ಬೆಂಗಳೂರು, ಏಪ್ರಿಲ್ 10: ಸಾಕಷ್ಟು ಪರ-ವಿರೋಧದ ನಡುವೆ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015 (Caste Census Report) ದತ್ತಾಂಶಗಳ ಅಧ್ಯಯನ ವರದಿ ಮಂಡನೆಗೆ ಕೊನೆಗೂ ದಿನಾಂಕ ಫಿಕ್ಸ್ ಆಗಿದೆ. ನಾಳೆ ನಡೆಯುವ ಸಂಪುಟ ಸಭೆಯಲ್ಲಿ (Cabinet Meeting) ಜಾತಿ ಜನಗಣತಿ ಸಮೀಕ್ಷಾ ವರದಿ ಮಂಡನೆಯಾಗಲಿದೆ. ಹಿಂದುಳಿದ ವರ್ಗಗಳ ಆಯೋಗವೂ ಕಳೆದ 2024ರ ಫೆಬ್ರವರಿ 29ರಂದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಇದೀಗ ವರದಿಯ ಲಕೋಟೆಯನ್ನು ತೆರೆದು ಪರೀಶೀಲಿಸಲು ಅನುಮೋದನೆ ಕೋರಿ ಮಂಡನೆಗೆ ಪ್ರಸ್ತಾಪಿಸಲಾಗಿದೆ.
ಹೆಚ್ ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಕಳೆದ 2015 ರ ಏಪ್ರಿಲ್ 11ರಿಂದ ಮೇ. 30ರವರೆಗೆ ರಾಜ್ಯದಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಲಾಗಿತ್ತು. ಆ ಮೂಲಕ ಜಾತಿ ವಿವರವೂ ಒಳಗೊಂಡಂತೆ ಒಟ್ಟು 54 ಮಾನದಂಡಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿ ಗಣಕೀಕರಣಗೊಳಿಸಲಾಗಿದೆ.