ಪಾಟ್ನಾ, ಮಾರ್ಚ್ 20: ಬಿಹಾರದ ಅಧಿವೇಶನದಲ್ಲಿ ರಾಷ್ಟ್ರೀಯ ಜನತಾದಳದ (ಆರ್ಜೆಡಿ) ಶಾಸಕ ಕುಮಾರ್ ಕೃಷ್ಣ ಮೋಹನ್ ಅಲಿಯಾಸ್ ಸುದಯ್ ಯಾದವ್ ಮೊಬೈಲ್ ಫೋನ್ ಬಳಸುವುದನ್ನು ಗಮನಿಸಿದ ನಂತರ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ಬಿಹಾರದ ವಿಧಾನಸಭೆಯಲ್ಲಿ ತಮ್ಮ ತಾಳ್ಮೆ ಕಳೆದುಕೊಂಡರು. ಇದಕ್ಕೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್ ವಿಧಾನಸಭೆಯೊಳಗೆ ಮೊಬೈಲ್ ಫೋನ್ಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿದರು. ಈ ವೇಳೆ, ಮೊಬೈಲ್ ಫೋನ್ ಬಳಕೆಯಿಂದ 10 ವರ್ಷಗಳಲ್ಲಿ ಜಗತ್ತು ಅಂತ್ಯವಾಗಲಿದೆ ಎಂದು ನಿತೀಶ್ ಕುಮಾರ್ ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
“ಈ ಹಿಂದೆ ನಾನು ಕೂಡ ಬಹಳ ಮೊಬೈಲ್ ಬಳಸುತ್ತಿದ್ದೆ. ಅದರಿಂದ ತೊಂದರೆ ಆಗುತ್ತದೆ ಎಂದು ತಿಳಿದ ನಂತರ ನಾನು 2019ರಲ್ಲಿ ಮೊಬೈಲ್ ಬಳಸುವುದನ್ನು ನಿಲ್ಲಿಸಿದ್ದೇವೆ. ಮೊಬೈಲ್ ಬಳಕೆ ಅಧಿಕವಾದರೆ ಮುಂದಿನ 10 ವರ್ಷಗಳಲ್ಲಿ ಜಗತ್ತು ಅಂತ್ಯಗೊಳ್ಳುತ್ತದೆ” ಎಂದು ನಿತೀಶ್ ಕುಮಾರ್ ಹೇಳಿದ್ದರು. ಬಿಹಾರದ ಸಿಎಂ ರಾಜ್ಯ ವಿಧಾನಸಭೆಯೊಳಗೆ ಆರ್ಜೆಡಿ ಶಾಸಕರಿಗೆ ಛೀಮಾರಿ ಹಾಕುತ್ತಿರುವ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದೆ. ಇದಾದ ಬಳಿಕ ವಿರೋಧ ಪಕ್ಷಗಳ ನಾಯಕರು ವಿಧಾನಸಭೆಯೊಳಗೆ ಮೊಬೈಲ್ ಫೋನ್ ಬಳಕೆಯ ಬಗ್ಗೆ ಬಿಹಾರ ಸಿಎಂ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಇಂದು ನಿತೀಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು. “ಮೊಬೈಲ್ ಫೋನ್ಗಳಿಂದಾಗಿ 10 ವರ್ಷಗಳಲ್ಲಿ ಜಗತ್ತು ಕೊನೆಗೊಳ್ಳುತ್ತದೆ ಎಂದು ವಿಧಾನಸಭೆಯಲ್ಲಿ ಸಿಎಂ ಒಬ್ಬರು ಹೇಳುತ್ತಿದ್ದಾರೆ?! ಹುಚ್ಚುತನ ಮತ್ತು ಅಸಂಬದ್ಧ ಮಾತುಗಳಿಗೂ ಒಂದು ಮಿತಿ ಇದೆ!” ಎಂದು ಅವರು ಹೇಳಿದ್ದಾರೆ.