ಚನ್ನಮ್ಮನ ಕಿತ್ತೂರು: ಜುಲೈ 16ರಂದು ನಡೆದ ಭಾರತೀಯ ಜನತಾ ಪಕ್ಷದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ ಅವರು, “ಶರಣರು ಬರವೆಮಗೆ ಪ್ರಾಣ ಜೀವಾಳವಯ್ಯ” ಎಂಬ ಬಸವ ವಚನವನ್ನು ತಿರುಚಿ, ಅವಾಚ್ಯ ಶೈಲಿಯಲ್ಲಿ ಉಲ್ಲೇಖಿಸಿದ್ದು, ಲಿಂಗಾಯತ ಸಮುದಾಯದ ಭಾವನೆಗಳಿಗೆ ತೀವ್ರ ಧಕ್ಕಿಯಾಗಿದೆ.
ಈ ಕುರಿತು ರಾಷ್ಟ್ರೀಯ ಬಸವ ದಳ, ರಾಷ್ಟ್ರೀಯ ಬಸವ ಸೇನೆ, ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಬಸವಾಭಿಮಾನಿಗಳ ನೇತೃತ್ವದಲ್ಲಿ ಡೊಂಬರಕೊಪ್ಪ ಐಬಿಯಲ್ಲಿ ಜುಲೈ 20 ರಂದು ಪತ್ರಿಕಾಗೋಷ್ಠಿ ನಡೆಯಿತು. ಈ ಸಂದರ್ಭದಲ್ಲಿ ಮುಖಂಡ ಶರಣ ಅಶೋಕ ಅಳ್ನಾವರ ಮಾತನಾಡಿ, “ಈ ಹೇಳಿಕೆ ಲಿಂಗಾಯತ ಧರ್ಮ, ವಚನ ಸಾಹಿತ್ಯ ಹಾಗೂ ವಿಶ್ವಗುರು ಬಸವಣ್ಣನವರಿಗೆ ಅವಮಾನವಾಗಿದೆ. ಸಂದೀಪ್ ದೇಶಪಾಂಡೆ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಜುಲೈ 21ರಂದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ ಅವರು ವಚನ ಸಾಹಿತ್ಯದ ಪ್ರಾಶಸ್ತ್ಯವನ್ನು ಉದಾಹರಿಸುತ್ತಾ 12ನೇ ಶತಮಾನದಲ್ಲಿ ಶರಣರು ತಮ್ಮ ಪ್ರಾಣ ತ್ಯಾಗಮಾಡಿ ವಚನ ಸಾಹಿತ್ಯ ಉಳಿಸಿದ್ದಾರೆ. ಅದನ್ನು ಇಂತಹ ಹೇಳಿಕೆಗಳ ಮೂಲಕ ಅವಹೇಳನಗೊಳಿಸುವ ಪಟ್ಟಭದ್ರ ಹಿತಾಶಕ್ತಿಗಳ ಪ್ರಯತ್ನವನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಉಗ್ರವಾಗಿ ಖಂಡಿಸಿದರು.
ಬೈಲಹೊಂಗಲ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ವಿರೇಶ ಹಲಕಿ ಮಾತನಾಡಿ ಬಿಜೆಪಿ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ ಬುದ್ಧಿಜೀವಿ ವ್ಯಕ್ತಿಯಾಗಿದ್ದು, ಜಾಣಮಾತಿನಿಂದಲೇ ವಚನವನ್ನು ತಿರುಚಿ ಮಾತನಾಡಿದ್ದಾರೆ. ಈ ಅಪರಾಧ ಭಾರೀ ಗಂಭೀರವಾದುದು. ಅವರು ಕ್ಷಮೆ ಕೇಳದಿದ್ದರೆ ಭಾರತೀಯ ದಂಡ ಸಂಹಿತೆಯ 295ಎ ಪ್ರಕಾರ ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಬಸವರಾಜ ಕಡೆಮನಿ ಮಾತನಾಡಿ ಧರ್ಮಗುರು ಬಸವಣ್ಣನವರಿಗೆ ಲಿಂಗಾಯತ ಧರ್ಮಕ್ಕೆ ಮತ್ತು ಧರ್ಮಗ್ರಂಥವಾದ ವಚನ ಸಾಹಿತ್ಯಕ್ಕೆ ಅವಮಾನ ಮಾಡಿದರೆ ನಮ್ಮ ಧರ್ಮದಲ್ಲಿರುವ ಗಣಾಚಾರ ಪ್ರಕಾರ ಖಡ್ಗ ಹಿಡಿದು ಹೋರಾಟ ಮಾಡಬೇಕು ಎಂಬ ಪ್ರತೀತಿ ಇದೆ ಹಾಗಂತ ಅವರ ವಿರುದ್ಧ ನಾವು ಖಡ್ಗ ಹಿಡಿಯುವುದಿಲ್ಲ ತಿಳಿಯದೇ ತಪ್ಪು ಮಾಡಿದರೆ ನಮ್ಮ ಅಭ್ಯಂತರವಿಲ್ಲ ತಿಳಿದು ತಿಳಿದು ಅವಹೇಳನಕಾರಿಯಾಗಿ ಮಾತನಾಡಿದರೆ ನಾವು ಸುಮ್ಮನೆ ಕೂಡುವುದಿಲ್ಲ ಎಂದು ಎಚ್ಚರಿಸಿದ ಅವರು ವಚನಗಳು ನಮ್ಮ ಧರ್ಮ ಮತ್ತು ಸಂಸ್ಕೃತಿಯ ಆಧಾರಸ್ಥಂಭವಾಗಿದ್ದು, ಇವುಗಳ ಅವಹೇಳನವು ಶರಣ ಸಂಸ್ಕೃತಿಗೆ ವಿರುದ್ಧವಾಗಿದೆ. ಸಮಾಜದಲ್ಲಿ ಶಾಂತಿ ಕದಡುವಂತಾಗಿದೆ. ಕಾರಣ ಇಂತಹ ಹೇಳಿಕೆ ನೀಡಿದ ವ್ಯಕ್ತಿಯ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತಪಡಿಸಿದ್ದಾರೆ.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ ತಮ್ಮ ಭಾಷಣದಲ್ಲಿ ವಿಶ್ವಗುರು ಬಸವಣ್ಣನವರ ವಚನವನ್ನು ಅವಹೇಳನಕಾರಿಯಾಗಿ ತಿರುಚಿ ಅವಾಚ್ಯ ಭಾಷೆ ಬಳಸಿ ಮಾತನಾಡಿದ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿದ್ದು ಜುಲೈ 21ರಂದು ಪಾದಯಾತ್ರೆ ಮೂಲಕ ಪ್ರತಿಭಟನೆ: ಈ ಹಿನ್ನಲೆಯಲ್ಲಿ ಜುಲೈ 21ರಂದು ಬೆಳಿಗ್ಗೆ 10 ಗಂಟೆಗೆ, ಚನ್ನಮ್ಮನ ಕಿತ್ತೂರಿನಲ್ಲಿ ರಾಣಿ ಚನ್ನಮ್ಮನ ವೃತ್ತದಿಂದ ಕೋಟೆ ಆವರಣದವರೆಗೆ ಪಾದಯಾತ್ರೆ ನಡೆಸಿ, ಪೊಲೀಸ್ ಠಾಣೆಗೆ ತೆರಳಿ, ಸಂದೀಪ್ ದೇಶಪಾಂಡೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು. ಸುದೀರ ವಾಲಿ. ಪುರಸಭಾ ಸದಸ್ಯರು ಹಾಗೂ ರಾಷ್ಟ್ರೀಯ ಬಸವ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಬೈಲಹೊಂಗಲ
ಸುದ್ದಿಗೋಷ್ಠಿಯಲ್ಲಿ ದೊಡಗೌಡ ಹುಚ್ಚಗೌಡರ, ಮಡಿವಾಳಪ್ಪ ಅಸುಂಡಿ, ಮಡಿವಾಳಪ್ಪ ಕೋಟಿ, ನಾಗರಾಜ ಮಿರಾಜಗಿ, ನಿಂಗಪ್ಪ ಕುಗಟಿ, ಉಮೇಶ ಹುಂಬಿ, ಶಿವಾನಂದ ಮಾಳಗಿ ಸೇರಿದಂತೆ ಅನೇಕ ಶರಣರು ಉಪಸ್ಥಿತರಿದ್ದರು.