ಬೆಂಗಳೂರು, ಮೇ 09: ಮಂಗಳೂರು ನಗರದ ಬಜ್ಪೆ ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಗೆ ವಹಿಸುವಂತೆ ರಾಜ್ಯ ಬಿಜೆಪಿ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು ರಾಜ್ಯಪಾಲರಿಗೆ ನಾಲ್ಕು ಪುಟಗಳ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದಾರೆ.
ಕಳೆದ ಗುರುವಾರ (ಮೇ.01) ದಂದು ರಾತ್ರಿ ಮಂಗಳೂರು ನಗರದ ಬಜ್ಪೆ ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರನ್ನು ಬರ್ಬರವಾಗಿ ತಲ್ವಾರಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಮಂಗಳೂರು ಪೊಲೀಸರು ಈಗಾಗಲೇ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಸುಹಾಸ್ ಶೆಟ್ಟಿ ಕೊಲೆಗೆ ಮೂರು ತಿಂಗಳ ಹಿಂದೆಯೇ ಸಂಚು ಹೂಡಲಾಗಿತ್ತು. ಜನವರಿಯಲ್ಲೇ ಸಫ್ವಾನ್ ತಂಡಕ್ಕೆ ಫಾಜಿಲ್ (ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಹತ್ಯೆಗೊಳಗಾಗಿದ್ದ ಯುವಕ) ತಮ್ಮ ಆದಿಲ್ 3 ಲಕ್ಷ ರೂಪಾಯಿ ಹಣ ಕೊಟ್ಟಿದ್ದ. ಕೃತ್ಯಕ್ಕಾಗಿ ಒಂದು ಪಿಕ್ ಅಪ್ ವಾಹನ, ಸ್ವಿಫ್ಟ್ ಕಾರ್ ಬಳಕೆ ಮಾಡಿದ್ದ. ಅಕಸ್ಮಾತ್ ಸುಹಾಸ್ ಶೆಟ್ಟಿ ತಪ್ಪಿಸಿಕೊಂಡರೆ ಪ್ಲಾನ್ ಬಿಯನ್ನೂ ರೆಡಿ ಮಾಡಿಕೊಳ್ಳಲಾಗಿತ್ತು ಎಂಬುದು ತಿಳಿದುಬಂದಿದೆ.