ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಸ್ವಾಗತಾರ್ಹ: ಎಎಪಿ 

Ravi Talawar
ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಸ್ವಾಗತಾರ್ಹ: ಎಎಪಿ 
WhatsApp Group Join Now
Telegram Group Join Now
 ಬಳ್ಳಾರಿ,ಸೆ.೦8.: ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ಗಳ ಮೂಲಕ ನಡೆಸುವ ಕರ್ನಾಟಕ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ  ಜಗದೀಶ್ ವಿ.ಸದಂ, ಜಿಲ್ಲಾಧ್ಯಕ್ಷ ಜೆ.ವಿ.ಮಂಜುನಾಥ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಅನೇಕ ರಾಜ್ಯಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಮತ ಕಳ್ಳತನ ಆಗಿದೆ ಎಂಬ ಸಾಕ್ಷ್ಯಸಮೇತದ ಇಂಡಿಯಾ ಒಕ್ಕೂಟದ ನಾಯಕರುಗಳ ಗುರುತರ  ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡದ ಪ್ರಧಾನಿಗಳ ಉದ್ಧಟತನ ಒಂದು ಕಡೆ.  ಮತ್ತೊಂದು ಕಡೆ ಆರೋಪಿತ ಸ್ಥಾನದ ಕೇಂದ್ರ ಚುನಾವಣಾ ಆಯೋಗವು ಸೂಕ್ತ ಸ್ಪಷ್ಟೀಕರಣಗಳನ್ನು ಹಾಗೂ ಸಮಜಾಯಿಶಿ ಗಳನ್ನು ನೀಡದೆ, ಆರೋಪ ಮಾಡಿದ್ದ ನಾಯಕರುಗಳ ವಿರುದ್ಧವೇ  ರಾಜಕೀಯ ಪ್ರತಿಕ್ರಿಯೆಗಳನ್ನು ನೀಡಿ ಮುಚ್ಚಿ ಹಾಕುವ ಯಂತ್ರಗಾರಿಕೆಯಲ್ಲಿ ತೊಡಗಿತ್ತು.
ಇವರ ನಡೆಯಿಂದಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಹಾಗೂ ಕೇಂದ್ರ ಸರ್ಕಾರಕ್ಕೆ  ಆಮೂಲಾಗ್ರ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಇಚ್ಛೆ ಇಲ್ಲದಿರುವುದು  ದೇಶದ ಜನತೆಗೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ.  ಈ ಸಂದರ್ಭದಲ್ಲಿ  ಕರ್ನಾಟಕ ರಾಜ್ಯ ಸರ್ಕಾರವು  ಇಂತಹ ಕಠಿಣ ಸಂದರ್ಭದಲ್ಲಿ ಬ್ಯಾಲೆಟ್ ಪೇಪರ್ ಬಳಕೆಯ ನಿರ್ಧಾರ ಕೈಗೊಂಡಿರುವುದು ಅತ್ಯಂತ ಸ್ವಾಗತರ್ಹ ಕ್ರಮ ಎಂದರು.
ಕಳೆದ ದೆಹಲಿ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿಯೂ ಸಹ ಆಮ್ ಆದ್ವಿ ಪಕ್ಷವು ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಾವಿರಾರು ಮತದಾರರುಗಳನ್ನು ಕೈ ಬಿಟ್ಟಿದ್ದ ಸಂದರ್ಭದಲ್ಲಿ ಅನೇಕ ಹಂತಗಳಲ್ಲಿ ಹೋರಾಟಗಳನ್ನು ನಡೆಸಿತ್ತು. ಮತ ಪಟ್ಟಿಯಿಂದ ಕೈ ಬಿಟ್ಟಿದ್ದ ಸಾವಿರಾರು  ಮತದಾರರುಗಳ ಬೃಹತ್ ರ್ಯಾಲಿಗಳನ್ನು ನಡೆಸಿ ಚುನಾವಣಾ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು ಸಹ ಯಾವುದೇ ಕ್ರಮ ತೆಗೆದುಕೊಳ್ಳದ ಕೇಂದ್ರ ಚುನಾವಣಾ ಆಯೋಗವು ಇಂತಹ ಅನೇಕ ಅಕ್ರಮ ಮತದಾನ ಪ್ರಕ್ರಿಯೆಗಳಲ್ಲಿ ಗೊತ್ತಿದ್ದರೂ ಸಹ ಕಣ್ಮುಚ್ಚಿ ಕುಳಿತುಕೊಂಡಿತ್ತು.
ದೇಶದ ಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಮತ ಕಳ್ಳತನ ಮಾಡಿ ಅಧಿಕಾರ ಪಡೆದುಕೊಳ್ಳುವ ಪ್ರಬಲರ ಹುನ್ನಾರ ತಪ್ಪಬೇಕಾದರೆ ಬ್ಯಾಲೆಟ್ ಪೇಪರ್ ನ ಅವಶ್ಯಕತೆ ಅತ್ಯಂತ ಜರೂರಾಗಿದೆ. ಪಕ್ಷವು  ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತದೆ. ಭಾರತೀಯ ಜನತಾ ಪಕ್ಷಕ್ಕೆ ಮತ ಕಳ್ಳತನವನ್ನು  ನಿಜಕ್ಕೂ  ತಡೆಗಟ್ಟುವ  ಮನಸ್ಸಿದ್ದಲ್ಲಿ  ಬಿಜೆಪಿ ಅಧಿಕಾರ ಹೊಂದಿರುವ ಇನ್ನಿತರ ರಾಜ್ಯಗಳಲ್ಲಿಯೂ ಸಹ ಇದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು  ಜಗದೀಶ್ ವಿ. ಸದಂ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article