ಬಳ್ಳಾರಿ,ಜ.29..ಮುಂಬರುವ ಕೇಂದ್ರ ಬಜೆಟ್ನಲ್ಲಿ ಬಿಸಿಯೂಟ ಕಾರ್ಮಿಕರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಿ ಅವರಿಗೆ ಎಐಯುಟಿಯುಸಿಗೆ ಸಂಯೋಜನೆಗೊAಡ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕ ಸಂಘ ಬಳ್ಳಾರಿ ತಾಲ್ಲೂಕು ಸಮಿತಿಯಿಂದ ಜಿಲ್ಲಾಧಿಕಾರಿ ಮುಖಾಂತರ ಪ್ರಧಾನಿ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿ ಮಹ್ಮದ್ ಜುಬೇರ್ ಅವರು ಮನವಿಪತ್ರಸ್ವೀಕರಿಸಿದರು.
ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ದೇಶದ ಕೋಟ್ಯಂತರ ಶಾಲಾ ಮಕ್ಕಳ ಹಸಿವು ನೀಗಿಸಿ, ಅಪೌಷ್ಟಿಕತೆ ನಿರ್ಮೂಲನೆ ಮಾಡುವಲ್ಲಿ ಬಿಸಿಯೂಟ ಯೋಜನೆಯ ಪಾತ್ರ ಅತ್ಯಂತ ದೊಡ್ಡದು. ಈ ಯೋಜನೆಯ ಬೆನ್ನೆಲುಬಾಗಿರುವ ಲಕ್ಷಾಂತರ ಬಿಸಿಯೂಟ ಕಾರ್ಮಿಕರು ಅತ್ಯಂತ ಕನಿಷ್ಠ ಗೌರವಧನದಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಬೆಲೆ ಏರಿಕೆಯ ಈ ಕಾಲದಲ್ಲಿ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂದು ತಿಳಿಸಿದೆ.
ಬಿಸಿಯೂಟ ಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ. ಅಲ್ಲಿಯವರೆಗೆ ಅವರನ್ನು ಕಾರ್ಮಿಕರು ಎಂದು ಪರಿಗಣಿಸಿ ಕನಿಷ್ಟ ವೇತನ ಮತ್ತು ಇತರ ಶಾಸನಬದ್ಧ ಸೌಲಭ್ಯಗಳನ್ನು ನೀಡಬೇಕು. ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರವು ನೀಡುವ ಅನುದಾನದ ಪಾಲನ್ನು ಹೆಚ್ಚಿಸಿ, ಕಾರ್ಮಿಕರ ಬದುಕಿಗೆ ಆರ್ಥಿಕ ಭದ್ರತೆ ಒದಗಿಸಬೇಕು. ಪ್ರಸ್ತುತ ನೀಡುತ್ತಿರುವ ಅತ್ಯಲ್ಪ ಗೌರವಧನವನ್ನು ಹೆಚ್ಚಿಸಬೇಕು ಹಾಗೂ ಬೆಲೆ ಏರಿಕೆಗೆ ಅನುಗುಣವಾಗಿ ಕಾಲಕಾಲಕ್ಕೆ ಗೌರವಧನವನ್ನು ಪರಿಷ್ಕರಿಸಬೇಕು. ಬಿಸಿಯೂಟ ಕಾರ್ಮಿಕರಿಗೆ ನಿವೃತ್ತಿ ವೇತನ ಇ.ಎಸ್.ಐ ಮತ್ತು ಭವಿಷ್ಯ ನಿಧಿ ಸೌಲಭ್ಯಗಳನ್ನು ಕಲ್ಪಿಸಬೇಕು. ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದುವ ಕಾರ್ಮಿಕರಿಗೆ ಕನಿಷ್ಠ ₹೫ ಲಕ್ಷಗಳ ಇಡಿಗಂಟು ಮೊತ್ತವನ್ನು ನೀಡಬೇಕು. ಈ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ಅಥವಾ ಎನ್.ಜಿ.ಓ ಗಳಿಗೆ ವಹಿಸಬಾರದು; ಸರ್ಕಾರವೇ ನೇರವಾಗಿ ನಡೆಸಬೇಕು. ದೇಶದ ಭವಿಷ್ಯವಾದ ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವ ಈ ಕಾರ್ಮಿಕರ ಹಿತದೃಷ್ಟಿಯಿಂದ, ಮುಂಬರುವ ಕೇಂದ್ರ ಬಜೆಟ್ನಲ್ಲಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್, ಸಲಹೆಗಾರರಾದ ನಾಗರತ್ನ, ಮುಖಂಡರಾದ ಸುರೇಶ್, ಮಂಜುಳಾ, ಸಂಧ್ಯಾ, ಅಮ್ಮ ಮೇರಿ, ಅಂಬಿಕಾ, ನೀಲಮ್ಮ, ಬಸಮ್ಮ , ಸೌಮ್ಯ, ಲತಾ ಉಪಸ್ಥಿತರಿದ್ದರು.


