ಬೆಳಗಾವಿ: ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ರಮೇಶ ಕತ್ತಿ ಸ್ಪರ್ಧಿಸಿರುವ ಹುಕ್ಕೇರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪ್ರತಿನಿಧಿಸುವ ಮತಕ್ಷೇತ್ರದ ಚುನಾವಣೆಯನ್ನು ಹೈಕೋರ್ಟ್ ಧಾರವಾಡ ಪೀಠ ಮುಂದೂಡಿದೆ.
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ(ಡಿಸಿಸಿ) ಬ್ಯಾಂಕ್ 7 ನಿರ್ದೇಶಕ ಸ್ಥಾನಗಳಿಗೆ ಅ.19ರಂದು ಮತದಾನ ನಿಗದಿಯಾಗಿತ್ತು. ಆದರೆ, ಡೆಲಿಗೇಷನ್ ಸಮಸ್ಯೆ ಮುಂದಿಟ್ಟುಕೊಂಡು ಹುಕ್ಕೇರಿ ತಾಲೂಕಿನ ಮದಿಹಳ್ಳಿ ಪಿಕೆಪಿಎಸ್ ನಿರ್ದೇಶಕರೊಬ್ಬರು ಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಹುಕ್ಕೇರಿ ಕ್ಷೇತ್ರಕ್ಕೆ ನಡೆಯಬೇಕಿದ್ದ ಮತದಾನವನ್ನು ಮುಂದೂಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಕೋರಂ ಇಲ್ಲದೆಯೇ ಮದಿಹಳ್ಳಿ ಪಿಕೆಪಿಎಸ್ನಲ್ಲಿ ಡೆಲಿಗೇಷನ್ ಠರಾವು ಪಾಸ್ ಮಾಡಲಾಗಿದೆ ಎಂದು ನಿರ್ದೇಶಕ ಭೀಮಸೇನ ಬಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಮುಂದಿನ ಆದೇಶದವರೆಗೆ ಚುನಾವಣೆ ಮುಂದೂಡಿ ಆದೇಶ ಹೊರಡಿಸಿದೆ ಎಂದು ಹೆಚ್ಚುವರಿ ಸರ್ಕಾರಿ ವಕೀಲ ರಮೇಶ ಚಿಗರಿ ಮಾಹಿತಿ ನೀಡಿದ್ದಾರೆ.
ಇದೇ ಮದಿಹಳ್ಳಿ ಪಿಕೆಪಿಎಸ್ನಲ್ಲಿ ಡೆಲಿಗೇಷನ್ ಠರಾವು ಪಾಸ್ ಮಾಡುವ ಸಂಬಂಧ ನಡೆದ ತಂಟೆಯಲ್ಲಿ, ಸಚಿವ ಸತೀಶ ಜಾರಕಿಹೊಳಿ ಮುಂದೆಯೇ ಮಹಿಳೆಯೊಬ್ಬರು ತಮ್ಮ ಪತಿ, ನಿರ್ದೇಶಕರ ಕಪಾಳಕ್ಕೆ ಹೊಡೆದಿದ್ದು ದೊಡ್ಡ ಸುದ್ದಿ ಆಗಿತ್ತು.