ಬೆಳಗಾವಿ:(ಡಿ.13), “ಸುಮಾರು ನೂರು ವರ್ಷಗಳ ಹಿಂದೆ, 1925ರ ಫೆಬ್ರವರಿ 2 ರಂದು, ಏಳು ಜನ ಉತ್ಸಾಹಿ ತರುಣರು ಒಂದಾಗಿ ಶೈಕ್ಷಣಿಕ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಳ್ಳುವ ಸಂಕಲ್ಪದೊಂದಿಗೆ ಬಾಡಿಗೆ ಕಟ್ಟಡವೊಂದರಲ್ಲಿ ‘ಮಾಡೆಲ್ ಇಂಗ್ಲಿಷ್ ಸ್ಕೂಲ್’ ಅನ್ನು ಸ್ಥಾಪಿಸಿದರು. ಬೆಳಗಾವಿಯಲ್ಲಿರುವ ಪ್ರಮುಖ ಮಾರ್ಗದರ್ಶಕರು ಈ ತರುಣರ ಉದಾತ್ತ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತರು. ಶ್ರೀ ಡಿ.ವಿ. ಬೆಳ್ವಿ ಅವರ ಅಧ್ಯಕ್ಷತೆಯ ಈ ತಂಡವು ‘ಬೆಳಗಾವಿ ಎಜುಕೇಶನ್ ಸೊಸೈಟಿ’ಯನ್ನು ಸ್ಥಾಪಿಸಿತು ಮತ್ತು 1946 ರಲ್ಲಿ ಇದನ್ನು ನೋಂದಾಯಿಸಲಾಯಿತು. ಅಂದು ರೋಪಿ ಸಸಿಯಾಗಿದ್ದ ಈ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದ್ದು, ಇದೇ ಡಿಸೆಂಬರ್ 20 ರಿಂದ 26 ರವರೆಗೆ ಅದ್ದೂರಿಯಾಗಿ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ,” ಎಂದು ಬೆಳಗಾವಿ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಅವಿನಾಶ್ ಪೋತದಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಂದು ಪ್ರಾರಂಭವಾದ ಚಿಕ್ಕ ‘ಮಾಡೆಲ್ ಇಂಗ್ಲಿಷ್ ಮೀಡಿಯಂ’ ಸಂಸ್ಥೆ ಇಂದು ಏಳು ಪೂರ್ಣ ಪ್ರಮಾಣದ ವಿದ್ಯಾಸಂಸ್ಥೆಗಳಾಗಿ ವಿಸ್ತಾರಗೊಂಡಿದೆ ಎಂದು ಅವರು ವಿವರಿಸಿದರು: ೧. ಬಿ.ಕೆ. ಮಾಡೆಲ್ ಹೈಸ್ಕೂಲ್ (೧೯೨೫) ೨. ಉಷಾತಾಯಿ ಗೋಗಟೆ ಗರ್ಲ್ಸ್ ಹೈಸ್ಕೂಲ್ (೧೯೬೭) ೩. ಎನ್.ಎಸ್. ಪೈ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆ (೧೯೯೨) ೪. ವಾಸುದೇವ್ ಘೋಟಗೆ ಮಾಡೆಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ (೨೦೦೫) ೫. ವಿಠಲಾಚಾರ್ಯ ಶಿವಣಗಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆ (೨೦೧೦) ೬. ಮಾಡೆಲ್ ಸೈನ್ಸ್ ಮತ್ತು ಕಾಮರ್ಸ್ ಪಿ.ಯು. ಕಾಲೇಜು (೨೦೧೩) ೭. ಶ್ರೀದೇವಿ ದಾಸಪ್ಪ ಶಾನಭಾಗ ಮಾಡೆಲ್ ಪ್ರಾಥಮಿಕ ಇಂಗ್ಲಿಷ್ ಮೀಡಿಯಂ ಸ್ಕೂಲ್ (೨೦೧೬).
ದಾನಿಗಳ ಕೊಡುಗೆ ಮತ್ತು ಹಳೆಯ ವಿದ್ಯಾರ್ಥಿಗಳ ಸಾಧನೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ, ಸಂಸ್ಥೆಯ ಅಧ್ಯಕ್ಷರಾಗಿದ್ದ ಶ್ರೀ ಡಿ.ವಿ. ಬೆಳ್ವಿ ಅವರು ಪಾಟೀಲ್ ಗಲ್ಲಿಯಲ್ಲಿದ್ದ ತಮ್ಮ ಕಟ್ಟಡವನ್ನು ಶಾಲೆಗಾಗಿ ನೀಡಿದರು. ಮುಂದೆ ಆ ಕಟ್ಟಡ ಮತ್ತು 1.5 ಎಕರೆ ಜಮೀನನ್ನು ಅತ್ಯಂತ ಕಡಿಮೆ ದರದಲ್ಲಿ ಸೊಸೈಟಿಗೆ ನೀಡಿದರು. ಮತ್ತೊಬ್ಬ ಪ್ರವರ್ತಕರಾದ ಶ್ರೀ ಬಲವಂತರಾವ್ ದಾತಾರ್ ಅವರು ಕೇಂದ್ರ ಗೃಹ ಸಚಿವರಾಗಿದ್ದಾಗ ಬೆಳಗಾವಿ ಕಂಟೋನ್ಮೆಂಟ್‌ನಲ್ಲಿ 3.75 ಎಕರೆ ರಕ್ಷಣಾ ಇಲಾಖೆಯ ಜಮೀನನ್ನು ಪಡೆಯಲು ನೆರವಾದರು. ದಾನಿಗಳು ಮತ್ತು ಹಳೆಯ ವಿದ್ಯಾರ್ಥಿಗಳ ನೆರವಿನಿಂದ ಎರಡೂ ಕಡೆ ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗಿದೆ.
ಇಲ್ಲಿನ ಶಿಕ್ಷಕರ ಸಮರ್ಪಿತ ಸೇವೆಯ ಫಲವಾಗಿ, ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಇಂದು ಐಎಎಸ್ ಅಧಿಕಾರಿಗಳು, ವಿಜ್ಞಾನಿಗಳು, ಶಿಕ್ಷಣ ತಜ್ಞರು, ಉದ್ಯಮಿಗಳು ಹಾಗೂ ಪೊಲೀಸ್ ಮತ್ತು ಸರ್ಕಾರಿ ಅಧಿಕಾರಿಗಳಾಗಿ ಉನ್ನತ ಹುದ್ದೆಗಳಲ್ಲಿದ್ದಾರೆ. ಇಂದಿಗೂ ನಾಲ್ಕು ಸಂಸ್ಥೆಗಳಲ್ಲಿ ಕನ್ನಡ ಮತ್ತು ಮರಾಠಿ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವುದು ವಿಶೇಷವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಗೌರವ ಕಾರ್ಯದರ್ಶಿ ಶ್ರೀ ಶ್ರೀನಿವಾಸ್ ಶಿವಣಗಿ, “ಹಳೆಯ ವಿದ್ಯಾರ್ಥಿಗಳ ಸಂಘ, ಸ್ಕೌಟ್ಸ್, ಎನ್‌ಸಿಸಿ, ಅಟಲ್ ಲ್ಯಾಬ್ ಮತ್ತು ಕ್ರೀಡಾ ಸಂಘಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಶತಮಾನೋತ್ಸವವನ್ನು ಆಚರಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ,” ಎಂದು ಹರ್ಷ ವ್ಯಕ್ತಪಡಿಸಿದರು.

ಶತಮಾನೋತ್ಸವದ ಕಾರ್ಯಕ್ರಮಗಳ ವಿವರ ಡಿಸೆಂಬರ್ 20 ರಿಂದ 26 ರವರೆಗೆ ಪ್ರತಿದಿನ ಸಂಜೆ 5:30 ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಪೋತದಾರ್ ಮಾಹಿತಿ ನೀಡಿದರು:
ಡಿ. 19: ಖ್ಯಾತ ಹಾಸ್ಯ ಕಲಾವಿದ ಶ್ರೀ ಗಂಗಾವತಿ ಪ್ರಾಣೇಶ್ ಅವರಿಂದ ಹಾಸ್ಯ ಸಂಜೆ.
ಡಿ. 20: ಬೆಳಿಗ್ಗೆ 7:30 ಕ್ಕೆ ಸಂಸ್ಥೆಯ ವಿದ್ಯಾರ್ಥಿಗಳಿಂದ ಬೃಹತ್ ಪ್ರಭಾತ್ ಫೇರಿ. ಸಂಜೆ 5:30 ಕ್ಕೆ ಶತಮಾನೋತ್ಸವದ ಮುಖ್ಯ ಉದ್ಘಾಟನಾ ಸಮಾರಂಭವಿದ್ದು, ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಡಿ. 21: ಶಾಲೆಯ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ ಸಮಾರಂಭ. ಕೇಂದ್ರ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಮತ್ತು ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಲಿಂಗರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಬಸವರಾಜ ಜಗಜಂಪಿ ಉಪಸ್ಥಿತರಿರುವರು.
ಡಿ. 22: ನಾಡಿನ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಡಿ. 23: ಬೆಳಗಾವಿಯ ಟಾಪ್ 10 ಬಾಡಿ ಬಿಲ್ಡರ್‌ಗಳ ರೋಚಕ ಪ್ರದರ್ಶನ ಹಾಗೂ ಹಳೆಯ ವಿದ್ಯಾರ್ಥಿ ಶ್ರೀ ಅಥಣಿ ಅವರಿಂದ ಸಂಗೀತ ರಸಮಂಜರಿ.
ಡಿ. 24: ಪ್ರಸಿದ್ಧ ಮರಾಠಿ ನಟ ಶ್ರೀ ಸಚಿನ್ ಪಿಳಗಾಂವಕರ್ ಅವರಿಂದ ಮನರಂಜನಾ ಕಾರ್ಯಕ್ರಮ.
ಡಿ. 25: ಖ್ಯಾತ ನಿರ್ದೇಶಕ ಹಾಗೂ ನಟ ಡಾ. ಗಿರೀಶ್ ಓಕ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಡಿ. 26: ಶತಮಾನೋತ್ಸವದ ಸಮಾರೋಪ ಸಮಾರಂಭಕ್ಕೆ ಪ್ರಸಿದ್ಧ ನಿರ್ದೇಶಕ ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರು ಸಾಕ್ಷಿಯಾಗಲಿದ್ದಾರೆ.
ಈ ಮಹೋತ್ಸವಕ್ಕೆ ಸಂಸದರಾದ ಜಗದೀಶ್ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮುಂತಾದ ಗಣ್ಯರು ಆಗಮಿಸಲಿದ್ದಾರೆ. ಈಗಾಗಲೇ 1500 ಹಳೆಯ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಪ್ರತಿದಿನ ಸುಮಾರು 3000 ಜನ ಸೇರುವ ನಿರೀಕ್ಷೆಯಿದೆ. ಸಂಸ್ಥೆಯ ಎಲ್ಲ ಆಜಿ-ಮಾಜಿ ವಿದ್ಯಾರ್ಥಿಗಳು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಅವಿನಾಶ್ ಪೋತದಾರ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಸುಧೀರ್ ಕುಲಕರ್ಣಿ, ಸಹ ಕಾರ್ಯದರ್ಶಿ ಅರವಿಂದ ಹುನಗುಂದ್, ಶತಮಾನೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಕುಮಾರ್ ಪೈ, ಕಾರ್ಯದರ್ಶಿ ಶೈಲಾ ಚಾಟೆ, ಸಹ ಕಾರ್ಯದರ್ಶಿ ರವಿ ಘಾಟ್ಗೆ ಹಾಗೂ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.


