ಕೋಲ್ಕತ್ತಾ(ಪಶ್ಚಿಮ ಬಂಗಾಳ): ಈ ಬಾರಿ ಕುತೂಹಲಕ್ಕೆ ಕಾರಣವಾಗಿದ್ದ ಪಶ್ಚಿಮ ಬಂಗಾಳ ಲೋಕಸಮರದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಭಾರೀ ಮುನ್ನಡೆ ಸಾಧಿಸಿದೆ. ಒಟ್ಟು 42 ಕ್ಷೇತ್ರಗಳ ಪೈಕಿ 32 ರಲ್ಲಿ ಟಿಎಂಸಿ ಮುಂದಿದ್ದರೆ, 9ರಲ್ಲಿ ಬಿಜೆಪಿ ಮತ್ತು ಒಂದರಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಪಡೆದಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಪ್ರಚಾರ ನಡೆಸಿದ್ದರಿಂದ ಈ ಬಾರಿ ಕಮಲ ಕಳೆದ ಬಾರಿಗಿಂತ ಹೆಚ್ಚು ಕ್ಷೇತ್ರದಲ್ಲಿ ಅರಳಲಿದೆ ಎಂದು ಅಂದಾಜಿಸಲಾಗಿತ್ತು. ಎಕ್ಸಿಟ್ ಪೋಲ್ನಲ್ಲಿಯೂ ಬಿಜೆಪಿ ಮುಂದಿತ್ತು. ಆದರೆ ಈಗ ಮತ ಎಣಿಕೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. 2019ರಲ್ಲಿ 18 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಇದೇ ಹಿನ್ನೆಲೆಯಲ್ಲಿ ಈ ಬಾರಿ ಪಶ್ಚಿಮ ಬಂಗಾಳದ ಮೇಲೆ ಕಮಲ ಪಡೆಗೆ ಭಾರೀ ನಿರೀಕ್ಷೆ ಇತ್ತು. ಆದರೆ ಪಶ್ಚಿಮ ಬಂಗಾಳ ಮತದಾರರು ತೀರ್ಪು ಬದಲಿಸಿದ್ದಾರೆ.
2019ರಲ್ಲಿ 22 ಕ್ಷೇತ್ರಗಳಲ್ಲಿ ಟಿಎಂಸಿ ಗೆದ್ದಿತ್ತು. ಆದರೆ ಈ ಬಾರಿ ಹೆಚ್ಚುವರಿಯಾಗಿ 10 ಕ್ಷೇತ್ರ ಪಡೆದು, ಪಶ್ಚಿಮ ರಾಜ್ಯದಲ್ಲಿ ತಾವೇ ಮುಂದು ಎಂಬುದನ್ನು ಮಮತಾ ತೋರಿಸಿದ್ದಾರೆ. ಸದ್ಯ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಬಹರಂಪುರ ಕ್ಷೇತ್ರದಲ್ಲಿ ಮಾಜಿ ಕ್ರಿಕೆಟಿಗ ಟಿಎಂಸಿಯ ಅಭ್ಯರ್ಥಿ ಯೂಸೂಫ್ ಪಠಾಣ್ ಹಾಗೂ ಕಾಂಗ್ರೆಸ್ನ ಅಧಿರಂಜನ್ ಚೌಧರಿ ಹಿನ್ನಡೆ ಅನುಭವಿಸಿದ್ದಾರೆ. ಇಲ್ಲಿ ಬಿಜೆಪಿಯ ಅಭ್ಯರ್ಥಿ ನಿರ್ಮಲ ಕುಮಾರ್ ಸಹಾ 1559 ಮತಗಳಿಂದ ಮುಂದಿದ್ದಾರೆ.
ದೇಶಾದ್ಯಂತ ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಮಧ್ಯಾಹ್ನ 12ರ ವೇಳೆಗೆ 543 ಕ್ಷೇತ್ರಗಳಲ್ಲಿ ಬಿಜೆಪಿ 244, ಕಾಂಗ್ರೆಸ್ 64, ಎಸ್ಪಿ 33, ಟಿಎಂಸಿ 32, ಡಿಎಂಕೆ 21 ರಲ್ಲಿ ಮುನ್ನಡೆ ಕಾಯ್ದುಕೊಂಡಿವೆ.