ಭಾವ ಬಂಧನದ “ಭಾವ ಬಾಂದಳ”

Ravi Talawar
ಭಾವ ಬಂಧನದ “ಭಾವ ಬಾಂದಳ”
WhatsApp Group Join Now
Telegram Group Join Now
ನಾಗವರ್ಮ ಕವಿಯು “ಪ್ರತಿಭಾನಾಂ ಕಾವ್ಯ ವಿದ್ಯಾ ಪ್ರಚಯಪರಿಚಯಂ, ವೃದ್ಧ ಸೇವಾನುರಾಗಂ, ಸತತಾಭ್ಯಾಸಂ, ಪ್ರಯತ್ನಂ ನಿಯುತ ಕಾರಣಂ “ಎಂದು ಹೇಳುತ್ತಾನೆ. ಪ್ರತಿಭೆ, ಲೋಕಾನುಭವ, ಶಬ್ದ ಭಂಡಾರ, ಪ್ರಾಸ, ಉಪಮಾನ, ಉಪಮೇಯ, ಹಿರಿಯ ಕವಿಗಳ ಒಡನಾಟ, ಅಭ್ಯಾಸ, ಪ್ರಯತ್ನಗಳಿಂದ ಕವಿ ಉತ್ತಮ ಕವಿತೆ ರಚಿಸುವನು.
ಈ ನೆಲೆಯಲ್ಲಿ ಛಂದಸ್ಸು ಷಟ್ಪದಿ ರಗಳೆಗಳನ್ನು ಅಭ್ಯಾಸ ಮಾಡಿದ, ಉಪನ್ಯಾಸಕರಾಗಿ ಕನ್ನಡ ಭಾಷಾ ಬೋಧನೆ ಮಾಡಿದ ಶ್ರೀ ವಿಜಯ ಬಡಿಗೇರರವರು ಕವಿಗಳಾಗಿದ್ದಾರೆ.  ಅವರು ತಮ್ಮ ೮೭ ಕವನಗಳನ್ನು ೧೦೬ ಪುಟದ “ಭಾವಭಾಂದಳ”ದಲ್ಲಿ ಸಂಗ್ರಹಿಸಿದ್ದಾರೆ. ಕವಿಗಳೇ ಹೇಳಿರುವಂತೆ ” ನನ್ನ ಭಾವನೆಯ ಬಾಂದಳದಲ್ಲಿ ಉಂಟಾದ ಸ್ಪಂದನೆಗಳ ರೂಪವೇ ಈ ‘ಭಾವ ಬಾಂದಳ’ ದ ಕವನಗಳು. ಇವು ನನ್ನ ಸ್ವಾನುಭವ ಮತ್ತು ಕಲ್ಪನಾ ಲಹರಿಗಳ ಸರಳ ಕವನಗಳಾಗಿವೆ”.
ಆಧುನಿಕ ವಚನಕಾರರೂ ಆದ ಇವರು ತಮ್ಮ ಒಂದು ವಚನದಲ್ಲಿ ಕವನ ಹುಟ್ಟುವ ಬಗ್ಗೆ ಹೇಳುವ ರೀತಿ ಮನೋಜ್ಞವಾಗಿದೆ.
“ಭಾವ ನುಗ್ಗಿ ಬಂತು ಎದೆಯೊಳಗಿಂದ ಹಾಡಾಗಿ ದುಮ್ಮಿಕ್ಕಿ
ತತ್ತಿ ಇಟ್ಟು ಕಾವು ಕೊಟ್ಟು ಮರಿಯ ಮಾಡಿತ್ತು ಭಾವದ ಹಕ್ಕಿ
ಬರೆದುದೆಲ್ಲದರಲ್ಲಿ ಆಯ್ದು ಸೂಕ್ತವಾದುದನ್ನು ತೆಗೆದು ಹೆಕ್ಕಿ
ಸವಾರಿ ಮಾಡಿತು ವಚನವನ್ನೊ ಕವನವನ್ನೊ ಹಾಡು ಹಕ್ಕಿ
ಎಂದನಾ ಶ್ರೀ ವೀರಭದ್ರೇಶ್ವರ ಪ್ರಿಯ ವಿಜಯ “
ಹೀಗೆ ಸೃಜಿಸಿದ  ಕವನಗಳ ಈ ಸಂಕಲನದಲ್ಲಿ ನಿಸರ್ಗದ ಬಗ್ಗೆ ೧೧ ಕವನಗಳಿವೆ.
”ಹೂವ ಮಧುರ ಹೀರಿಕೊಂಡು ಚಿಟ್ಟೆ ತೃಪ್ತಿ ಹೊಂದಿತು, ಜೇನು ಕೊಟ್ಟ ಹೂವು ತನ್ನ ಕಾರ್ಯ ಮಾಡಿಕೊಂಡಿತು.”
ಗ್ರಾಮೀಣ ಬೆಳಗಿನ ಜಾವದ ಚಿತ್ರಣ ಕೊಡುವ ‘ಸೂರ್ಯೋದಯ’ ಮಾತ್ರಾ ಗಣದ ಸುಂದರ ಕವನವಾಗಿದೆ.
ಸೂರ್ಯ ಬಂದನು
ಪೂರ್ವ ದಿಕ್ಕಲಿ
ಕೆಂಪು ಬಣ್ಣದಿ ಹೊಳೆಯುತl
ಕಲ್ಲು ಬಂಡೆಗೆ
ಭೂಮಿ ಬಾನಿಗೆ
ಕೆಂಪು ಬಣ್ಣವ ಬಳಿಯುತll
 “ಜೀವನವು ನಶ್ವರವಲ್ಲವೇ ಸೂರ್ಯಾಸ್ತದಂತೆ,
ಆದರೂ ಮಧುರವಲ್ಲವೇ ಸುಂದರ ದೃಶ್ಯದಂತೆ” ಎಂಬ ಸಂದೇಶ ಸಾರುತ್ತದೆ “ಸೂರ್ಯಾಸ್ತ”ಕವನ.
.’ರೈತ’ ‘ಹೆಸರಿನ ಸುಗ್ಗಿ’ ಇವು ಅನ್ನದಾತನ ಕುರಿತಾದ ಕವನಗಳು. ‘ಮಗು’, ‘ನನ್ನ ತಮ್ಮ’ ಇವು ಮಕ್ಕಳ ಕವನಗಳು.
‘ಸಂಕ್ರಾಂತಿ’, ‘ಹೋಳಿ’, ‘ಯುಗಾದಿ’ ಹಬ್ಬಗಳ ಕುರಿತು ಬರೆದ ಕವನಗಳು.
“ಬೇಡ ಮತಾಂಧತೆ ಮಚ್ಚು
ಇರಲಿ ಸಹಮತದ ನಚ್ಚು
ಇರು ನೀ ಬೆಲ್ಲದ ಅಚ್ಚು
ಆಗ ಎಲ್ಲರಿಗೂ ಮೆಚ್ಚು” ಎಂದು ಸಹಬಾಳ್ವೆಯ ಸಂದೇಶ ಸಂದೇಶವಿದೆ ‘ದೀಪಾವಳಿ’ ಕವನದಲ್ಲಿ.
 ಕನ್ನಡ ನಾಡು ನುಡಿ ಬಗ್ಗೆ ಅಭಿಮಾನದ ಐದು ಕವನಗಳಿವೆ.
“ಎಲ್ಲಿ ನಿಲ್ಲದೆ,ಕುಗ್ಗದೆ, ಸೋಲದೆ ಮುನ್ನಡೆದಿರುವ
ನಿರಂತರ ಹಿರಿಮೆ ಗರಿಮೆಯಲಿ ಹಾರಾಡುತ್ತಿರುವ
ಕನ್ನಡದ ಅಸ್ಮಿತೆಯ ಹಕ್ಕಿಹಾರುತಿದೆ ನೋಡಿದಿರಾ ?
ಎಂಬ ಕನ್ನಡಾಭಿಮಾನದ ಕವನವಿದೆ.   ಕನ್ನಡ ಸ್ವರಗಳಿಂದ ಪ್ರಾರಂಭವಾಗುವ ಸಾಲಿನ ಕವನ “ ಕನ್ನಡಮ್ಮ” ಗಮನಾರ್ಹವಾದುದು.”ಋಣ” ದೀರ್ಘ ಪದ್ಯವು ಸಮೂಹ ಕುಟುಂಬದ ಮಹತ್ವ ತಿಳಿಸುತ್ತದೆ, ‘ಮಹಿಳೆ’ ಮತ್ತು ‘ತಾಯಿ’  ಸ್ತ್ರೀಪರ ಕವನಗಳು. ‘ಮೊಬೈಲ್ ಕಳೆದುಕೊಂಡೆ’ ಅನುಭವ ಜನ್ಯ ಕವನ. ‘ಕಷ್ಟಗಳು’, ‘ಮನಸ್ಸು’ ‘ಸಂಸಾರ’, ‘ನಿದ್ರೆ’ ,’ವಿಧಿ’, ‘ಹಂಗು’ ಮುಂತಾದವು ಭಾವನಾತ್ಮಕ ಪದ್ಯಗಳಾಗಿವೆ. ‘ಕಕ್ಕಯ್ಯ ಬಿಷ್ಟಮ್ಮ’ ಕಥಾರೂಪದ ಕುಸುಮ ಷಟ್ಪದಿಯಲ್ಲಿ ಬರೆದ ಕವನ. ‘ನಲ್ಲೆಯಂತರಂಗ’ ಮೊದಲು ಪ್ರೇಮ ಕವನ ಎನಿಸಿದರೂ ಕೊನೆಗೆ
“ಶರಣ ಬಾವ ಸತಿಯಾಗುತ್ತದೆ
ಲಿಂಗ ಭಾವ ಪತಿಯಾಗುತ್ತದೆ
ಶರಣ ಲಿಂಗ ಒಂದೇಯಾಗುತ್ತದೆ
ಲಿಂಗಾಂಗ ಸಾಮರಸ್ಯವಾಗುತ್ತದೆ
ಬಳಿಕ ಬಟ್ಟ ಬಯಲಾಗುತ್ತದೆ.” ಎಂಬ ಆಧ್ಯಾತ್ಮದ ನಿಲುವಿಗೆ ಬಂದು ನಿಲ್ಲುತ್ತದೆ.
 ಕುವೆಂಪು, ಕಾರಂತ, ಮಾಸ್ತಿ, ಬೇಂದ್ರೆ, ಗೋಕಾಕ, ಅನಂತಮೂರ್ತಿ, ಕಂಬಾರ, ನಿಸಾರ್,ಪಾಪು,ಸಿದ್ದಲಿಂಗಯ್ಯ, ಕಣವಿ, ಸಿದ್ದಲಿಂಗ ಶ್ರೀಗಳು, ಸಿದ್ದೇಶ್ವರ ಶ್ರೀಗಳು, ಕನಕದಾಸ, ವಾಜಪೇಯಿ, ಪುನೀತರ ಬಗ್ಗೆ ಕವನಗಳನ್ನು ಮಕ್ಕಳಿಗಾಗಿ  ಕವಿಗಳ ಸಾಧಕರ ಪರಿಚಯಾತ್ಮಕ ದೃಷ್ಟಿಯಿಂದ  ಸರಳವಾಗಿ  ಕಟ್ಟಿ ಕೊಟ್ಟಿದ್ದಾರೆ. ಚಂಪಾರ ವ್ಯಕ್ತಿತ್ವದ ಬಗ್ಗೆ ಸಮರ್ಥವಾಗಿ ಬರೆದಿದ್ದಾರೆ ಈ ಕವನದಲ್ಲಿ –
“ಚಂಪಾ ಪ್ರಕಟಿಸುತ್ತಿದ್ದರು ಮಾಸ ಪತ್ರಿಕೆ ಸಂಕ್ರಮಣ
ಆದರಾಚರಿಸಲಿಲ್ಲವರು ಈ ಸಲದ ಹಬ್ಬ ಸಂಕ್ರಮಣ
ಕನ್ನಡ ಸಾಹಿತ್ಯಕ್ಕೆ ತಂದರು ಬಂಡಾಯದ ಸಂಕ್ರಮಣ ಅವ್ಯವಸ್ಥೆ, ಅನ್ಯಾಯಕ್ಕೆ ಮಾಡುತ್ತಿದ್ದರು ಆಕ್ರಮಣ”
 ಮದುವೆಯಾದಾಗ ಯುವಕನ ಭಾವನೆ,  ಅದೇ ವ್ಯಕ್ತಿ ಮುದುಕನಾದಾಗ ಉಂಟಾದ ಭಾವನೆ ವಿಡಂಬನಾತ್ಮಕವಾಗಿ ‘ಯೌವನ ವೃದ್ಧಾಪ್ಯ’ ಕವನದಲ್ಲಿ ಮೂಡಿದೆ.
‘ಆದರೆ ಪ್ರೀತಿ ಮಾತ್ರ ಅಂದಿನಂತೇ ಇದೆ
ಅಂತರಂಗದ ಸೌಂದರ್ಯ ಹಾಗೇ ಇದೆ ‘ ಎಂದು ನೈಜ ಪ್ರೀತಿಯ ಅನಾವರಣ ಮಾಡುತ್ತಾರೆ.
 ಶಿವನ ಮಹಿಮೆ ಕುರಿತು ೩ ಕವನಗಳಿವೆ. ‘ನಮ್ಮ ಶಿವ’ ಕವನದಲ್ಲಿ ದೇವರ ಸಾಕಾರ ನಿರಾಕಾರದ ಆಧ್ಯಾತ್ಮಿಕ ಅಭಿವ್ಯಕ್ತಿ ಇದೆ.ಕೊನೆಯ ಸಾಲು ‘ಇವೆಲ್ಲವೂ ಆಗಿರುವನು ನಮ್ಮ ಶಿವ’ ಎಂದಿರಬೇಕಾಗಿತ್ತು.
ಈ ಕವನ ಸಂಕಲನದ ನಾಲ್ಕು ವಿಶೇಷತೆಗಳೆಂದರೆ ೧) ಕನ್ನಡ ಸ್ವರಾದಿಯ ಮತ್ತು ಅಭಿಮಾನದ ಕವನಗಳು ೨)  ಮಾತ್ರಾ ವಿನ್ಯಾಸದ ಮೂಲಕ ರಚಿಸಿದ 29 ಕವನಗಳು ೩) ಪ್ರಸ್ತುತ ಪರಿಸ್ಥಿತಿಯನ್ನು ನಿವೇದಿಸುವ ‘ಈ ವರ್ಷ’, ‘ಬದಲಾವಣೆ’, ‘ಏನು ಫಲ’ ಇತ್ಯಾದಿ ಮತ್ತು ೪) ಈ ಕವನ ಸಂಕಲನದ ಅತ್ಯುತ್ತಮ ಕವನಗಳು– ‘ಕನ್ನಡದ ಅಸ್ಮಿತೆ’, ‘ಹಂಗು’, ‘ಒಂದು ಹಲವು’, ‘ದಿನಾಂಕದ ಗಮ್ಮತ್ತು’. ಇತ್ಯಾದಿ.
ಕವಿಯ ಮಾತಿನಲ್ಲಿ ಹೇಳುವುದಾದರೆ-
“ಭಾವ ಭಾಂದಳದಲ್ಲಿ
ನಾವು ಕಂಡಾ ಕಾಣ್ಕೆ
ನೀವು ನೋಡುವ ಸಲುವಾಗಿ l
ನವ್ಯ ನವೋದಯಾದಿ
ಕಾವ್ಯರಚಿಸಿದೆನಿಲ್ಲಿ
ಭಾವ ಗೀತೆಯು ಚೆಲುವಾಗಿ” ll
   ಕನ್ನಡ ಪರಿಚಾರಕರಾಗಿ,ಸಾಹಿತ್ಯದ ಕಾರ್ಯಕ್ರಮಗಳ ಸಂಘಟಕರಾಗಿ, ಸಾಹಿತಿಗಳಾಗಿ ಅನೇಕ ಕವನ, ವಚನ, ಲೇಖನಗಳನ್ನು ರಚಿಸುತ್ತಿರುವ ವಿಜಯ ಬಡಿಗೇರರವರು ಬಾಂದಳದಷ್ಷು ವಿಶಾಲವಾದ ಭಾವನೆಗಳನ್ನು ಜೀವ ಜಗತ್ತಿಗೆ ಪೂರಕವಾಗಿ ಕವನಗಳ ಮೂಲಕ ಈ ಕೃತಿಯಲ್ಲಿ ಅಭಿವ್ಯಕ್ತಿಸಿದ್ದಾರೆ.
  “ದೃಗ್ಗೋಚರವಾದ ಪಂಚಭೂತಗಳಲ್ಲಿ ಅಂಬರ ಹಿರಿದಾಗಿದ್ದರೂ, ಹೃದ್ಗೋಚರವಾದ ‘ಭಾವ ಬಾಂದಳ’ ಭಾವಾತೀತ ವಸ್ತುವಿನ ಚಿದಂಬರ ಪ್ರಜ್ಞೆಯನ್ನು ಮೂಡಿಸುವಂತಹ ಅನಂತತೆಯಿಂದ ಸುಶೋಭಿತವಾದ ಕವನ ಸಂಕಲನ” ಎಂದು  ಭಾವ ಬಾಂದಳಕ್ಕೆ ಕಾದ್ರೊಳ್ಳಿಯ ಡಾ.ಫಾಲಾಕ್ಷ ಶ್ರೀಗಳು ಆಶೀರ್ವಚನ ಮೂಲಕ ಶುಭ ಹಾರೈಸಿದ್ದಾರೆ.
  ಹಾವೇರಿಯ ಖ್ಯಾತ ಸಾಹಿತಿ ಶ್ರೀ ಸತೀಶ ಕುಲಕರ್ಣಿ ಮುನ್ನುಡಿಯ ಸುಂದರ ತೋರಣ ಕಟ್ಟುತ್ತಾ.”ಕವಿ ವಿಜಯ ಬಡಿಗೇರರು ಸಹೃದಯಿ ಕವಿ. ಆತ್ಮ ನಿವೇದನೆಯ ಮೂಲಕ ಕಾವ್ಯ ರಚಿಸಿದವರು. ಎಷ್ಟನ್ನು ಹೇಳಬೇಕು, ಏನನ್ನು ಹೇಳಬೇಕೆಂಬುದರ ಅರಿವು ಇರುವುದರಿಂದಲೇ ಇವರ ಕಾವ್ಯಕ್ಕೊಂದು ಅಂತ:ಶಿಸ್ತು ಇದೆ.“ಎಂದು ಹೇಳಿದ್ದಾರೆ.
 ಬೆಳಗಾವಿಯ ಡಾ. ಹೇಮಾವತಿ ಸೊನೊಳ್ಳಿಯವರು ಬೆನ್ನುಡಿಯ ಮೂಲಕ ಸೂಚ್ಯವಾಗಿ ಕವಿಯ,ಕೃತಿಯ  ಪರಿಚಯ ನೀಡಿದ್ದಾರೆ. ದೋಷ ರಹಿತ ಸುಂದರ ಮುದ್ರಣದೊಂದಿಗೆ ವಿಹಾನ ಪ್ರಕಾಶನ ಇಟಗಿಯಿಂದ ಶ್ರೀ ದಯಾನಂದರು ಪ್ರಕಟಿಸಿದ್ದಾರೆ. ಒಟ್ಟಾರೆ ಮುದ ನೀಡುವ ಕವನಗಳ ಗುಚ್ಛ .
ಇಳಿವಯಸ್ಸಿನ ಪಕ್ವ ಅನುಭವಗಳುಳ್ಳ ಇನ್ನಷ್ಟು ಕೃತಿಗಳು ಇವರಿಂದ ಪ್ರಕಟವಾಗಲಿ ಎಂಬುದೇ ನನ್ನ ಸದಾಶಯ.
—-ಯು. ಎನ್. ಸಂಗನಾಳಮಠ
 ವಿಶ್ರಾಂತ ಪಾಚಾರ್ಯರು, ಸಾಹಿತಿಗಳು ಹೊನ್ನಾಳಿ
ದಾವಣಗೆರೆ ಜಿಲ್ಲೆ, 9242879028
WhatsApp Group Join Now
Telegram Group Join Now
Share This Article