ಬಳ್ಳಾರಿ,ಏ.02
ಸೇವಾವಧಿಯಲ್ಲಿ ಎದುರಾದ ಕ್ಲಿಷ್ಟ ಪರಿಸ್ಥಿತಿಗಳು ಮತ್ತು ಕಠಿಣ ಪ್ರಕರಣಗಳ ತನಿಖೆಯಲ್ಲಿ ಮೇಲಾಧಿಕಾರಿಗಳ ಮಾರ್ಗದರ್ಶನ ಹಾಗೂ ಪೊಲೀಸ್ ಇಲಾಖೆ ನೀಡಿದ ಶಕ್ತಿಯಿಂದ ಸೇವೆ ತೃಪ್ತಿ ನೀಡಿದೆ ಎಂದು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ನಿವೃತ್ತ ಸಹಾಯಕ ಸಬ್-ಇನ್ಸ್ ಪೆಕ್ಟರ್ ಶ್ರೀನಿವಾಸಲು ಎಂ. ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಜಿಲ್ಲಾ ಸಶಸ್ತ್ರ ಪೊಲೀಸ್ ಕವಾಯತು (ಡಿಎಆರ್) ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಪೊಲೀಸ್ ಧ್ವಜ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ನಿವೃತ್ತಿಯ ನಂತರವೂ ಸಿಗುವ ಆರೋಗ್ಯ ಭಾಗ್ಯ ಯೋಜನೆ, ಪೊಲೀಸ್ ಕ್ಯಾಂಟೀನ್ ಮತ್ತು ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯಗಳು ಅನುಕೂಲಕರವಾಗಿದ್ದು, ನಿವೃತ್ತ ಸಿಬ್ಬಂದಿಗೆ ಇಲಾಖೆಯಿಂದ ಬರಬೇಕಾದ ಸೌಲಭ್ಯಗಳು ವಿಳಂಬವಿಲ್ಲದೆ ತಲುಪುವಂತಾಗಬೇಕು ಎಂದರು.
ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಸಿಬ್ಬಂದಿಯ ಕುಟುಂಬದವರಿಗೆ ಅನುಕಂಪದ ಆಧಾರದ ಉದ್ಯೋಗ ಮತ್ತು ಇತರ ದಾಖಲೆಗಳ ವಿಲೇವಾರಿ ಬಗ್ಗೆ ಮಾರ್ಗದರ್ಶನ ನೀಡಲು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪ್ರತ್ಯೇಕ ವಿಭಾಗ ಅಥವಾ ಸಹಾಯ ಕೇಂದ್ರವನ್ನು ತೆರೆಯಬೇಕು ಎಂದು ಮನವಿ ಮಾಡಿದರು.
ನಿವೃತ್ತ ಅಧಿಕಾರಿಗಳನ್ನು ಮುಖ್ಯ ಅತಿಥಿಗಳನ್ನಾಗಿ ಕರೆಸಿ ಗೌರವಿಸುವ ಸಂಪ್ರದಾಯಕ್ಕೆ ಪೊಲೀಸ್ ಇಲಾಖೆಗೆ ಇದೇ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ನವೀನ್ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೊಲೀಸ್ ಇಲಾಖೆಯು ತನ್ನ ಸಿಬ್ಬಂದಿ ಮತ್ತು ನಿವೃತ್ತ ಅಧಿಕಾರಿಗಳ ಕ್ಷೇಮೋಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ. ಕರ್ತವ್ಯದ ಅವಧಿಯಲ್ಲಿ ಮರಣ ಹೊಂದಿದ ಅಧಿಕಾರಿಗಳು ಹಾಗೂ ಮೃತ ನಿವೃತ್ತ ಅಧಿಕಾರಿಗಳ ಕುಟುಂಬಗಳಿಗೆ ನಗದು, ನಿವೃತ್ತ ಅಧಿಕಾರಿಗಳ ಆರೋಗ್ಯ ರಕ್ಷಣೆಗಾಗಿ ವೈದ್ಯಕೀಯ ಚಿಕಿತ್ಸಾ ಧನ ವಿತರಿಸಲಾಗಿದೆ ಎಂದು ತಿಳಿಸಿದರು.
ಧ್ವಜ ದಿನಾಚರಣೆಯ ಮೂಲಕ ಸಂಗ್ರಹವಾಗುವ ಮೊತ್ತವನ್ನು ಶೇ.50 ರಷ್ಟು ರಾಜ್ಯ ನಿವೃತ್ತ ಅಧಿಕಾರಿಗಳ ಕಲ್ಯಾಣ ನಿಧಿಗೆ ಮತ್ತು ಉಳಿದ ಶೇ.50 ರಷ್ಟು ಕೇಂದ್ರ ನಿಧಿಗೆ ಕಳುಹಿಸಲಾಗುತ್ತದೆ. ರಾಜ್ಯಕ್ಕೆ ಲಭಿಸುವ ಈ ಶೇ.50 ರಷ್ಟು ಹಣವನ್ನು ಪೊಲೀಸರ ಮತ್ತು ಅವರ ಕುಟುಂಬದ ವೈದ್ಯಕೀಯ ಸೌಲಭ್ಯ ಹಾಗೂ ತುರ್ತು ಆರ್ಥಿಕ ಸಹಾಯಕ್ಕಾಗಿ ವಿನಿಯೋಗಿಸಲಾಗುತ್ತದೆ ಎಂದು ಹೇಳಿದರು.
ಪೊಲೀಸ್ ಇಲಾಖೆಯ ಘನತೆಯನ್ನು ಎತ್ತಿಹಿಡಿಯುವಂತೆ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಉತ್ತಮ ಸೇವೆ ಮುಂದುವರಿಸುವAತೆ ಅಧಿಕಾರಿಗಳಿಗೆ ಕರೆ ನೀಡಿದರು.
ಬಳ್ಳಾರಿಯ ಡಿಎಆರ್ ಡಿಎಸ್ಪಿ ತಿಪ್ಪೇಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸೇನಾಪಡೆಯು ಕೇವಲ ಯುದ್ಧದ ಸಮಯದಲ್ಲಿ ಹೋರಾಡಿದರೆ, ಪೊಲೀಸ್ ಇಲಾಖೆಯು ಪ್ರತಿದಿನ ಹತ್ತು ಹಲವಾರು ಕಷ್ಟಕರ ಸನ್ನಿವೇಶಗಳನ್ನು ಎದುರಿಸಿ ಸಮಾಜದ ರಕ್ಷಣೆಗೆ ಶ್ರಮಿಸುತ್ತದೆ ಎಂದು ಸ್ಮರಿಸಿದರು.
1965 ಏಪ್ರಿಲ್ 2 ರಂದು ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ ಜಾರಿಗೆ ಬಂದಿದ್ದು, ಅಂದಿನಿAದ ಈ ದಿನವನ್ನು ಪೊಲೀಸ್ ಧ್ವಜ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನದಂದು ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸೇವೆಯನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
2025 ರ ಏ.01 ರಿಂದ 2026 ರ ಮಾ.31 ಅವಧಿಯಲ್ಲಿ ಜಿಲ್ಲೆಯ ಒಟ್ಟು 27 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿವೃತ್ತರಾಗಿದ್ದಾರೆ. ಅವರಲ್ಲಿ 7 ಜನ ಪಿ.ಎಸ್.ಐ, 2 ಜನ ಆರ್.ಎಸ್.ಐ, 13 ಜನ ಎ.ಎಸ್.ಐ, 3 ಜನ ಎ.ಆರ್.ಎಸ್.ಐ ಹಾಗೂ 2 ಜನ ಸಿ.ಎಚ್.ಸಿ ಸೇರಿದ್ದಾರೆ. 2025-26ನೇ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಒಟ್ಟು 160 ಪೊಲೀಸ್ ಅಧಿಕಾರಿಗಳಿಗೆ ತಲಾ 1 ಲಕ್ಷ ರೂ. ನಗದು ಬಹುಮಾನ ವಿತರಿಸಲಾಗಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು, ಶ್ರೀನಿವಾಸಲು ಎಂ. ಅವರು ಪೊಲೀಸ್ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಆಕರ್ಷಕ ಪಥ ಸಂಚಲನ ನಡೆಯಿತು. ನಂತರ ಪೊಲೀಸ್ ಧ್ವಜಗಳ ವಿತರಣೆ ಮಾಡಲಾಯಿತು.
ಈ ವೇಳೆ ಬಳ್ಳಾರಿ ನಗರ ಉಪವಿಭಾಗ ಡಿಎಸ್ಪಿ ಗೋವಿಂದರಾಜು, ತೋರಣಗಲ್ಲು ಉಪವಿಭಾಗ ಡಿಎಸ್ಪಿ ಪ್ರಸಾದ್ ಗೋಖಲೆ, ಜಿಲ್ಲಾ ಗೃಹರಕ್ಷಕ ದಳದ ಕಮಾಡೆಂಟ್ ಶೇಕ್ ಸಾಬ್ ಸೇರಿದಂತೆ ಜಿಲ್ಲೆಯ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿ- ಸಿಬ್ಬಂದಿ ವರ್ಗ, ಕುಟುಂಬ ವರ್ಗ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಬಳ್ಳಾರಿ: ‘ಪೊಲೀಸ್ ಧ್ವಜ ದಿನಾಚರಣೆ’ ಕಾರ್ಯಕ್ರಮದಲ್ಲಿ ನಿವೃತ್ತ ಎಎಸ್ಐ ಶ್ರೀನಿವಾಸಲು ಎಂ. ಮಾತು ಮೇಲಾಧಿಕಾರಿಗಳ ಮಾರ್ಗದರ್ಶನ, ಇಲಾಖೆ ನೀಡಿದ ಶಕ್ತಿಯಿಂದ ಸೇವೆ ತೃಪ್ತಿ


