ಹಜ್​ ಯಾತ್ರೆಯಲ್ಲಿ ಕನಿಷ್ಠ 41 ಜೋರ್ಡಿಯನ್ನರು ಅತಿಯಾದ ಶಾಖದಿಂದ ಸಾವು

Ravi Talawar
ಹಜ್​ ಯಾತ್ರೆಯಲ್ಲಿ ಕನಿಷ್ಠ 41 ಜೋರ್ಡಿಯನ್ನರು ಅತಿಯಾದ ಶಾಖದಿಂದ ಸಾವು
WhatsApp Group Join Now
Telegram Group Join Now

ಕೈರೋ: ಸೌದಿ ಅರೇಬಿಯಾದಲ್ಲಿ ಬಿಸಿಲ ತಾಪ ಅತಿಯಾಗಿದ್ದು, ಹಜ್​ ಯಾತ್ರೆಯಲ್ಲಿ ಕನಿಷ್ಠ 41 ಜೋರ್ಡಿಯನ್ನರು ಅತಿಯಾದ ಶಾಖದಿಂದ ಸಾವನ್ನಪ್ಪಿದ್ದಾರೆ ಎಂದು ಜೋರ್ಡಾನ್​ ಅಧಿಕಾರಿಗಳು ತಿಳಿಸಿದ್ದಾರೆ. ಬಿಸಿಗಾಳಿಯಿಂದ ಸಾವನ್ನಪ್ಪಿದ ಜೋರ್ಡಾನ್ ಯಾತ್ರಾರ್ಥಿಗಳನ್ನು ಮೆಕ್ಕಾದಲ್ಲಿ ಸಮಾಧಿ ಮಾಡುವ ಕುರಿತು ಅಧಿಕಾರಿಗಳು ಮುಂದಾಗಿದ್ದಾರೆ. ಇದರ ಜೊತೆಗೆ ನಾಪತ್ತೆಯಾಗಿರುವ ಯಾತ್ರಾರ್ಥಿಗಳಿಗಾಗಿ ಶೋಧ ಕಾರ್ಯವೂ ಮುಂದುವರಿದಿದೆ.

ಸೌದಿ ಅರೇಬಿಯಾದಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದ್ದು, ಈ ಸಂಬಂಧ ಯಾತ್ರಿಕರಿಗೆ ಮುನ್ನೆಚ್ಚರಿಕೆವಹಿಸುವಂತೆ ತಿಳಿಸಲಾಗಿದೆ. ಅಲ್ಲದೇ, ಅಲ್ಲಿನ ಸ್ಥಳೀಯ ಕಾಲಮಾನ 4 ಗಂಟೆವರೆಗೆ ತಮ್ಮ ಆಚರಣೆಗಳನ್ನು ಮುಂದೂಡುವಂತೆ ತಿಳಿಸಲಾಗಿದೆ.

ಮೆಕ್ಕಾದಲ್ಲಿ ಸೋಮವಾರ ಗರಿಷ್ಠ ತಾಪಮಾನ 51.8 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದ್ದು, ಇಲ್ಲಿನ ಇತರ ಯಾತ್ರಿಕರ ಸ್ಥಳಗಳಲ್ಲಿ 48 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾದ ವರದಿಯಾಗಿದೆ. ಈ ಬಾರಿ ಹಜ್​ದಲ್ಲಿ 1.8 ಮಿಲಿಯನ್​​ ಮಂದಿ ಭಾಗಿಯಾಗಿದ್ದು, ಸುಡುವ ತಾಪಮಾನದ ನಡುವೆ ಶುಕ್ರವಾರದಿಂದ ಪವಿತ್ರ ಹಜ್​ ಯಾತ್ರೆ ಪ್ರಾರಂಭವಾಗಿದೆ.

ಯಾತ್ರಿಕರ ಅನುಕೂಲಕ್ಕಾಗಿ ಅವರ ಸಾರಿಗೆಗೆ ಬಸ್​​ ಮತ್ತು ರೈಲು ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಭಾರಿ ಸಂಖ್ಯೆಯ ಜನಸ್ತೋಮ ಮತ್ತು ಶಾಖ ಯಾತ್ರಿಕರ ಯಾತ್ರೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಕಾನೂನು ಜಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಹಜ್​ ಯಾತ್ರಿಗರಿಗೆ ಸಂಪೂರ್ಣ ಬೆಂಬಲ ನೀಡುವುದು ನಮ್ಮ ಕೆಲಸವಾಗಿದೆ. ಚಿಕಿತ್ಸೆಗಿಂತ ಬಿಸಿಲಿನ ಜಳವನ್ನು ತಡೆಗಟ್ಟುವಿಕೆಯ ಬಗ್ಗೆ ನಾವು ನಂಬಿಕೆಯನ್ನು ಹೊಂದಿದ್ದೇವೆ. ಈ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳಿಗೆ ಯಾತ್ರೆ ಸಂದರ್ಭದಲ್ಲಿ ಹೆಚ್ಚು ದ್ರವಾಹಾರ ಸೇವಿಸಿ, ಛತ್ರಿ ಬಳಕೆ ಮಾಡುವಂತೆ ಅನೇಕ ಸುರಕ್ಷಾ ಮಾರ್ಗಸೂಚಿ ಪಾಲಿಸುವಂತೆ ಸಲಹೆ ನೀಡಿದ್ದೇವೆ ಎಂದು ವಕ್ತಾರರು ತಿಳಿಸಿದ್ದಾರೆ. ಇತ್ತೀಚಿನ ದಶಕಗಳಲ್ಲಿ, ಯಾತ್ರಿಕರ ಸಂಖ್ಯೆ ಹೆಚ್ಚಾಗಿದ್ದು, ಈ ಜನಸಂದಣಿಯಿಂದಾಗಿ ನೂರಾರು ಸಾವಿನ ದುರಂತಗಳು ಸಂಭವಿಸಿದೆ.

ಇರಾಕ್​ನಲ್ಲೂ 50 ಡಿಗ್ರಿ ಸೆಲ್ಸಿಯಸ್​ ತಲುಪಿದ ಉಷ್ಣಾಂಶ: ಇರಾಕ್​ನ ಹಲವು ಪ್ರದೇಶಗಳಲ್ಲಿ ಕೂಡ ತಾಪಮಾನದ ಏರಿಕೆ ಕಂಡು ಬಂದಿದ್ದು, 50 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ದಾಖಲಾಗಿದೆ ಎಂದು ಇರಾಕ್​ನ ಹವಾಮಾನ ಇಲಾಖೆ ತಿಳಿಸಿದೆ.

ಇರಾಕ್​ನ ಧಿ ಕರ್ ಪ್ರಾಂತ್ಯದಲ್ಲಿ 51 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದರೆ, ಮೇಸನ್, ಬಸ್ರಾ ಮತ್ತು ಮುತ್ತಣ್ಣ ಪ್ರಾಂತ್ಯಗಳಲ್ಲಿ 50 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅಧಿಕ ತಾಪಮಾನ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಸೂರ್ಯನಿಗೆ ನೇರವಾಗಿ ಒಡ್ಡಿಕೊಳ್ಳುವುದನ್ನು ತಪ್ಪಿಸಿ, ಮನೆಯಲ್ಲಿಯೇ ಇರಬೇಕು ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. (ಐಎಎನ್​ಎಸ್​)

WhatsApp Group Join Now
Telegram Group Join Now
Share This Article