಿಗೆ ಮತ ಕೇಳಲು ಮುಸ್ಲಿಮರ ಬಳಿ ಹೋದಾಗ ಸಮುದಾಯದ ಜನರು ಪ್ರಧಾನಿ ಹೇಳಿಕೆ ಬಗ್ಗೆ ಪ್ರಶ್ನೆ ಕೇಳುತ್ತಾರೆ ನಮ್ಮಿಂದ ಉತ್ತರ ಬಯಸುತ್ತಾರೆ ಎಂದಿದ್ದರು.
ಈ ಹೇಳಿಕೆಯ ಬಗ್ಗೆ ಯಾವುದೇ ಕ್ರಮ ಕೈಗೊಂಡರೂ ನಾನು ಹೆಸರುವುದಿಲ್ಲ ಎಂದು ಘನಿ ಹೇಳಿದ್ದರು. ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪಕ್ಷದ ಶಿಸ್ತು ಸಮಿತಿ ಅಧ್ಯಕ್ಷ ಓಂಕಾರ್ ಸಿಂಗ್ ಅವರು ಘನಿಯನ್ನು ಪಕ್ಷದಿಂದ ಉಚ್ಛಾಟಿಸಿದರು. ಬಿಕಾನೇರ್ ಲೋಕಸಭಾ ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ಏಪ್ರಿಲ್ 19ರಂದು ಮತದಾನ ನಡೆದಿತ್ತು.