ಬಳ್ಳಾರಿ,ಡಿ.31: ಜಿಲ್ಲೆಯ ಕುರಗೋಡು ಪಟ್ಟಣ ನಿವಾಸಿ, ಖ್ಯಾತ ಸಮಾಜ ಸೇವಕರಾದ ಚಾನಾಳ ಅಮರೇಶಪ್ಪ ಅವರು ಬಡವರಿಗೆ, ವಿಶೇಷವಾಗಿ ಓದುತ್ತಿರುವ ಮಕ್ಕಳಿಗೆ ಸಹಾಯ –ಸಹಕಾರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂದಾಳತ್ವ ವಹಿಸಿ ಸಲ್ಲಿಸುತ್ತಿರುವ ಸಮಾಜಮುಖಿ ಸೇವೆಯನ್ನು ಗುರುತಿಸಿ 2025–26ನೇ ಸಾಲಿನ ಸಮಾಜ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ದಾವಣಗೆರೆ ನಗರದ ವಿದ್ಯಾನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕುವೆಂಪು ಕನ್ನಡ ಭವನದಲ್ಲಿ ನಡೆದ ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯ 6ನೇ ಭಾವೈಕ್ಯತೆ ರಾಜ್ಯ ಸಮ್ಮೇಳನವು,
ವಿಶ್ವ ದರ್ಶನ ದಿನಪತ್ರಿಕೆಯ ಸಂಪಾದಕರಾದ ಡಾ.ಎಸ್.ಎಸ್.ಪಾಟೀಲ್ ಮತ್ತು ಸ್ವಾಮೀಜಿಗಳು ಪ್ರಶಸ್ತಿಯನ್ನು ಪ್ರಧಾನ ಮಾಡಿದರು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅಮರೇಶಪ್ಪ, ನಾನು ಯಾವುದೇ ಪ್ರಚಾರ ಮತ್ತು ಸ್ವಾರ್ಥವಿಲ್ಲದೆ ಸಾಮಾಜಿಕ ಶೈಕ್ಷಣಿಕ ಮತ್ತು ಧಾರ್ಮಿಕ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದೇನೆ ಈ ದಿನ ನನ್ನನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿರುವುದು ನನಗೆ ಇನ್ನಷ್ಟು ಸಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ ಪರಮಪೂಜ್ಯರು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಸೇರಿದಂತೆ ಹಲವಾರು ಪ್ರಮುಖ ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಅಧ್ಯಾತ್ಮ, ಧಾರ್ಮಿಕ ಜಾಗೃತಿ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅಮರೇಶಪ್ಪ ಅವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಗಣ್ಯರು ಪ್ರಶಂಸಿಸಿದರು. ನಾಡಿನ ಹರ–ಗುರು–ಶರಣರ ಆಶೀರ್ವಾದ ಸದಾ ಅವರ ಮೇಲೆ ಇರಲಿ ಎಂದು ಶುಭ ಹಾರೈಸಿದರು.


