ಬೆಂಗಳೂರು: ಶಾಸಕ ಬಸನಗೌಡ ಯತ್ನಾಳ ಅವರನ್ನು ರಾಜಕೀಯವಾಗಿ ಮುಗಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಅವರ ಕಬ್ಬಿನ ಕಾರ್ಖಾನೆಗೆ ಅನುಮತಿ ನೀಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬೊಮ್ಮಾಯಿ ಆರೋಪಿಸಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿ ಅನ್ಯಾಯದ ವಿರುದ್ದ ಶಾಸಕ ಬಸವನಗೌಡ ಪಾಟೀಲ್ ಅವರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು, ನ್ಯಾಯ ಸತ್ತು ಹೋಗಿದೆ, ದ್ವೇಷದ ರಾಜಕಾರಣ ನಡೆಯುತ್ತಿದೆ. ಎಲ್ಲವೂ ಕಾನೂನು ಪ್ರಕಾರ ಮಾಡಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಕ್ಕರೆ ಕಾರ್ಖಾನೆ ಆರಂಭ ಮಾಡಿದ್ದಾರೆ. ಆದರೆ, ಕಳೆದ ವರ್ಷ ಇವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆಗೆ ಅನುಮತಿ ಕೊಡಲಿಲ್ಲ. ಆಗ ಇವರು ಕೋರ್ಟ್ ಮೊರೆ ಹೋದರು, ಕೋರ್ಟ್ ನಾಲ್ಕು ವಾರದೊಳಗೆ ಕಾರ್ಖಾನೆ ಪುನಾರಂಭಕ್ಕೆ ಆದೇಶ ಕೊಟ್ಟಿತು. ಆದರೆ, ಮಾಲಿನ್ಯ ನಿಯಂತ್ರಣ ಮಂಡಳಿಯವರು ತಾಂತ್ರಿಕ ಕಾರಣದ ನೆಪ ಹೆಳುತ್ತಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ರಾಜಕೀಯವಾಗಿ ಮುಗಿಸಬೇಕು ಅಂತ ಅನುಮತಿ ಕೊಡುತ್ತಿಲ್ಲ ಎಂದು ಆರೋಪಿಸಿದರು.
ಮಾಲಿನ್ಯ ನಿಯಂತ್ರಣ ಮಂಡಳಿ ಬಹಳ ದೊಡ್ಡ ತಾರತಮ್ಯ ಮಾಡುತ್ತಿದೆ. ಹಲವು ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ಕೊಟ್ಟು, ಇವರಿಗೆ ತಾರತಮ್ಯ ಮಾಡಲಾಗುತ್ತಿದೆ. ಪಿಸಿಬಿ ಕಾನೂನು ಉಲ್ಲಂಘಿಸಿದ ಕಾರ್ಖಾನೆಗಳಿಗೆ ಅನುಮತಿ ಕೊಟ್ಟಿದೆ
ನಾವು ಇದನ್ನು ಇಲ್ಲಿಗೇ ಬಿಡುವುದಿಲ್ಲ, ಹೋರಾಟ ಮಾಡುತ್ತೇವೆ. ಈ ಕಾರ್ಖಾನೆ ನಂಬಿ ಸಾವಿರಾರು ರೈತರು ಇದ್ದಾರೆ. ಈ ಸಲ ಆ ಭಾಗದಲ್ಲಿ ಹೆಚ್ಚು ಕಬ್ಬು ಬೆಳೆದಿದ್ದಾರೆ, ಈ ಕಾರ್ಖಾನೆ ತೆರೆಯಬೇಕಿದೆ. ಸರ್ಕಾರ ಒಂದು ಕಡೆ ಉತ್ತರ ಕರ್ನಾಟಕದ ಕಡೆಗೆ ಕೈಗಾರಿಕೆಗಳು ಬರಬೇಕು ಅಂತ ಹೇಳುತ್ತದೆ. ಆದರೆ, ಇನ್ನೊಂದು ಕಡೆ ಈ ರೀತಿಯ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.