ಮೈಸೂರು: ನೈರುತ್ಯ ಪದವೀಧರ ವಿದಾನ ಪರಿಷತ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಘುಪತಿ ಭಟ್ ಅವರ ಪರ ಮೈಸೂರು ಸಂಸದ, ಬಿಜೆಪಿ ಮುಖಂಡ ಪ್ರತಾಪ್ ಸಿಂಹ ಪೋಸ್ಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ನಂತರ ಅದನ್ನು ಡಿಲೀಟ್ ಮಾಡಿದ್ದಾರೆ.
“ಉಡುಪಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಮವಸ್ತ್ರ ಸಂಹಿತೆಯನ್ನು ಮುರಿದು ಬುರ್ಖಾ ಧರಿಸಿ ಕ್ಲಾಸಿಗೆ ಬಂದ ಜಿಹಾದಿ ಮನಸ್ಥಿತಿಯ ವಿರುದ್ಧ ಹೋರಾಡಿದ ರಘುಪತಿ ಭಟ್ಟರಿಗೆ MLA ಟಿಕೆಟ್ಟೂ ಸಿಗಲಿಲ್ಲ, MLC ಟಿಕೆಟ್ಟನ್ನೂ ಕೊಡಲಿಲ್ಲ. ಸಾಲದೆಂಬಂತೆ ಪಕ್ಷದಿಂದಲೂ ಉಚ್ಛಾಟನೆಗೆ ಒಳಗಾಗಿ ಬುರ್ಖಾ ಸ್ಟೂಡೆಂಟ್ ಆಲಿಯಾ ಅಸ್ಸಾದಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ” ಎಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ದಾರೆ.
ಸ್ವಲ್ಪ ಹೊತ್ತಿನ ಬಳಿಕ ಅದನ್ನು ಡಿಲೀಟ್ ಮಾಡಿದ ಪ್ರತಾಪ್, ವಿಧಾನ ಪರಿಷತ್ತಿಗೆ ಸ್ಪರ್ಧಿಸಿರುವ ಆರು ಬಿಜೆಪಿ ಅಭ್ಯರ್ಥಿಗಳ ಫೋಟೋಗಳನ್ನು ಪೋಸ್ಟ್ ಮಾಡಿ, ಇವರಿಗೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅದರಲ್ಲಿ ರಘುಪತಿ ಭಟ್ ಎದುರು ನಿಂತಿರುವ ಧನಂಜಯ ಸರ್ಜಿ ಅವರೂ ಇದ್ದಾರೆ. ನಂತರ ಅದನ್ನೂ ಡಿಲೀಟ್ ಮಾಡಿದ್ದಾರೆ!