ಹುಬ್ಬಳ್ಳಿ, ನವೆಂಬರ್ 11: ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜನಸಾಮಾನ್ಯರ ನೆರವಿಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ನೇರ ಆಹಾರ ಉತ್ಪನ್ನ ಪೂರೈಕೆ, ಈಗ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತವರು ಕ್ಷೇತ್ರದಲ್ಲಿ ಆರಂಭಗೊಂಡಿದೆ. ಅಗತ್ಯ ಆಹಾರೋತ್ಪನ್ನಗಳ ಬೆಲೆ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ ಮೊದಲಿಗೆ ದೆಹಲಿಯಲ್ಲಿ 29 ರೂ. ದರದಲ್ಲಿ 10 ಕೆಜಿ ಪ್ಯಾಕೆಟ್ ಭಾರತ್ ಅಕ್ಕಿ ಬಿಡುಗಡೆ ಮಾಡಿತ್ತು. ನಂತರ ಮೊಬೈಲ್ ವಾಹನಗಳ ಮೂಲಕ ದೇಶಾದ್ಯಂತ ಹಂಚಿತು.
ದೇಶದ ಪ್ರಮುಖ ನಗರಗಳು ಹಾಗೂ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಗಗನಮುಖಿ ಆಗುತ್ತಿದ್ದಂತೆಯೇ ಕೆಜಿಗೆ 35 ರೂ. ದರದಲ್ಲಿ ಈರುಳ್ಳಿ ಪೂರೈಸಿ ಗ್ರಾಹಕರ ಕೈಗಿಟ್ಟಿತು. ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬದ ದಿನಗಳಲ್ಲಿ ದೆಹಲಿ, ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿ ಈರುಳ್ಳಿ ಜತೆಗೆ “ಭಾರತ್ ಬ್ರ್ಯಾಂಡ್” ಅಡಿ ಕಡಿಮೆ ಬೆಲೆಗೆ ಆಹಾರೋತ್ಪನ್ನ ಪೂರೈಸಲಾಗಿತ್ತು.