ಹೊಸದಿಲ್ಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಜೈಲುಪಾಲಾಗಿರುವ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಜೈಲಿನಲ್ಲಿ ಜೀವ ಬೆದರಿಕೆ ಇದೆ ಎಂದು ಆಪ್ ಆತಂಕ ವ್ಯಕ್ತಪಡಿಸಿದೆ. ತಿಹಾರ್ನಲ್ಲಿ ಕೇಜ್ರಿವಾಲ್ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡದೇ ಅವರ ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ ಎಂದು ಆಪ್ ಗಂಭೀರ ಆರೋಪ ಮಾಡಿದೆ.
ಮಾಧ್ಯಮಗೋಷ್ಠಿ ನಡೆಸಿದ ದಿಲ್ಲಿ ಸಚಿವೆ ಆತಿಷಿ, ಕೇಜ್ರಿವಾಲ್ ಅವರನ್ನು ಜೈಲಿಗೆ ತಳ್ಳುವುದು ಮಾತ್ರವಲ್ಲ, ಅವರನ್ನು ಅನಾರೋಗ್ಯಕ್ಕೀಡು ಮಾಡಿ ಕೊಲೆಗೈಯುವ ಸಂಚು ಬಿಜೆಪಿಗಿದೆ. ಸರ್ವಾಧಿಕಾರಿ ತಮ್ಮ ವಿರೋಧಿಗಳನ್ನು ಜೈಲಿಗೆ ತಳ್ಳಿ ಅವರ ಆರೋಗ್ಯ ಹದಗೆಡುವಂತೆ ಮಾಡುತ್ತಿದ್ದಾರೆ. ಕೇಜ್ರಿವಾಲ್ಗೆ ಏನಾದರೂ ಹೆಚ್ಚು ಕಡಿಮೆ ಆದರೆ ಅದಕ್ಕೆ ಬಿಜೆಪಿಯೇ ನೇರ ಜವಾಬ್ದಾರಿ ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಕಳೆದ 30 ವರ್ಷಗಳಿಂದ ಸಕ್ಕರೆ ಖಾಯಿಲೆ ಹೊಂದಿರುವ ರೋಗಿ. ಇನ್ಸುಲಿನ್ ತೆಗೆದುಕೊಳ್ಳಲು ಅಥವಾ ವೈದ್ಯರನ್ನು ಭೇಟಿ ಮಾಡಲೂ ಅವರಿಗೆ ಬಿಜೆಪಿ ನೇತೃತ್ವದ ಸರ್ಕಾರ ಅವಕಾಶ ನೀಡುತ್ತಿಲ್ಲ. ಕೇಜ್ರಿವಾಲ್ಗೆ ಏನಾದರೂ ಸಂಭವಿಸಿದರೆ ಅದಕ್ಕೆ ಬಿಜೆಪಿಯೇ ಹೊಣೆಯಾಗಲಿದೆ.
ಸಿಎಂ ಕೇಜ್ರಿವಾಲ್ ಇಡಿ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಜಾಮೀನು ಪಡೆದ ತಕ್ಷಣ, ಬಿಜೆಪಿ ಅವರ ಜಾಮೀನು ರದ್ದುಗೊಳಿಸುವಂತೆ ದೆಹಲಿ ಹೈಕೋರ್ಟ್ಗೆ ಮೊರೆ ಹೋಗಿತ್ತು ಮತ್ತು ನಂತರ ಅವರನ್ನು ಸಿಬಿಐ ಬಂಧಿಸಿತು. ಸಕ್ಕರೆ ಖಾಯಿಲೆಯಿಂದಾಗಿ ಕೇಜ್ರಿವಾಲ್ ಅವರ ಆರೋಗ್ಯ ದಿನೇ ದಿನೇ ಕುಸಿಯುತ್ತಿದೆ. ಅವರ ತೂಕವೂ ಕ್ಷೀಣಿಸುತ್ತಿದೆ ಎಂದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.