ಬೆಳಗಾವಿ : ಬೆಳಗಾವಿ ವಿಮಾನ ನಿಲ್ದಾಣದಿಂದ ಒಂದಾದ ಮೇಲೊಂದರಂತೆ ವಿಮಾನ ಸಂಪರ್ಕ ಕಡಿತಗೊಳ್ಳುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಾಣಿಜ್ಯೋದ್ಯಮ ಸಂಘ, ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.
ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಮತ್ತು ಪದಾಧಿಕಾರಿಗಳು, ಬೆಳಗಾವಿ ಉದ್ಯಮಗಳ ಮೇಲೆ, ಜನಜೀವನದ ಮೇಲೆ, ಉದ್ಯೋಗಿಗಳ ಮೇಲೆ ಹಾಗೂ ಪ್ರತಿಯೊಂದು ವ್ಯಾಪಾರ ವ್ಯವಹಾರದ ಮೇಲೆ ವಿಮಾನ ಕಡಿತದ ವ್ಯತಿರಿಕ್ತ ಪರಿಣಾಮವಾಗುತ್ತಿದೆ ಎಂದರು.
ಉಡಾನ್ ಯೋಜನೆ ಸ್ಥಗಿತವಾದ ನಂತರ ಬೇರೆ ವಿಮಾನ ನಿಲ್ದಾಣಗಲಿಗೆ ತೊಂದರೆಯಾಗದಿದ್ದರೂ ಬೆಳಗಾವಿಗೆ ಮಾತ್ರ ಬಹಳ ತೊಂದರೆಯಾಗುತ್ತಿದೆ. ಸಂಚಾರ ದಟ್ಟಣೆ ಇದ್ದರೂ ಒಂದಾದಮೇಲೊಂದರಂತೆ ವಿಮಾನ ಕಡಿತವಾಗುತ್ತಿರುವುದು ವಿಪರ್ಯಾಸವಾಗಿದೆ. ಇದರಿದಾಗಿ ಉದ್ಯಮಿಗಳಿಗೆ, ರಫ್ತುದಾರರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತಿದೆ. ಈ ಕುರಿತು ಈಗಾಗಲೆ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ಮುಂಬೈ, ಚೆನ್ನೈ, ನವದೆಹಲಿ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಸಂಪರ್ಕ ಅತ್ಯಗತ್ಯವಾಗಿದೆ. ಸಧ್ಯದಲ್ಲೇ ಕೇಂದ್ರ ಸಚಿವರನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸಲಾಗುವುದು. ಪರಿಹಾರ ಸಿಗದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಫೌಂಡ್ರಿ ಕ್ಲಸ್ಟರ್ ಅಧ್ಯಕ್ಷ ರಾಮ್ ಭಂಡಾರೆ, ಲಘು ಉದ್ಯೋಗ ಭಾರತಿ ರಾಷ್ಟ್ರೀಯ ಉಪಾಧ್ಯಕ್ಷ ಸಚಿನ್ ಸಬ್ನಿಸ್, ವಾಣಿಜ್ಯೋದ್ಯಮ ಸಂಘದ ಗೌರವ ಕಾರ್ಯದರ್ಶಿ ಸತೀಶ ಕುಲಕರ್ಣಿ, ಲಘು ಉದ್ಯೋಗ ಭಾರತಿಯ ಜಿಲ್ಲಾಧ್ಯಕ್ಷ ಮಹೇಶ ಇನಾಮದಾರ, ಹೊಟೆಲ್ ಅಸೋಸಿಯೇಷನ್ ಅಧ್ಯಕ್ಷ ಅಜಯ ಪೈ,
ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ನಿತಿನ್ ಲಾಂಡಗೆ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು, ವಿಮಾನ ಸಂಪರ್ಕ ಕಡಿತದಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ವಿವರಿಸಿದರು.
ವಾಣಿಜ್ಯೋದ್ಯಮ ಸಂಘದ ಪದಾಧಿಕಾರಿಗಳು, ಆಡಳಿತ ಮಂಡಳಿಯ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


