ಬೆಳಗಾವಿ ಕಾಂಗ್ರೆಸ್ ಅಧಿವೇಶನ ಶತಮಾನದ ಸಂಭ್ರಮ !

Ravi Talawar
ಬೆಳಗಾವಿ ಕಾಂಗ್ರೆಸ್ ಅಧಿವೇಶನ ಶತಮಾನದ ಸಂಭ್ರಮ !
WhatsApp Group Join Now
Telegram Group Join Now

1924ರ ಡಿಸೆಂಬರ್ 26ಮತ್ತು 27ರಂದು 39ನೇ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ನಡೆದಿತ್ತು. ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನವಿದು. ಇದೇ ಡಿಸೆಂಬರ್ 26ಕ್ಕೆ ಈ ಮಹತ್ವದ ಐತಿಹಾಸಿಕ ಗಳಿಗೆಗೆ ನೂರು ವರ್ಷಗಳು ತುಂಬಲಿವೆ. ಅಧಿವೇಶನದ ಶತಮಾನೋತ್ಸವ ನೆನಪಿಗೆ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುವುದು ಸರ್ಕಾರದ ಗುರಿಯಾಗಿದೆ. ನೂರು ವರ್ಷಗಳ ಹಿಂದೆ ನಡೆದ ಈ ಅಧಿವೇಶನದ ಕಥೆ ತುಂಬ ರೋಚಕವಾಗಿದೆ.

ಈ ಅಧಿವೇಶನದ ನಡೆದ 23 ವರ್ಷಗಳ ನಂತರ ದೇಶ ಸ್ವಾತಂತ್ರ್ಯ ಪಡೆಯಿತು. ಸ್ವಾತಂತ್ರ್ಯ ಹೋರಾಟಕ್ಕೆಗಟ್ಟಿ ಬುನಾದಿ ಹಾಕಿ ಎಲ್ಲ ಆಂತರಿಕ ಭಿನ್ನಾಯಕಗಳನ್ನು ಬಗೆಹರಿಸುವಲ್ಲಿ ಮಹತ್ವದ ಪಾತ್ರವಹಿಸಿತು. ಅಹಿಂಸೆಯ ಮೂಲಕ ಪೂರ್ಣ ಸ್ವಾತಂತ್ರ್ಯ ಪಡೆಯುವುದು ನಮ್ಮ ಗುರಿ ಎಂದು ಘೋಷಿಸಲಾಯಿತು. ಅಧಿವೇಶನ ಜನಸಾಮಾನ್ಯರಲ್ಲಿ , ವಿಶೇಷವಾಗಿ ಯುವಕರಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕುವ ಮನೋಭಾವ ಉದೀಪನ ಗೊಳಿಸಿತು.

ಬೆಳಗಾವಿಯ ಹೊರವಲಯದಲ್ಲಿ ರಮ್ಯ ನಿಸರ್ಗದ ನಡುವೆ 80 ಎಕರೆ ವಿಶಾಲ ಪ್ರದೇಶದಲ್ಲಿ ಅಧಿವೇಶನ ನಡೆಯಿತು. ಇದಕ್ಕೆ ‘ ವಿಜಯನಗರ ‘ಎಂದು ನಾಮಕರಣ ಮಾಡಲಾಗಿತ್ತು. ವೇದಿಕೆಯ ಮುಂಭಾಗದಲ್ಲಿ ಲೋಕಮಾನ್ಯ ತಿಲಕ್ ಮತ್ತು ಗಾಂಧೀಜಿ ಅವರ ಪೂರ್ಣ ಪ್ರಮಾಣದ ಭಾವಚಿತ್ರಗಳನ್ನು ನಿಲ್ಲಿಸಲಾಗಿತ್ತು.
ನಾ.ಸು. ಹರ್ಡಿಕರ ಅವರು ಸ್ವಯಂಸೇವಕರ ತಂಡದ ನಾಯಕರಾಗಿದ್ದರು.141 ಮಹಿಳೆಯರನ್ನೊಳಗೊಂಡು ಒಟ್ಟು 1156 ಸ್ವಯಂಸೇವಕರಿದ್ದರು. ಇವರಿಗೆ ಬಾಗಲಕೋಟ ಜಿಲ್ಲೆಯ ಸೀತಿಮನಿ ಗ್ರಾಮದಲ್ಲಿ ಹರ್ಡಿಕರ ಅವರು ತರಬೇತಿ ನೀಡಿದ್ದರು.ಬ್ರಾಹ್ಮಣ ಸಮಾಜಕ್ಕೆ ಸೇರಿದ 75 ಸ್ವಯಂಸೇವಕರು ಪೌರಕಾರ್ಮಿಕರೊಂದಿಗೆ ಕೂಡಿ ನೈರ್ಮಲ್ಯ ಕೆಲಸ ಶ್ರದ್ಧೆಯಿಂದ ಮಾಡಿದರು. ಜಮಖಂಡಿಯ ವಾಮನರಾವ್ ದೇಸಾಯಿ ಬಿದರಿ ಈ ತಂಡದ ನೇತೃತ್ವ ವಹಿಸಿದ್ದರು.

ಅಧಿವೇಶನಕ್ಕೆ ನೀರು ಪೂರೈಕೆಗಾಗಿ 50 x 50 ಅಡಿ ವಿಸ್ತೀರ್ಣದ 40 ಅಡಿ ಆಳದ ಬಾವಿಯನ್ನು ತೋಡಲಾಗಿತ್ತು. ಇದು ‘ಕಾಂಗ್ರೆಸ್ ಬಾವಿ ‘ಎಂದು ಪ್ರಸಿದ್ಧವಾಗಿದೆ. ಬಾವಿ ಈಗಲೂ ಅಧಿವೇಶನದ ಸವಿ ನೆನಪಿನ ಸಂಕೇತವಾಗಿನಿಂತಿದೆ. ಅಧಿವೇಶನದ ವ್ಯವಸ್ಥೆಗೆ ಗಂಗಾಧರ ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗಿತ್ತು. ಅವರು ಕುದುರೆಯ ಮೇಲೆ ಸಂಚರಿಸಿ ಸಮ್ಮೇಳನದ ವ್ಯವಸ್ಥೆ ಮಾಡಿದರು. ಮಾಧವ್ ರಾವ್ ಕೆಂಭಾವಿ,ಬಿ ಬಿ.ಪೋತದಾರ, ಎಸ್ ಎಲ್ ಸೋಮಣ್ಣ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. 16 ಉಪಸಮಿತಿಗಳನ್ನು ನೇಮಕ ಮಾಡಲಾಗಿತ್ತು.

ಸಮ್ಮೇಳನಕ್ಕಾಗಿ ಸಂಗ್ರಹವಾದ ಒಟ್ಟು ಹಣ 220829 ಮತ್ತು ಖರ್ಚಾದ ಹಣ220829 ರೂ . ದೇಶದ ವಿವಿಧ ಭಾಗಗಳ 40,000 ಪ್ರತಿನಿಧಿಗಳು ಭಾಗವಹಿಸಿದ್ದರು. ದೇಶ ಬಂಧು
ಚಿತ್ರಂಜನ್ ದಾಸ್,ಮದನ್ ಮೋಹನ್ ಮಾಳವಿಯ,ಲಾಲಾ ಲಜಪತ್ ರಾಯ್,ಮೌಲಾನ ಶೌಕತ್ ಅಲಿ, ಸರೋಜಿನಿ ನಾಯ್ಡು, ಮೌಲಾನ ಅಬ್ದುಲ್ ಕಲಾಂ ಅಜಾದ್, ಮೋತಿಲಾಲ್ ನೆಹರು, ಜವಾಹರ್ ಲಾಲ್ ನೆಹರು,ಸಿ.ರಾಜಗೋಪಾಲಾಚಾರಿ, ಬಾಬು ರಾಜೇಂದ್ರ ಪ್ರಸಾದ್,ವಲ್ಲಭಭಾಯಿ ಪಟೇಲ್,ಜಮುನಾಲಾಲ್ ಬಜಾಜ್ ಪ್ರಮುಖರು ಆಗಮಿಸಿದ್ದರು.

ಅಧಿವೇಶನಕ್ಕೆ 6 ದಿನ ಮುಂಚಿತವಾಗಿ ರೈಲು ಮೂಲಕ ಗಾಂಧೀಜಿ ಬೆಳಗಾವಿಗೆ ಆಗಮಿಸಿದ್ದರು.ಅಧಿವೇಶನ ನಡೆಯುವ ಸ್ಥಳದ ಸಮೀಪ ವಿಶೇಷ ತಾತ್ಕಾಲಿಕ ರೈಲು ನಿಲ್ದಾಣ ನಿರ್ಮಿಸಲಾಗಿತ್ತು. ಗಾಂಧೀಜಿ ಉಳಿದುಕೊಳ್ಳಲು ಭವ್ಯ ಕುಟೀರ ನಿರ್ಮಿಸಲಾಗಿತ್ತು. ಅಲ್ಲಿಯ ಐಷಾರಾಮಿ ವಸ್ತುಗಳನ್ನು ನೋಡಿ ಗಾಂಧೀಜಿ ಅಸಮಾಧಾನಗೊಂಡು “ಖಾದಿ ಕುಟೀರವನ್ನು ನಾನು ಬಯಸಿದ್ದೆ. ಆದರೆ ಖಾದಿ ಅರಮನೆಯನ್ನು ನನಗಾಗಿ ನಿರ್ಮಿಸುವ ಮೂಲಕ ನನಗೆ ಅಮಾನಪಡಿಸಲಾಗಿದೆ. ಬಡ ದುಡಿಮೆಗಾರರನ್ನು ಪ್ರತಿನಿಧಿಸುವ ನಾವು ಅವರ ಜೀವನದೊಂದಿಗೆ ಹೊಂದಾಣಿಕೆ ಆಗುವ ರೀತಿಯಲ್ಲಿ ನಮ್ಮ ಖರ್ಚು ವೆಚ್ಚಗಳಿರಬೇಕು” ಎಂದು ನೇರವಾಗಿ ಹೇಳಿದರು. ಅಧಿವೇಶನದ ನಂತರ ಸಂಘಟಕರಿಗೆ ಬರೆದ ಪತ್ರದಲ್ಲಿಯೂ ಗಾಂಧೀಜಿ ಈ ಮಾತು ಉಲ್ಲೇಖಿಸಿದ್ದರು.

ಡಿಸೆಂಬರ್ 26ರಂದು ಕಲಾಪ ಆರಂಭಕ್ಕೆ ಮೊದಲು ಧ್ವಜಾರೋಹಣ ನೆರವೇರಿಸಲಾಯಿತು. ಹಿಂದಿನ ವರ್ಷ ನಡೆದ ಅಧಿವೇಶನದ ಅಧ್ಯಕ್ಷರಾಗಿದ್ದ ಮೌಲಾನ ಮಹಮ್ಮದ್ ಅಲಿ ಗಾಂಧೀಜಿಯವರನ್ನು ವೇದಿಕೆ ಕರೆತಂದು ಅವರಿಗೆಅಧಿಕಾರ ಹಸ್ತಾಂತರಿಸಿದರು. ಗಂಗಾಧರರಾವ್ ದೇಶಪಾಂಡೆ ಸ್ವಾಗತ ಭಾಷಣ ಮಾಡಿ ಮಾಲಾರ್ಪಣೆ ಮಾಡಿದರು.

ಬೆಟಗೇರಿ ಕೃಷ್ಣ ಶರ್ಮಾರು ರಚಿಸಿದ” ಸ್ವಾಗತವು ಸ್ವಾಗತವು ಸಕಲ ಜನಸಂಕುಲಕೆ, ಸ್ವಾಗತವ ಗೈದು ಶಿರವಾಗುವೆವು ಬುಧಗಣಕೆ,ಬೆಳಗಾವಿಯೊಳು ಕಲೆತು ಕುಳಿತ ಬಲವಂತರಿಗೆ ” ಎಂಬ ಸ್ವಾಗತಗೀತೆ, ಮತ್ತು ಸಕ್ಕರೆ ಬಾಳಾಚಾರ್ಯರು ರಚಿಸಿದ” ನಮ್ಮದೈ! ನಮ್ಮದೀ ಭರತ ಭೂಮಿ ಹೆರವರಂ ನಂಬದಲೆ ಜಗದೀಶ್ವರಂ ತಾನೆ ” ದೇಶಭಕ್ತಿ ಗೀತೆ ಹಾಡಲಾಯಿತು.

ಗಾಂಧೀಜಿ ಇಂಗ್ಲಿಷ್ ನಲ್ಲಿ ತಮ್ಮ ಅಧ್ಯಕ್ಷ ಭಾಷಣ ಪ್ರಸ್ತುತಪಡಿಸಿದರು.” ಗೆಳೆಯರೇ,ನಾನು 10 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ನನ್ನ ಭಾಷಣದ ಅನುವಾದಿತ ಪ್ರತಿಗಳು ಎಲ್ಲರ ಕೈ ಸೇರಿವೆ “ಎಂದು ಮಾತು ಆರಂಭಿಸಿದರು. ಸಂಪೂರ್ಣ ಸ್ವಾತಂತ್ರ್ಯ ಪಡೆಯುವವರಿಗೆ ಹೋರಾಟ ನಿಲ್ಲುವುದಿಲ್ಲ. ವಿದೇಶಿ ಬಟ್ಟೆಗಳ ನಿರಾಕರಣೆ. ಮಧ್ಯಪಾನ ಮಾದಕ ವಸ್ತುಗಳ ನಿಷೇಧ. ರಾಷ್ಟ್ರೀಯ ಶಾಲೆಗಳ ಸ್ಥಾಪನೆ ಅವಶ್ಯಕತೆ, ಅಸ್ಪೃಶ್ಯತಾ ನಿವಾರಣೆ, ಸಾಗರೋತ್ತರ ಭಾರತೀಯ ನಿವಾಸಿಗಳ ರಕ್ಷಣೆ ವಿಷಯ ಕುರಿತು ಸಂಕ್ಷಿಪ್ತವಾಗಿ ಹೇಳಿದರು.

ಅಧಿವೇಶನದ ಎರಡನೇ ದಿನದ ಕಾರ್ಯಕ್ರಮದ ಆರಂಭದಲ್ಲಿ ಹುಯಿಲಗೋಳ ನಾರಾಯಣರಾಯರು ರಚಿಸಿದ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಗೀತೆಯನ್ನು ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಹಾಡಿದರು . ಎರಡೂ ದಿನಗಳ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಸ್ವಾಗತ ಗೀತೆಗಳುನ್ನು ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲು ಮಹಿಳಾ ಅಧ್ಯಕ್ಷರಾಗಿದ್ದ ಅನಿಬೆಸೆಂಟ್ ವೇದಿಕೆಗೆ ಬಂದರು. ಗಾಂಧೀಜಿ ಎದ್ದು ನಿಂತು ಸ್ವಾಗತಿಸಿ ಕೆಲವು ಮಾತುಗಳನ್ನು ಹೇಳುವಂತೆ ಕೇಳಿಕೊಂಡರು.

“ನಾನು ಭಾರತದ ಪುತ್ರಿ ಎಂದೇ ಭಾವಿಸಿದ್ದೇನೆ. ಜನ್ಮ ಭೂಮಿ ಬೇರೆ ಯಾದರೂ ಭಾರತದ ಸ್ವಾತಂತ್ರ್ಯಕ್ಕಾಗಿ,ಸ್ವಯಂ ಆಡಳಿತಕ್ಕಾಗಿ ಹೋರಾಡುತ್ತಾ ಬಂದಿದ್ದೇನೆ. ಭಾರತವನ್ನು ಹೆಚ್ಚು ಪ್ರೀತಿಸುತ್ತೇನೆ,ನಾನು ಸಂಪೂರ್ಣ ಭಾರತೀಯಳೇ ಆಗಿರುವೆ “ಎಂದು ಹೃದಯ ಸ್ಪರ್ಶಿಯಾಗಿ ಮಾತನಾಡಿದರು. ಅವರ ಮಾತಿಗೆ ಚಪ್ಪಾಳೆಯ ಸುರು ಮಳೆಯಾಯಿತು.

ಕೊನೆಯಲ್ಲಿ ಸಮಾರೋಪ ಭಾಷಣ ಮಾಡಿದ ಗಾಂಧೀಜಿ “ಜಪಮಣಿ ತಿರುಗಿಸುತ್ತಾ ಮಾಡುವ ಪೂಜೆ ಗಿಂತ ನೂಲುವುದು ತುಂಬಾ ಒಳ್ಳೆಯ ಪೂಜೆ. ಖಾದಿ ಸ್ವದೇಶಿ ಭಾವವನ್ನು ಬೆಳೆಸುತ್ತದೆ ಎಲ್ಲರಿಗೂ ಉದ್ಯೋಗ ನೀಡುತ್ತದೆ “ಎಂಬ ಮೌಲಿಕ ಸಂದೇಶ ನೀಡಿ ಅಧಿವೇಶನ ಯಶಸ್ವಿಗಾಗಿ ದುಡಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು. ಸ್ವಯಂಸೇವಕರ ಶಿಸ್ತು, ದಕ್ಷತೆ,ಸೇವಾಮನೋಭಾವ ಬಹಳ ಕೊಂದಾಡಿದರು. ಮೋತಿಲಾಲ್ ನೆಹರು ವಂದನಾರ್ಪಣೆಗೈದರು.ರಾತ್ರಿ ವೀಣೆ ಶೇಷಣ್ಣನವರ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.

ಎರಡನೇ ದಿನದ ಮಧ್ಯಾಹ್ನದ ಭೋಜನದಲ್ಲಿ ಅತಿಥಿಗಳಿಗೆ ಹೂರಣದ ಕರಿಗಡಬು, ತುಪ್ಪ ಬಡಿಸಲಾಗಿತ್ತು.ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇದನ್ನೇ ಹಾಡು ಕಟ್ಟಿ ಜಾನಪದ ಕಲಾವಿದರು” ಹೆರತುಪ್ಪ ಕರಿಗಡಬು ಕನ್ನಡ ನಾಡು” ಹಾಡಿ ರಂಜಿಸಿದರು.

ನೂರು ವರ್ಷಗಳ ಹಿಂದೆ ಬೆಳಗಾವಿಯ ಜನಸಂಖ್ಯೆ 30ಸಾವಿರದ ಆಸುಪಾಸಿನಲ್ಲಿತ್ತು. ಅಧಿವೇಶನಕ್ಕೆ ಬಂದ ಪ್ರತಿನಿಧಿಗಳ ಸಂಖ್ಯೆ 40, ಸಾವಿರ ಕ್ಕಿಂತ ಹೆಚ್ಚಾಗಿತ್ತು. ಇವರೆಲ್ಲರಿಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದು ಮೆಚ್ಚು ತಕ್ಕ ಸಂಗತಿಯಾಗಿದೆ.


ಆರ್.ಬಿ. ತಿಮ್ಮಾಪುರ್
ಅಬಕಾರಿ ಸಚಿವರು ಹಾಗೂ ಬಾಗಲಕೋಟೆ  ಜಿಲ್ಲಾ ಉಸ್ತುವಾರಿ ಸಚಿವರು

WhatsApp Group Join Now
Telegram Group Join Now
Share This Article