ಗೋಕಾಕ01: ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿತು. ಈ ಮೂಲಕ ನುಡಿದಂತೆ ನಡೆಯುವ ಪಕ್ಷ ಕಾಂಗ್ರೆಸ್ ಎಂದು ಸಾಬೀತು ಪಡಿಸಿತು. ಆದರೆ, 10 ವರ್ಷಗಳಿಂದ ಕೇಂದ್ರದಲ್ಲಿರುವ ಬಿಜೆಪಿ ಕೊಟ್ಟ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ. ಜನರ ಬಳಿ ಹೋಗಿ ಮತ ಕೇಳಲು ಬಿಜೆಪಿಯವರಿಗೆ ನೈತಿಕ ಹಕ್ಕಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಆರೋಪಿಸಿದರು.
ಗೋಕಾಕನಲ್ಲಿ ಮಂಗಳವಾರ ನಡೆದ ಪ್ರಜಾಧ್ವನಿ 2 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಸಹಕರಿಸಬೇಕು. ಎಲ್ಲರೂ ಕಂಕಣ ಬದ್ದರಾಗಿ, ಮತ ಕೇಳಲು ನಮಗೆ ನೈತಿಕ ಹಕ್ಕಿದೆ. ಏಕೆಂದರೆ, ಚುನಾವಣೆಗೂ ಮೊದಲು ಕಾಂಗ್ರೆಸ್ ಪಕ್ಷ ಕೊಟ್ಟಿದ್ದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಹೀಗಾಗಿ ನಮಗೆ ನೈತಿಕತೆ ಇದೆ ಎಂದು ಹೇಳಿದರು.
2014ರಲ್ಲಿ ವಿವಿಧ ಆಶ್ವಾಸನೆಗಳನ್ನು ಕೊಟ್ಟು ಅಧಿಕಾರಕ್ಕೇರಿದ್ದ ಬಿಜೆಪಿ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ. ಸ್ವಿಸ್ ಬ್ಯಾಂಕ್ ನಲ್ಲಿರುವ ಹಣ ತಂದರೆ, ಭಾರತ ದೇಶದಲ್ಲಿ ಸಾಲ ತೀರಿಸ ಬಹುದು, ಉಳಿದ ಹಣದಲ್ಲಿ ಐದು ವರ್ಷ ದೇಶದ ಬಜೆಟ್ ಮಂಡಿಸಬಹುದು. ಜೊತೆಗೆ ಚಿನ್ನದ ರಸ್ತೆ ಮಾಡಬಹುದು ಅಂತ ಚಕ್ರವರ್ತಿ ಸೂಲಿಬೆಲೆ ಎಂಬ ವ್ಯಕ್ತಿ ಹೇಳಿದ್ದೇ ಹೇಳಿದ್ದು. ಆ ಭರವಸೆಗಳೆಲ್ಲಾ ಎಲ್ಲಿ ಹೋದವು ಎಂದು ಸವದಿ ಪ್ರಶ್ನಿಸಿದರು.
ಶಿವಮೊಗ್ಗಕ್ಕೆ ಬುಲೆಟಿನ್ ಟ್ರೈನ್ ಬರಲಿಲ್ಲ. ಬದಲಿಗೆ ಯಡಿಯೂರಪ್ಪ ಮಗನ ರಾಜ್ಯಾಧ್ಯಕ್ಷ ಮಾಡಿದ್ರು. ನದಿಜೋಡಣೆ ಆಗಲಿಲ್ಲ, ಬುಲೆಟ್ ಟ್ರೈನ್ ಬರಲಿಲ್ಲ. ರೈತರ ಆದಾಯ ಡಬಲ್ ಆಗಲಿಲ್ಲ. ಈ ಭಾಗದ ಕಬ್ಬು ಬೆಳೆಗಾರರ ಹಿತರಕ್ಷಣೆ ಕಾಪಾಡಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರ ಉದ್ದಾರಕ್ಕಿಂತ ಅಂಬಾನಿ, ಅದಾನಿಯೇ ಕೇಂದ್ರ ಸರ್ಕಾರಕ್ಕೆ ಮುಖ್ಯ ಎಂದು ಆರೋಪಿಸಿದರು.
ಈ ಚುನಾವಣೆ ಪ್ರಚಾರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ ಕೇವಲ ಎರಡು ಅಭ್ಯರ್ಥಿಗಳ ನಡುವೆ ನಡೆಯುತ್ತಿರುವ ಚುನಾವಣೆ ಅಲ್ಲ. ಇಡೀ ದೇಶದ ಭವಿಷ್ಯ ಬದಲಿಸುವ ಚುನಾವಣೆ ಇದಾಗಿದೆ. ಗೋಕಾಕ್, ಅರಭಾವಿ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬೋಣ, ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸೋಣ. ಇದೊಂದು ಐತಿಹಾಸಿಕ ಚುನಾವಣೆಯಾಗಿದ್ದು, ಕೇಂದ್ರದಲ್ಲಿ ಕಾಂಗ್ರೆಸ ನೇತೃತ್ವದ ಸರ್ಕಾರ ರಚಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಕರೆ ನೀಡಿದರು.