ರಾಮನಗರ, (ಫೆಬ್ರವರಿ 07): ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿನಲ್ಲಿ ಟೋಲ್‌ನಿಂದ (Toll) ಎಸ್ಕೇಪ್ ಆಗುತ್ತಿದ್ದ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬ್ರೇಕ್ ಹಾಕಿದೆ. ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳು ಟೋಲ್ ಪಾವತಿಸದೇ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಬರುತ್ತಿದ್ದವು. ಇದರಿಂದ ಇದೀಗ ಹೆದ್ದಾರಿ ಪ್ರಾಧಿಕಾರ, ಬಿಡದಿ ಬಳಿಯ ನಿರ್ಗಮನ ರಸ್ತೆ ಬಂದ್ ಮಾಡಿದೆ. ಈ ಮೂಲಕ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಇದ್ದ ಸಂಪರ್ಕವನ್ನು ಕಡಿತಗೊಳಿಸಿದೆ.
ಇನ್ನು ರಾಷ್ಟ್ರೀಯ ಹೆದ್ದಾರಿಯ ಕ್ರಮಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂಚನಾ ಫಲಕವನ್ನೂ ಅಳವಡಿಸದೇ ಏಕಾಏಕಿ ಎಕ್ಸಿಟ್ ರಸ್ತೆಯನ್ನು ಬಂದ್ ಮಾಡಿರುವುದು ಸರಿಯಲ್ಲ. ರಾಮನಗರದಿಂದ ಬೆಂಗಳೂರಿಗೆ ಹೋಗುವುದಕ್ಕೂ ದುಬಾರಿ ಟೋಲ್ ಕಟ್ಟಬೇಕಾ ಎಂದು ಪ್ರಶ್ನಿಸುತ್ತಿದ್ದಾರೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ 2023 ಜು.1 ರಿಂದ ಪೂರ್ಣ ಪ್ರಮಾಣದ ಟೋಲ್ ಸಂಗ್ರಹಣೆ ಆರಂಭವಾಗಿತ್ತು. ರಾಜ್ಯದಲ್ಲಿರುವ ಬೇರೆ ರಾಷ್ಟ್ರೀಯ ಹೆದ್ದಾರಿಗಳಿಗೆ ಹೋಲಿಕೆ ಮಾಡಿದಲ್ಲಿ ಬೆಂಗಳೂರು – ಮೈಸೂರು ನಡುವಿನ ಎಕ್ಸ್ ಪ್ರೆಸ್ ವೇ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಕಣ್ಣಿಣಿಕೆ – ಶೇಷಗಿರಿಹಳ್ಳಿ ಟೋಲ್ ನಲ್ಲಿ 278.91 ಕೋಟಿ ರೂ. ಸಂಗ್ರವಾಗಿತ್ತು. ಇನ್ನು 2024-25ನೇ ಸಾಲಿನಲ್ಲಿ 167.32 ಕೋಟಿ ರು. ಟೋಲ್ ಶುಲ್ಕ ವಸೂಲಿಯಾಗಿತ್ತು.