ಇಂಡಿ: ಪಾಲಕರ ಸಭೆಯು ಶಾಲಾ ನಿರ್ವಹಣೆಯಲ್ಲಿ ಪಾಲಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಮತ್ತು ಶಾಲೆಯ ಅಭಿವೃದ್ಧಿಯಲ್ಲಿ ಪಾರದರ್ಶಕತೆ ತರುವ ಉದ್ಧೇಶ ಹೊಂದಿದೆ. ಈ ನಿಮಿತ್ತ ಸಾಮಾಜಿಕ ಪರಿಶೋಧನೆಯನ್ನು ಸರ್ಕಾರವು ಆಯ್ದ ಶಾಲೆಗಳಲ್ಲಿ ನಡೆಸಲಾಗುತ್ತಿದೆ ಎಂದು ದೇವರ ಹಿಪ್ಪರಗಿ ತಾಲೂಕ ಪಂಚಾಯಿತಿ ಸಾಮಾಜಿಕ ಲೆಕ್ಕ ಪರಿಶೋಧನಾ ಅಧಿಕಾರಿ ಬಸವರಾಜ ಮಾದನಶೆಟ್ಟಿ ಹೇಳಿದರು.
ಶುಕ್ರವಾರದಂದು ತಾಲೂಕಿನ ಹಿರೇರೂಗಿಯ ಕೆಜಿಎಸ್ ಶಾಲೆಯಲ್ಲಿ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಬೆಂಗಳೂರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು, ಸಮಗ್ರ ಶಿಕ್ಷಣ ಅಭಿಯಾನ ಮತ್ತು ಪಿ ಎಂ ಪೋಷಣ್ ಅಭಿಯಾನದ ಸಹಯೋಗದಲ್ಲಿ ಹಮ್ಮಿಕೊಂಡ ‘ಸಾಮಾಜಿಕ ಪರಿಶೋಧನಾ ಶಾಲಾ ಪೋಷಕರ ಸಭೆ’ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಯಲ್ಲಿ ಮಕ್ಕಳ ಕಲಿಕೆ, ಸುರಕ್ಷತೆ, ಇಲಾಖೆಯ ಯೋಜನೆಗಳು, ಶಾಲೆಯ ಕುಂದು-ಕೊರತೆಗಳ ಬಗ್ಗೆ ಪಾಲಕರೊಂದಿಗೆ ಚರ್ಚಿಸಿ, ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧಿಸಲು ಈ ಪಾಲಕರ ಸಭೆಯು ಸಹಕಾರಿಯಾಗಿದೆ ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಮನೆಯೇ ಮೊದಲ ಪಾಠ ಶಾಲೆ, ಜನನಿ ಮೊದಲ ಗುರು ಎಂಬಂತೆ ಮನೆಯಲ್ಲಿಯೇ ಮಕ್ಕಳಿಗೆ ಪ್ರಾಮಾಣಿಕತೆ, ದೇಶಭಕ್ತಿ, ಸಹಾನುಭೂತಿ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿ, ಮನೆಯನ್ನೇ ವಿಶ್ವವಿದ್ಯಾಲಯವನ್ನಾಗಿ ಮಾಡುವ ಗುರುತರ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಹೇಳಿದರು.
ಕೆಬಿಎಸ್ ಶಾಲೆಯ ಮುಖ್ಯ ಶಿಕ್ಷಕ ಅನಿಲ ಪತಂಗಿ ಶಾಲೆಯ ಸವಲತ್ತು ಹಾಗೂ ಸರ್ಕಾರದ ಶಾಲಾ ಯೋಜನೆಗಳ ಕುರಿತು ಮಾತನಾಡಿದರು.
ಕೆಜಿಎಸ್ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಸುದರ್ಶನ ಬೇನೂರ ಅಧ್ಯಕ್ಷತೆ ವಹಿಸಿದ್ದರು.ಕೆಬಿಎಸ್ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಮಾಳಪ್ಪ ಪೂಜಾರಿ, ಸದಸ್ಯರಾದ ರವಿ ಹೊನ್ನಳ್ಳಿ, ಕಾಶೀನಾಥ ದಳವಾಯಿ, ಹಣಮಂತ ಝಳಕಿ, ಶಾಲುಬಾಯಿ ಸೈನಸಾಕಳೆ, ಪಡೆವ್ವ ನಡುವಿನಮನಿ, ಜಯಶ್ರೀ ಸಾಲೋಟಗಿ, ಜ್ಯೋತಿ ಹೊಸಮನಿ, ಮುಖ್ಯ ಶಿಕ್ಷಕಿ ವ್ಹಿ ವೈ ಪತ್ತಾರ ಸೇರಿದಂತೆ ಶಾಲಾ ಶಿಕ್ಷಕರು, ತಾಯಂದಿರು, ಪಾಲಕರು, ಮಕ್ಕಳು ಭಾಗವಹಿಸಿದ್ದರು.
ಫೋಟೋ ಕ್ಯಾಫ್ಸನ್ 09 ಇಂಡಿ 03 : ತಾಲೂಕಿನ ಹಿರೇರೂಗಿಯ ಕೆಜಿಎಸ್ ಶಾಲೆಯಲ್ಲಿ ‘ಸಾಮಾಜಿಕ ಪರಿಶೋಧನಾ ಶಾಲಾ ಪೋಷಕರ ಸಭೆ’ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


