ಸರ್ಕಾರಿ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ:ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ

Ravi Talawar
ಸರ್ಕಾರಿ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ:ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ
WhatsApp Group Join Now
Telegram Group Join Now
ಧಾರವಾಡ : ಗ್ರಾಮದ ಜನತೆಯ ಸಮಸ್ಯೆಗಳನ್ನು ಆಲಿಸಲು ಮತ್ತು ಅವುಗಳಿಗೆ ಸೂಕ್ತ ಪರಿಹಾರ ಒದಗಿಸಲು ಕುಂದುಕೊರತೆ ಸಭೆಯನ್ನು ಆಯೋಜಿಸಲಾಗಿದೆ. ನೀರಿನ ಸಮಸ್ಯೆ, ರಸ್ತೆ ದುರಸ್ತಿ, ವಿದ್ಯುತ್ ಪೂರೈಕೆ, ನಿವೇಶನ ಸಮಸ್ಯೆಗಳು ಮತ್ತು ಇತರ ಹಲವು ವಿಚಾರಗಳ ಬಗ್ಗೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದು, ನಿಯಮಾನುಸಾರ ಎಲ್ಲ ಅಹವಾಲುಗಳನ್ನು ವಿಲೇವಾರಿ ಮಾಡಲಾಗುತ್ತದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು.
 ಧಾರವಾಡ ಜಿಲ್ಲೆಯ ಮಾದನಭಾವಿ ಗ್ರಾಮದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಗ್ರಾಮದ ಸಾರ್ವಜನಿಕರಿಂದ ಕುಂದು ಕೊರತೆಗಳನ್ನು ಸ್ವೀಕರಿಸಿ, ಸಭೆ ಜರುಗಿಸಿ, ಮಾತನಾಡಿದರು.
 ಮಾದನಭಾವಿಯ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರು ತಮ್ಮ ವಿವಿಧ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಸಾರ್ವಜನಿಕರು ಸಲ್ಲಿಸಿದರು. ಎಲ್ಲ ಮನವಿಗಳನ್ನು ತಾಳ್ಮೆಯಿಂದ ಆಲಿಸಿ, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಿಇಓ ಅವರು ಸೂಚನೆ ನೀಡಿದರು.
ಗ್ರಾಮಸ್ಥರು ಸಲ್ಲಿಸಿರುವ ಎಲ್ಲ ಮನವಿಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಅವುಗಳ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಇಂದಿನ ಮಾದನಭಾವಿ ಜನಸಂಪರ್ಕ ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಒಟ್ಟು 42 ಅರ್ಜಿಗಳನ್ನು ಸ್ವೀಕರಿಸಲಾಯಿತು. ಮತ್ತು ಅವುಗಳಲ್ಲಿ ಸುಮಾರು 23 ಅರ್ಜಿಗಳಿಗೆ ಸಂಬಂಧಪಟ್ಟ ಇಲಾಖೆಯಿಂದ ಸ್ಥಳದಲ್ಲಿಯೇ ಇತ್ಯರ್ಥಪಡಿಸಿ, ಪರಿಹರಿಸಿದರು.
ಅಧಿಕಾರಿಗಳು ಸಾರ್ವಜನಿಕರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಿಸುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಯಾವುದೇ ಕೆಲಸ ವಿಳಂಬವಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಸೂಚಿಸಿದರು.
ಸಭೆಯಲ್ಲಿ ಸರ್ಕಾರಿ ಯೋಜನೆಗಳ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದ ಅವರು, ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಇಂತಹ ಸಭೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಗ್ರಾಮೀಣ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಚಂದ್ರು ಪೂಜಾರ ಅವರು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾವಿ, ಧಾರವಾಡ ತಹಶೀಲ್ದಾರ ಡಾ. ಡಿ.ಎಚ್.ಹೂಗಾರ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ತಾಲೂಕಾ ಆರೋಗ್ಯ ಅಧಿಕಾರಿ ಡಾ. ಕೆ.ಎನ್. ತನುಜಾ, ಪಂಚಾಯತ ರಾಜ್ ಇಂಜನೀಯರಿಂಗ್ ವಿಭಾಗದ ಎಇಇ ಹನುಮಂತಪ್ಪ ತಳವಾರ, ಆರ್‍ಡಬ್ಲ್ಯೂಎಸ್ ಎಇಇ ಶಿಂಧೆ, ತಾಲೂಕಾ ಪಶುವೈದ್ಯಾಧಿಕಾರಿ ಡಾ. ಪ್ರಕಾಶ ಬೆಣ್ಣೂರ, ಕ್ರೇಡಿಲ್ ಎಇಇ ಅನ್ನಪೂರ್ಣಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮಾದನಬಾವಿ ಗ್ರಾಮ ಪಂಚಾಯತ ಅಧ್ಯಕ್ಷ ಸಂತೋಷ ಪಾಟೀಲ, ಮಾದನಬಾವಿ ಪಿಡಿಓ ಎಸ್.ಆರ್. ಬೆಟ್ಟದೂರು, ಉಪಾಧ್ಯಕ್ಷರು ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಮಾದನಬಾವಿ ಗ್ರಾಮಸ್ಥರು ಉಪಸ್ಥಿತರಿದ್ದರು.
*ಸರ್ಕಾರಿ ಶಾಲೆಗಳಿಗೆ ಭೇಟಿ:* ಮಾದನಭಾವಿ ಗ್ರಾಮದ ಸಾರ್ವಜನಿಕ ಸಭೆಯ ನಂತರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು, ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಭೇಟಿ ನೀಡಿ, ಆವರಣದಲ್ಲಿ ಉತ್ತಮ ವಾತಾವರಣ, ಶೌಚಾಲಯ, ಕುಡಿಯುವ ನೀರು ಮತ್ತು ಇತರೆ ಮೂಲಭೂತ ಸೌಕರ್ಯಗಳ ಲಭ್ಯತೆಯ ಬಗ್ಗೆ ಖುದ್ದು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗಳೊಂದಿಗೆ ಮಾತನಾಡಿ, ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.
ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಅಂಗನವಾಡಿಯಲ್ಲಿ ತಯಾರಿಸಿದ್ದ ಆಹಾರವನ್ನು ಸೇವಿಸುವ ಮೂಲಕ ಆಹಾರ ಗುಣಮಟ್ಟ ಪರಿಶೀಲಿಸಿದರು. ಪೌಷ್ಟಿಕಾಂಶ ಭರಿತ ಊಟದ ಪ್ರಾಮುಖ್ಯತೆಯನ್ನು ಸಿಬ್ಬಂದಿಗಳಿಗೆ ತಿಳಿಸಿದರು. ಮತ್ತು ಮಕ್ಕಳ ಕಲ್ಲಿಕೆಯ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆದರು.
WhatsApp Group Join Now
Telegram Group Join Now
Share This Article