ಬೆಳಗಾವಿ – 15: ಕರ್ನಾಟಕ ಸರ್ಕಾರದ ಬಸವರಾಜ ಕಟ್ಟೀಮನಿ ಪ್ರತಿಷ್ಠಾನವು ಬೆಳಗಾವಿ ಜಿಲ್ಲೆಯ ಪದವಿ ಮಹಾವಿದ್ಯಾಲಯಗಳ ಮತ್ತು ಶಿಕ್ಷಣ ಮಹಾವಿದ್ಯಾಲಯ(ಬಿ.ಇಡಿ)ಗಳ ವಿದ್ಯಾರ್ಥಿಗಳಿಗಾಗಿ “ಕಟ್ಟೀಮನಿ ಕಥಿ ಹೇಳೂಣು” ಎನ್ನುವ ಬಸವರಾಜ ಕಟ್ಟೀಮನಿ ಅವರು ಬರೆದಿರುವ ಕಥೆಗಳನ್ನು ಹೇಳುವ, ವಿನೂತನ ಸ್ಪರ್ಧೆಯನ್ನು ಅಕ್ಟೋಬರ್ ತಿಂಗಳ ಮೊದಲೆರಡು ವಾರಗಳಲ್ಲಿ ಆಯೋಜಿಸಲಿದೆ.
ಈ ವಾರದಲ್ಲಿ ಮೊದಲ ಹಂತದಲ್ಲಿ ಆಯಾ ಕಾಲೇಜಿನವರು ತಮ್ಮ ತಮ್ಮ ಕಾಲೇಜುಗಳ ಮಟ್ಟದಲ್ಲಿ “ಕಟ್ಟೀಮನಿ ಕಥಿ ಹೇಳೂಣು” ಸ್ಪರ್ಧೆಯನ್ನು ಏರ್ಪಡಿಸುವುದು. ಕಟ್ಟೀಮನಿಯವರು ಬರೆದಿರುವ ಮೌಲಿಕ ಕಥೆಗಳನ್ನು ವಿದ್ಯಾರ್ಥಿಗಳಿಂದ ಅವರದೇ ಶೈಲಿಯಲ್ಲಿ ಹೇಳಿಸುವುದು. ಅಲ್ಲಿ ಆಯ್ಕೆಯಾದ ಮೂರು ಜನ ವಿದ್ಯಾರ್ಥಿಗಳಿಗೆ ಪ್ರಥಮ, ದ್ವೀತಿಯ ಮತ್ತು ತೃತಿಯ ಸ್ಥಾನಗಳನ್ನು ಘೋಷಿಸುವುದು.
ಕಾಲೇಜು ಹಂತದ ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಮೂವರು ವಿದ್ಯಾರ್ಥಿಗಳಿಗೆ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ವತಿಯಿಂದ ಪ್ರಮಾಣ ಪತ್ರ ಮತ್ತು ಪುಸ್ತಕ ಬಹುಮಾನ ನೀಡಲಾಗುತ್ತದೆ. ಅದಕ್ಕಾಗಿ ಆಯಾ ಕಾಲೇಜಿನವರು ಸ್ಪರ್ಧೆ ಏರ್ಪಡಿಸಿದ ಸೂಚನಾ ಪತ್ರ, ಸ್ಪರ್ಧೆ ನಡೆಸಿದ ಎರಡು–ಮೂರು ಛಾಯಾಚಿತ್ರ (ಪೋಟೋ)ದೊಂದಿಗೆ, ಪ್ರಾಂಶುಪಾಲರಿಂದ ದೃಢೀಕರಿಸಿದ ಪತ್ರವನ್ನು ಕಳುಹಿಸಬೇಕಾಗುತ್ತದೆ.
ನಂತರ ಎರಡನೇ ಹಂತದಲ್ಲಿ, ಕಾಲೇಜುಗಳಲ್ಲಿ ಆಯ್ಕೆಯಾದ ಒಂದು ಕಾಲೇಜಿನ ಮೂವರು ವಿದ್ಯಾರ್ಥಿಗಳು ಮಾತ್ರ ಬೆಳಗಾವಿಯಲ್ಲಿ ಪ್ರತಿಷ್ಠಾನವು ಏರ್ಪಡಿಸುವ ಜಿಲ್ಲಾ ಮಟ್ಟದ “ಕಟ್ಟೀಮನಿ ಕಥಿ ಹೇಳೂಣು” ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಈ ಸ್ಪರ್ಧೆಯಲ್ಲಿ ವಿಜೇತರಾದ ಮೂರು ಜನ ವಿದ್ಯಾರ್ಥಿಗಳಿಗೆ ಪ್ರಥಮ ₹ 5000, ದ್ವಿತಿಯ ₹ 3000 ಮತ್ತು ತೃತಿಯ ₹ 2000 ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಗುವುದು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.
ಕಾಲೇಜು ಹಂತದಲ್ಲಿ ಸ್ಪರ್ಧೆ ಏರ್ಪಡಿಸುವ ಎಲ್ಲ ಮಹಾವಿದ್ಯಾಲಯಗಳು ದಿನಾಂಕ :30-9-2025ರ ಒಳಗಾಗಿ ಸಂಚಾಲನಾ ಸಮಿತಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಹಾಗೂ ಪ್ರತಿಷ್ಠಾನದ ವಿಳಾಸಕ್ಕೆ ಪತ್ರ ಬರೆದು ನೋಂದಣಿ ಮಾಡಿಸಬೇಕು ಮತ್ತು ಈ ಸ್ಪರ್ಧೆಯನ್ನು ಅಕ್ಟೋಬರ್ 15 ರೊಳಗಾಗಿ ಮುಗಿಸತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಕಟ್ಟೀಮನಿ ಕಥಿ ಹೇಳೂಣು ಸಂಚಾಲನಾ ಸಮಿತಿ ಅವರ ದೂರವಾಣಿ ಸಂಖ್ಯೆ : ಡಾ . ಯಲ್ಲಪ್ಪ ಹಿಮ್ಮಡಿ -92422 90846; ಡಾ . ಕೆ ಆರ್ ಸಿದ್ದಗಂಗಮ್ಮ -98400 55147; ಡಾ . ವಿದ್ಯಾ ಕುಂದರಗಿ -99002 21367 ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಯಲ್ಲಪ್ಪ ಹಿಮ್ಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.