ಬೆಂಗಳೂರಿನ ರೋರಿಚ್, ಬೆಳಗಾವಿಯ ಸವದತ್ತಿ ಅಭಿವೃದ್ಧಿಗೆ ಕೇಂದ್ರ ಯೋಜನೆ

Ravi Talawar
ಬೆಂಗಳೂರಿನ ರೋರಿಚ್, ಬೆಳಗಾವಿಯ ಸವದತ್ತಿ ಅಭಿವೃದ್ಧಿಗೆ ಕೇಂದ್ರ ಯೋಜನೆ
WhatsApp Group Join Now
Telegram Group Join Now

 

ಭಾರತ ಸರಕಾರದ ಪರಿಸರ ಪ್ರವಾಸೋದ್ಯಮ ಸಚಿವಾಲಯದ ತಾಣ ಅಭಿವೃದ್ಧಿ ವಿಭಾಗವು ಕರ್ನಾಟಕದ ಎರಡು ಸ್ಥಳಗಳನ್ನು ಒಟ್ಟು 199.17ಕೋ.ರೂ. ವೆಚ್ಚದಲ್ಲಿ ಸಕಲ ಮೂಲಸೌಕರ್ಯಗಳೊಂದಿಗೆ ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿಪಡಿಸಲು ಮುಂದಾಗಿದೆ. ಬೆಂಗಳೂರಿನ ಸಮೀಪ ಕನಕಪುರ ರಸ್ತೆಯಲ್ಲಿರುವ ರೋರಿಚ್ ಮತ್ತು ದೇವಿಕಾ ರಾಣಿ ಎಸ್ಟೇಟನ್ನು 99.17 ಕೋ.ರೂ. ವೆಚ್ಚದಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ತಾಣವಾಗಿ ಹಾಗು ಬೆಳಗಾವಿ ಜಿಲ್ಲೆಯಲ್ಲಿರುವ ಪ್ರಮುಖ ಧಾರ್ಮಿಕ ಯಾತ್ರಾ ಸ್ಥಳ ಸವದತ್ತಿ ಯೆಲ್ಲಮ್ಮ ಗುಡ್ಡವನ್ನು 100 ಕೋ.ರೂ. ವೆಚ್ಚದಲ್ಲಿ ಜಾಗತಿಕವಾಗಿ ಗುರುತಿಸಲ್ಪಡುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸೀ ತಾಣವಾಗಿ ಅಭಿವೃದ್ಧಿಪಡಿಸಲು ಸಚಿವಾಲಯ ಯೋಜನೆ ರೂಪಿಸಿದೆ. ಕರ್ನಾಟಕದ ಈ ಎರಡು ತಾಣಗಳು ಸಾಂಸ್ಕೃತಿಕವಾಗಿ ಮಹತ್ವದ ಸ್ಥಳಗಳಾಗಿವೆ.

 

470 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ರೋರಿಚ್ ಮತ್ತು ದೇವಿಕಾ ರಾಣಿ ರೋರಿಚ್ ಎಸ್ಟೇಟ್ ಕಲಾವಿದರಿಗೆ ಮತ್ತು ಬುದ್ದಿಜೀವಿಗಳಿಗೆ ರೋಮಾಂಚಕ ಸಾಂಸ್ಕೃತಿಕ ತಾಣವಾಗಿತ್ತು. ಪ್ರಖ್ಯಾತ ಕಲಾವಿದರಾದ ಡಾ. ನಿಕೋಲಸ್ ರೋರಿಚ್ ಮತ್ತು ನಟಿ ದೇವಿಕಾ ರಾಣಿ ವಾಸಿಸುತ್ತಿದ್ದ ಮನೆಯಾಗಿತ್ತು. ಪ್ರಸ್ತುತ ಅದು ಕರ್ನಾಟಕ ಸರಕಾರದ ಸುಪರ್ದಿಯಲ್ಲಿದೆ.

ಅತ್ಯಂತ ವ್ಯೂಹಾತ್ಮಕ ಪ್ರದೇಶದಲ್ಲಿರುವ ಈ ಎಸ್ಟೇಟ್ ಬೆಂಗಳೂರಿಗೆ ಅನತಿ ದೂರದಲ್ಲಿದೆ. ಸ್ಥಳೀಯರು ಮತ್ತು ಪ್ರವಾಸಿಗರು ಇಲ್ಲಿಗೆ ಸುಲಭದಲ್ಲಿ ತಲುಪಲು ಸಾಧ್ಯವಿದೆ. ರಸ್ತೆ ಸೌಕರ್ಯವೂ ಉತ್ತಮವಾಗಿದೆ.

ಈ ಎಸ್ಟೇಟನ್ನು ರೋರಿಚ್ ಅವರು ಕಲೆ, ಇತಿಹಾಸ, ಮತ್ತು ಪ್ರಕೃತಿಗೆ ನೀಡಿದ ಕೊಡುಗೆಗಳ ಮಹತ್ವವನ್ನು ಬಿಂಬಿಸುವ ರೀತಿಯಲ್ಲಿ ಪರಿವರ್ತಿಸುವ ಗುರಿಯನ್ನು ಈ ಯೋಜನೆಯಡಿ ಹೊಂದಲಾಗಿದೆ. ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಮತ್ತು ಪ್ರವಾಸೋದ್ಯಮ ಕೊಡುಗೆಗಳನ್ನು ಹೆಚ್ಚಿಸುವ ಭಾರತದ ವಿಶನ್ -2041ರ ಜೊತೆ ಹೊಂದಿಕೊಳ್ಳುವಂತೆ ಈ ಉಪಕ್ರಮವನ್ನು ರೂಪಿಸಲಾಗಿದೆ. ಸಾಂಸ್ಕೃತಿಕ ಶಿಕ್ಷಣ, ಸ್ವ ಅಭಿವ್ಯಕ್ತಿ, ವಿರಾಮಕ್ಕಾಗಿ ಬೃಹತ್ ಸಮುದಾಯ ಸ್ಥಳದ ಅಗತ್ಯವನ್ನು ಇದು ಈಡೇರಿಸುತ್ತದೆ. ಜೊತೆಗೆ ಪರಿಸರ ಸಂರಕ್ಷಣೆಯ ಮಹತ್ವವನ್ನೂ ಸಾರುತ್ತದೆ. ನಾಟಕ ಪ್ರದರ್ಶನ ಶಾಲೆ, ಗ್ಯಾಲರಿಗಳು, ಸಂಗೀತ ಕಾರ್ಯಕ್ರಮಗಳಿಗೆ ವೇದಿಕೆ ಸೃಷ್ಟಿಯೊಂದಿಗೆ ಸಂದರ್ಶಕರ ಅನುಭವವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಯೋಜನೆಯು ಕಲಾ ಕಾರ್ಯಾಗಾರಗಳು ಮತ್ತು ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳಿಗೆ ಸೌಲಭ್ಯಗಳನ್ನು ನಿರ್ಮಾಣ ಮಾಡುತ್ತದೆ. ಯೋಜನೆಯಲ್ಲಿ 600 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಪಿ.ಪಿ.ಪಿ. ಮಾದರಿಯಲ್ಲಿ 4 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಇದರ ವೆಚ್ಚ 336 ಕೋ.ರೂ.ಗಳು.

ಬೆಳಗಾವಿ ಜಿಲ್ಲೆಯ ಸವದತ್ತಿ ಇತಿಹಾಸ ಪ್ರಸಿದ್ಧ ದಾರ್ಮಿಕ ಯಾತ್ರಾ ಸ್ಥಳ. ಪಶ್ಚಿಮ ಘಟ್ಟ ಗಳಿಂದ ಅವೃತವಾಗಿರುವ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯ ಸವದತ್ತಿ ನಿಸರ್ಗ ರಮ್ಯ ಪ್ರದೇಶದಲ್ಲಿದೆ. ಇದನ್ನು ಬಳಸಿಕೊಂಡು ಮಲಪ್ರಭಾ ನದಿ ಹರಿಯುತ್ತದೆ. ಈ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ಅಣೆಕಟ್ಟಿಗೆ ರೇಣುಕಾ ಸಾಗರ ಎಂಬ ಹೆಸರಿದೆ. ರಟ್ಟ ಅರಸೊತ್ತಿಗೆಯ ಕೇಂದ್ರ ಸ್ಥಾನವಾಗಿದ್ದ ಸವದತ್ತಿ, ಶ್ರೀ ರೇಣುಕಾ ಯೆಲ್ಲಮ್ಮದೇವಾಲಯವಿರುವ ಪವಿತ್ರ ಕ್ಷೇತ್ರ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಂದ ಶ್ರೀ ರೇಣುಕಾ ದೇವಿಯ ದರ್ಶನಕ್ಕೆ ಭಕ್ತರು ಬರುತ್ತಾರೆ. ವಾರ್ಷಿಕ ಯೆಲ್ಲಮ್ಮ ಜಾತ್ರೆಯಂದು ಇಲ್ಲಿ ಭಕ್ತ ಸಾಗರವೇ ನೆರೆದಿರುತ್ತದೆ. ಬೆಟ್ಟ ಗುಡ್ಡ, ನದಿ, ಮಲಪ್ರಭಾ ಅಣೆಕಟ್ಟೆಯಿಂದ ರೂಪುಗೊಂಡಿರುವ ಜಲಾಶಯಗಳಿಂದಾಗಿ ಸವದತ್ತಿ ಆಧ್ಯಾತ್ಮಿಕ, ಪರಿಸರ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಹೊಂದಿರುವ ತಾಣವಾಗಿದೆ ಮತ್ತು ಇದರಿಂದಾಗಿ ಅದು ಪ್ರವಾಸಿಗರಿಗೆ ವಿಶಿಷ್ಟ ಆಕರ್ಷಣೆಯ ಸ್ಥಳವೂ ಆಗಿದೆ.

 

ಸವದತ್ತಿ ಯೆಲಮ್ಮ ಗುಡ್ಡ ಅಭಿವೃದ್ಧಿ ಯೋಜನೆ ಅಡಿಯಲ್ಲಿ 100 ಕೋ.ರೂ. ವೆಚ್ಚದಲ್ಲಿ ಈ ಕ್ಷೇತ್ರವನ್ನು ಜಾಗತಿಕವಾಗಿ ಗುರುತಿಸಲ್ಪಡುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸೀ ತಾಣವಾಗಿ ಅಭಿವೃದ್ಧಿ ಮಾಡಲು ಉದ್ದೇಶಿಸಲಾಗಿದೆ. ಯೋಜನೆಯು ಮೂಲಸೌಕರ್ಯಗಳಲ್ಲಿರುವ ಅಂತರವನ್ನು ನಿವಾರಿಸುತ್ತದೆ ಹಾಗು ದೇವಾಲಯದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವನ್ನು ಕಾಪಾಡುವುದಲ್ಲದೆ ಸಂದರ್ಶಕರ ಅನುಭವವನ್ನು ಶ್ರೀಮಂತಗೊಳಿಸುತ್ತದೆ. ಯೋಜನೆಯು 600 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ. ಒಟ್ಟು 320 ಕೋ.ರೂ. ವೆಚ್ಚದ 4 ಯೋಜನೆಗಳನ್ನು ಪಿ.ಪಿ.ಪಿ. ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ಹೊಟೇಲುಗಳು, ಥೀಮ್ ಪಾರ್ಕ್, ರೋಪ್ ವೇ ಮತ್ತು ಅಮ್ಯೂಸ್ ಮೆಂಟ್ ಪಾರ್ಕ್ ಗಳನ್ನು ಪಿ.ಪಿ.ಪಿ. ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಉದ್ದೇಶಿಸಲಾಗಿದೆ.

WhatsApp Group Join Now
Telegram Group Join Now
Share This Article