ವಿಜಯಪುರ- ಎಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವಿಜಯಪುರ ಜಿಲ್ಲಾ ಘಟಕವು ಶೇಷರಾವ ಮಾನೆ ಅವರ ನೇತೃತ್ವದಲ್ಲಿ ಎಂ.ಇ.ಎಸ್.ನ ಪುಂಡಾಟಿಕೆ ನಿಷೇಧಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ ಎಂ.ಇ.ಎಸ್.ನ ಕಾರ್ಯಕರ್ತರು ಸುಮಾರು ೧೦ ವರ್ಷಗಳ ನಂತರ ನಾಡದ್ರೋಹಿ ಕಾರ್ಯಕ್ಕೆ ಇಳಿದಿದ್ದಾರೆ. ಎಂ.ಇ.ಎಸ್.ನ ಸದಸ್ಯರು ಭಾಷಾ ವಿವಾದಕ್ಕೆ ಕಿಚ್ಚು ಹಚ್ಚಿಸಿ ಬೆಳಗಾವಿ ಮಹಾನಗರಪಾಲಿಕೆಯಲ್ಲಿ ಮತ್ತೆ ಪುಂಡಾಟಿಕೆಯನ್ನು ಮೆರೆದಿದ್ದಾರೆ. ಪಾಲಿಕೆಯಲ್ಲಿ ಮರಾಠಿ ಭಾಷೆಯ ಅಜಂಡಾ ನೀಡುವಂತೆ ಆಗ್ರಹಿಸಿ ಗದ್ದಲ ನಡೆಸಿರುವುದು ಖಂಡನೀಯ. ಎಂ.ಇ.ಎಸ್.ನ ವಿರುದ್ದ ಕರವೇ ಕಾರ್ಯಕರ್ತರು ಧಿಕ್ಕಾರ ಕೂಗಿದಾಗ ಅಲ್ಲಿನ ಕಾಂಗೈ ನಾಯಕರು ಮೌನ ವಹಿಸಿರುವುದು ಯಾವ ಕಾರಣಕ್ಕೆ ಎಂಬುದು ತಿಳಿಯದಂತಾಗಿದೆ. ಸನ್ಮಾನ್ಯ ಮುಖ್ಯಮಂತ್ರಿಗಳು ಎಂ.ಇ.ಎಸ್.ನ್ನು ನಿಷೇಧಿಸದೆ ಹೋದರೆ ಮುಂದಿನ ದಿನಗಳಲ್ಲಿ ಕನ್ನಡಿಗರ ಮೇಲೆ ಕನ್ನಡದ ಅಸ್ಮೀತೆ ಮೇಲೆ ಮತ್ತು ಕರ್ನಾಟಕದ ಗಡಿಭಾಗದ ಜನರ ಮೇಲೆ ಭಾರಿ ಭಯಾನಕ ವಾತಾವರಣ ಸೃಷ್ಠಿಯಾಗಲಿದೆ. ಕೂಡಲೇ ಎಂ.ಇ.ಎಸ್.ನ್ನು ನಿಷೇದಿಸಬೇಕೆಂದು ಆಗ್ರಹಿಸಿದರು.
ಇದೇ ವೇಳೆ ಜಿಲ್ಲಾ ಉಪಾಧ್ಯಕ್ಷ ಇಂದುಮತಿ ಲಮಾಣಿ ಮಾತನಾಡಿದ ಎಂ.ಇ.ಎಸ್.ನ ಅಭಯ ಪಾಟೀಲರು ಅನಗತ್ಯವಾಗಿ ಅಡ್ಡಿಪಡಿಸುವ ಕಾರ್ಯಕ್ಕೆ ಕೆಂಡಮಂಡಲವಾದ ಕರವೇ ಕಾರ್ಯಕರ್ತರ ಮೇಲೆ ಸುಖಾ ಸುಮ್ಮನೆ ವಾದ ವಿವಾದಕ್ಕೆಳಿದು ಕಾರ್ಯಕ್ರಮದಲ್ಲಿ ಅಡ್ಡಿ ಪಡಿಸಿರುವುದು ನಾಚಿಕೆಗೆಡು ಸಂಗತಿಯಾಗಿದೆ ಎಂದರು.
ಮಹಿಳಾ ಘಟಕ ಜಿಲ್ಲಾಧ್ಯಕ್ಷ ಭಾರತಿ ಟಂಕಸಾಲಿ, ಜಿಲ್ಲಾ ಉಪಾಧ್ಯಕ್ಷ ಡಾ. ಎನ್.ಆಯ್. ಪಟೇಲ, ಅಮೀರ ಸಾಗರ, ಪ್ರಕಾಶ ನಡುವಿನಕೇರಿ ಮಾತನಾಡಿದರು.ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ಸಾದಿಕ ಶೇಖ, ಜಿಲ್ಲಾಮುಖಂಡ ಮೈನು ವಾಲಿಕಾರ, ಜಿಲ್ಲಾ ಉಪಾಧ್ಯಕ್ಷ ಗುರುರಾಜ ಪಂಚಾಳ, ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ, ತಾಲೂಕಾ ಮುಖಂಡ ಅನಿಲ ಸಾಗರ, ಭಾರತಿ ಭುಯ್ಯಾರ, ಎ.ಡಿ. ಪಾಟೀಲ ಮುಂತಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.