ಪ್ರತಿ ತಿಂಗಳು ನಿಗದಿತ ಅವಧಿಗೆ ಹಾಸ್ಟೆಲ್ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಕಡ್ಡಾಯ; ಮಕ್ಕಳ ಭೌತಿಕ, ಮಾನಸಿಕ, ಆರೋಗ್ಯ ಸುಧಾರಣೆ ಮತ್ತು ಶೈಕ್ಷಣಿಕ ಸಾಧನೆಗೆ ಇಲಾಖೆಯ ಅಧಿಕಾರಿಗಳು ಶ್ರಮಿಸಬೇಕು: ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ
ಧಾರವಾಡ :- ಪ್ರತಿ ತಿಂಗಳು ಒಂದು ಬಾರಿ ಮೆಟ್ರಿಕ್ ಪೂರ್ವ ಬಾಲಕೀಯರ, 3 ತಿಂಗಳಿಗೊಮ್ಮೆ ಮೆಟ್ರಿಕ್ ನಂತರದ ಬಾಲಕಿಯರ ಮತ್ತು 6 ತಿಂಗಳಿಗೊಮ್ಮೆ ಬಾಲಕರ ವಸತಿನಿಲಯಗಳಿಗೆ ಭೇಟಿ ನೀಡಿ, ಪ್ರತಿ ವಿದ್ಯಾರ್ಥಿ, ವಿದ್ಯಾರ್ಥಿನೀಯರ ಆರೋಗ್ಯ ತಪಾಸಣೆ, ಆಪ್ತ ಸಮಾಲೋಚನೆಯನ್ನು ಆರೋಗ್ಯ ಇಲಾಖೆಯಿಂದ ಕಡ್ಡಾಯವಾಗಿ ಮಾಡಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುನವೇಶ ಪಾಟೀಲ ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸಮಾಜ ಕಲ್ಯಾಣ, ಬಿಸಿಎಂ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಸತಿನಿಲಯಗಳಲ್ಲಿನ ಮಕ್ಕಳ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಫಲಿತಾಂಶ ಸುಧಾರಣೆ, ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಮೂಲಭೂತ ಸೌಕರ್ಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಬಾಲಕಿಯರ ಆರೋಗ್ಯ ತಪಾಸಣೆ ಮುಖ್ಯವಾಗಿದ್ದು, ಆರೋಗ್ಯ ಇಲಾಖೆ ನೀಡುವ ವಿಟಾಮಿನ್ ಮಾತ್ರೆ, ಪೊಷಕಾಂಶಯುಕ್ತ ಊಟ, ಯೋಗ, ಬೆಳಿಗ್ಗೆ ಮತ್ತು ಸಂಜೆ ಪ್ರತಿನಿತ್ಯ ಓದುವುದು ಮಾಡುವಂತೆ ವಸತಿನಿಲಯಗಳ ನಿಲಯಪಾಲಕರು ಕಣ್ಗಾವಲು ವಹಿಸಬೇಕು. ಆರ್‍ಬಿಎಸ್‍ಕೆ ತಂಡದಿಂದ ಸರಕಾರದ ಸುತ್ತೋಲೆ ಪ್ರಕಾರ ನಿಯಮಿತವಾಗಿ ಎಲ್ಲ ವಸತಿನಿಲಯಗಳ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಿ, ಅವರ ಆರೋಗ್ಯ ಕಾರ್ಡ ಮಾಡಬೇಕು. ಪ್ರತಿ ಸಲ ತಪಾಸಣೆ ನಂತರ ಈ ಆರೋಗ್ಯ ಕಾರ್ಡದಲ್ಲಿ ತಪಾಸಣೆ ವಿವರಗಳನ್ನು ದಾಖಲಿಸಬೇಕು ಎಂದು ಅವರು ಹೇಳಿದರು.
ವಸತಿನಿಲಯಗಳಲ್ಲಿ ಶುದ್ಧ ಕುಡಿಯುವ ನೀರು, ಸುಸಜ್ಜಿತ ಶೌಚಾಲಯ, ಅಡುಗೆ ಕೋಣೆ, ಉಪಯುಕ್ತ ಗ್ರಂಥಾಲಯ ಲಭ್ಯವಿರುವಂತೆ ಇಲಾಖೆ ಅಧಿಕಾರಿಗಲು ಮುನ್ನೆಚ್ಚರಿಕೆ ವಹಿಸಬೇಕು. ಅಗತ್ಯ ಕಾಮಗಾರಿಗಳ ಪ್ರಗತಿ ಮತ್ತು ಬೇಡಿಕೆ ಸಲ್ಲಿಸಬೇಕೆಂದು ಸಿಇಓ ಅವರು ಸೂಚಿಸಿದರು.
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಉತ್ತಮ ಆಹಾರ, ಶುಚಿತ್ವ, ನೀರು, ವಿದ್ಯುತ್ ಮತ್ತು ಸುರಕ್ಷತೆ ಒದಗಿಸುವುದು. ಎಸ್.ಎಸ್.ಎಲ್. ಫಲಿತಾಂಶದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳು ಉತ್ತಮ ದರ್ಜೆಯಲ್ಲಿ ಉತ್ತೀರ್ಣಗಾಲು ವಿಶೇಷ ತರಬೇತಿ ನೀಡುವಂತೆ ತಿಳಿಸಿದರು.
ವಿದ್ಯಾರ್ಥಿ ನಿಲಯಗಳ ಮೂಲಭೂತ ಸೌಲಭ್ಯಗಳು, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ, ಬಯೋಮೆಟ್ರಿಕ್ ಹಾಜರಾತಿ, ಗುಣಮಟ್ಟದ ಆಹಾರ ವಿತರಣೆ, 8, 9 ಮತ್ತು 10 ನೇ ತರಗತಿಗೆ ಪ್ರವೇಶ ಪಡೆದ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಬಗ್ಗೆ ವಿವರಗಳನ್ನು ಪಡೆದುಕೊಂಡರು ಮತ್ತು ಸಿಬ್ಬಂದಿಯ ನಿರ್ವಹಣೆ ಹಾಸ್ಟೆಲ್ ವಾರ್ಡನ್‍ಗಳು, ಅಡುಗೆಯವರು ಮತ್ತು ಇತರ ಸಿಬ್ಬಂದಿಗಳ ಕಾರ್ಯಕ್ಷಮತೆ ಮತ್ತು ಅವರ ಕೊರತೆಗಳ ಬಗ್ಗೆ ಚರ್ಚಿಸಿದರು.
ವಸತಿನಿಲಯಗಳ ಮಕ್ಕಳಿಗೆ ನಿಲಯ ಪಾಲಕರಿಗೆ ನಿಜವಾದ ಪಾಲಕರು. ಕಲಿಕೆಯಲ್ಲಿ ಹಿಂದುಳಿದ, ಶಾಲೆಗಳಿಗೆ ಗೈರು ಹಾಜರಾಗುವ ಮಕ್ಕಳ ಬಗ್ಗೆ ಕಾಳಜಿವಹಿಸಬೇಕು. ಮಕ್ಕಳ ಸಮಗ್ರ ಅಭಿವೃದ್ಧಿಗೆ ಇಲಾಖೆಗಳ ಅಧಿಕಾರಿಗಳು ಶ್ರಮಿಸಬೇಕು. ಇದು ಅವರ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಅಧಿಕಾರಿ. ಡಾ. ಎಸ್.ಎಂ. ಹೊನಕೇರಿ ಅವರು ಮಕ್ಕಳಿಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಕಾರ್ಯಕ್ರಮಗಳನ್ನು ಸಭೆಯಲ್ಲಿ ವಿವರಿಸಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಾನುಮತಿ ಎಚ್., ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪೂರ್ಣಿಮಾ ಚೂರಿ ಅವರು ಇಲಾಖೆಯ ಪ್ರಗತಿ ಪರಿಶೀಲನಾ ವರದಿಯನ್ನು ಸಭೆಯಲ್ಲಿ ಪ್ರಸ್ತುತ ಪಡಿಸಿ,ಚರ್ಚಿಸಿದರು. ಬಿಸಿಎಂ ಇಲಾಖೆ ಅಧಿಕಾರಿ ಸ್ವಾಗತಿಸಿ, ಸಭೆ ನಿರ್ವಹಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಜಿಲ್ಲೆಯ ಎಲ್ಲ ವಸತಿನಿಲಯಗಳ ನಿಲಯಪಾಲಕರು, ತಾಲೂಕು ಮತ್ತು ಜಿಲ್ಲಾಮಟ್ಟದ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.


