ಬೆಂಗಳೂರು: ಬಿಜೆಪಿ ಸಂಸ್ಕೃತಿಹೀನ ಪಕ್ಷ. ಅವರು ಜನಾದೇಶದಿಂದ ಸೋಲನುಭವಿಸಿದ್ದು, ವಿಧಾನಸಭೆಯಲ್ಲಿ ಹೇಗೆ ವರ್ತಿಸಬೇಕು ಎಂಬುದು ಗೊತ್ತಿಲ್ಲ. ಅವರು ಗೂಂಡಾಗಳು. ಇದು ನಾಚಿಕೆಗೇಡಿನ ವಿಚಾರ. ನಾನು ಕಳೆದ 36 ವರ್ಷಗಳಿಂದ ವಿಧಾನಸಭೆಯಲ್ಲಿದ್ದು, ಎಂದೂ ಇಂತಹ ವರ್ತನೆ ನೋಡಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳು ಹನಿಟ್ರ್ಯಾಪ್ ವಿಚಾರವಾಗಿ ಹೇಳಿಕೆ ನೀಡಿದ್ದು, ಯಾರಾದರೂ ಒಬ್ಬರು ದೂರು ನೀಡಿದರೆ ಕ್ರಮ ತೆಗೆದುಕೊಳ್ಳಬಹುದು.
ವಿಧಾನಸೌಧದಲ್ಲೇ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯೊಬ್ಬರು ದೂರಿನಲ್ಲಿ ಆರೋಪಿಸಿದ್ದಾರೆ. ಈ ವಿಚಾರ ನ್ಯಾಯಾಲಯದಲ್ಲಿದೆ. ಬಾಂಬೆ ಬಾಯ್ಸ್ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದು ಯಾವ ಕಾರಣಕ್ಕೆ? ಎಂದು ತಿರುಗೇಟು ನೀಡಿದರು.
ಅವರ ಬಾಣದ ಗುರಿ ಯಾರ ಕಡೆ ಇದೆ ಎಂದು ಕೇಳಿದಾಗ, ಅವರು ಯಾರತ್ತ ಗುರಿ ಇಟ್ಟಿದ್ದಾರೋ ಗೊತ್ತಿಲ್ಲ. ಇದು ಅವರ ಸೆಲ್ಫ್ ಗೋಲ್ ಇರಬೇಕು ಎಂದು ವ್ಯಂಗವಾಡಿದರು.