ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಡಬಲ್ ಡೆಕ್ಕರ್ ಅಸ್ತ್ರ ಬಳಸಿದ್ದು ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್ ಪ್ರಾಯೋಗಿಕ ಸಂಚಾರಕ್ಕೆ ಇಂದು ಡಿಸಿಎಂ ಡಿ ಕೆ ಶಿವಕುಮಾರ್ ಹಸಿರು ನಿಶಾನೆ ತೋರಿಸಲಿದ್ದಾರೆ.
ಈ ಹಿಂದೆ ದೇಶದಲ್ಲಿ ಮುಂಬೈ ಜೈಪುರದಲ್ಲಿ ಮಾತ್ರ ಡಬಲ್ ಡೆಕ್ಕರ್ ವ್ಯವಸ್ಥೆ ಇತ್ತು. ಬೆಂಗಳೂರಿನ ಬಹು ನಿರೀಕ್ಷಿತ ಡಬಲ್ ಡೆಕ್ಕರ್ ಫ್ಲೈ ಓವರ್ 3.36 ಕಿಲೋ ಮೀಟರ್ ಉದ್ದವಿದೆ. ಇದು ರಾಗಿಗುಡ್ಡ- ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ನಿರ್ಮಾಣವಾಗಿದೆ. 449 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಡಬಲ್ ಡೆಕ್ಕರ್ ಫ್ಲೈ ಓವರ್, ರಾಗಿಗುಡ್ಡ -ಸಿಲ್ಕ್ ಬೋರ್ಡ್ ಜಂಕ್ಷನ್ ಸಂಚಾರ ದಟ್ಟಣೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಸಿಗ್ನಲ್-ಮುಕ್ತ ಕಾರಿಡಾರ್ ಆಗಿ ಪರಿವರ್ತಿಸುವಲ್ಲಿ ಇದು ಮಹತ್ವದ ಪಾತ್ರವಹಿಸಲಿದೆ. ರಾಗಿಗುಡ್ಡದಿಂದ ಇನ್ಮುಂದೆ ಸಿಗ್ನಲ್ ಇಲ್ಲದೆ ಸಿಲ್ಕ್ ಬೋರ್ಡ್ ಜಂಕ್ಷನ್ಗೆ ಪ್ರಯಾಣಿಸಲು ಅವಕಾಶ ಸಿಗಲಿದೆ.
ಈ ಡಬಲ್ ಡೆಕ್ಕರ್ ಫ್ಲೈಒವರ್ನಲ್ಲಿ ಮೆಟ್ರೋ ರೈಲು ಹಾಗೂ ವಾಹನ ಸಂಚರಿಸುತ್ತದೆ. ಕೆಳರಸ್ತೆಯಿಂದ ಡಬ್ಬಲ್ ಡೆಕ್ಕರ್‌ನ ಮೊದಲ ಫ್ಲೈಓವರ್ 8 ಮೀ. ಎತ್ತರದಲ್ಲಿದ್ದರೆ, ಮೆಟ್ರೋ ವಯಡಕ್ಟ್ 16 ಮೀ. ಎತ್ತರದಲ್ಲಿದೆ. ಇದೇ ಮೊದಲ ಬಾರಿಗೆ ನಗರದ ಫ್ಲೈಓವರ್ ಮೇಲೆ ಮೆಟ್ರೋ ಲೇನ್ ಹಾದು ಹೋಗಿದೆ. ಎಚ್‌ಎಸ್‌ಆರ್ ಲೇಔಟ್ ಹಾಗೂ ಹೊಸುರ್ ಲೇಔಟನ್ನು ಇದರಿಂದ ಅಡ್ಡಿಯಿಲ್ಲದೆ ತಲುಬಹುದು.