ಮೂಡಲಗಿ : ಪ್ರತಿ ವರ್ಷದಂತೆ ಪಟ್ಟಣದ ನವರಾತ್ರಿ ಉತ್ಸವ ಕಮೀಟಿ, ಅ.3ರಿಂದ ಜರಗುವ 9 ದಿನಗಳ ನವರಾತ್ರಿ ಉತ್ಸವದ ಅಂಗವಾಗಿ ದ್ವಿತೀಯ ಬಾರಿಗೆ ಕೃಷಿ ಮೇಳವನ್ನು ದಿ.5 ರಂದು 3ದಿನಗಳ ಕಾಲ ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಉತ್ಸವ ಸಮೀತಿಯ ಕೃಷ್ಣಾ ನಾಶಿ ಹೇಳಿದರು.
ಶನಿವಾರದಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಬರ್ಡ್ಸ ತುಕ್ಕಾನಟ್ಟಿ, ಶ್ರೀ ಶಿವಬೋಧರಂಗ ಪಿಕೆಪಿಎಸ್ ಮೂಡಲಗಿ ಹಾಗೂ ನಿಸರ್ಗ ಫೌಂಡೇಶನ್ ಮೂಡಲಗಿ, ಇವುಗಳ ಸಹಯೋಗದೊಂದಿಗೆ ಆಯೋಜಿಸಲಾದ ಕೃಷಿ ಮೇಳದಲ್ಲಿ ವಿಜ್ಞಾನ ವಸ್ತು ಪ್ರದರ್ಶನ, ಯಂತ್ರೋಪಕರಣಗಳ ಪ್ರದರ್ಶನ, ಸಾವಯವ ಕೃಷಿ, ಸಿರಿಧಾನ್ಯಗಳ ಉತ್ಪಾದನೆ, ಜೈವಿಕ ಗೊಬ್ಬರ ಹಾಗೂ ಪೀಡೆನಾಶಕ, ಜೇನು ಕೃಷಿ, ಶ್ವಾನ ಪ್ರದರ್ಶನ, ಜಾನುವಾರುಗಳ ಪ್ರದರ್ಶನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ, ಈ ಭಾಗದ ರೈತರಲ್ಲಿ ಜಾಗೃತಿ ಮೂಡಿಸುವ ಸಕಲ ಪ್ರಯತ್ನವನ್ನು ಮಾಡಲಾಗಿದೆ ಎಂದರು.
ಉತ್ಸವ ಸಮೀತಿಯ ಈರಪ್ಪ ಢವೇಶ್ವರ ಮಾತನಾಡಿ, ಕೃಷಿ ಮೇಳದ ವಿವರಣೆ ಕೊಡುತ್ತ ಶನಿವಾರ ದಿ.5ರಂದು ಡಾಗ್ ಶೋ ಹಾಗೂ ರಂಗೋಲಿ ಸ್ಪರ್ಧೆ, ರವಿವಾರ ದಿ.6ರಂದು ಹಾಲು ಹಲ್ಲಿನ ಕಿಲಾರಿ ಒಂಟಿ ಹೋರಿಗಳ ಹಾಗೂ ಕಿಲಾರಿ ಆಕಳ ಮನಕಗಳ ಪ್ರದರ್ಶನ ಜೊತೆಗೆ ಬಲೂನ್ ಸ್ಪರ್ಧೆ, ಕಣ್ಣು ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆ ಇದ್ದು, ಕೊನೆಯ ದಿನ ಸೋಮವಾರ ದಿ.7ರಂದು ಟಗರಿನ ಕಾಳಗ, ಬಾಳೆ ಹಣ್ಣು ತಿನ್ನುವ ಸ್ಪರ್ಧೆ ಹಾಗೂ ಸಾವಯವ ಬೆಲ್ಲ ಬಳಸಿ ಮನೆಯಲ್ಲೇ ತಯಾರಿಸಿದ ಹೂರಣ ಹೋಳಿಗೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹಾಗೂ ರೈತಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೃಷಿ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿ, ಹೆಚ್ಚಿನ ಮಾಹಿತಿಗಾಗಿ 9590718444, 90088468221 ಸಂಪರ್ಕಿಸಬಹುದಾಗಿದೆ ಎಂದರು.
ಉತ್ಸವ ಸಮೀತಿಯ ಕುಮಾರ ಗಿರಡ್ಡಿ ಮತ್ತು ಜಗದೀಶ ತೇಲಿ ಮಾತನಾಡಿ, ನವರಾತ್ರಿ ಉತ್ಸವದ ಅಂಗವಾಗಿ ಮೂರ್ತಿ ಆಗಮನ ದಿನವಾದ ದಿ.2ರಂದು ಸಾಯಂಕಾಲ 4ಗಂಟೆಗೆ ದುರ್ಗಾ ಮಾತೆಯ ಮೂರ್ತಿಯನ್ನು ಸಕಲ ವಾದ್ಯಗಳ ಜೊತೆ ಮೆರವಣಿಗೆಯೊಂದಿಗೆ ಗಾಂಧಿ ಚೌಕ್ ನಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ವೃತ್ತಗಳಾದ ಬಸವೇಶ್ವರ ವೃತ್ತ, ಸಂಗಪ್ಪಣ್ಣ ವೃತ್ತ, ಅಮನ ನಗರ, ಅಂಬೇಡ್ಕರ್ ವೃತ್ತ, ಕಲ್ಮೇಶ್ವರ ವೃತ್ತ, ಕಾಲೇಜು ರಸ್ತೆ ಮಾರ್ಗವಾಗಿ ಗುಡ್ಲಮಡ್ಡಿ ಈರಣ್ಣ ದೇವಸ್ಥಾನದ ವರೆಗೆ ಸಾಗಿ ಮರಳಿ ಅದೇ ಮಾರ್ಗವಾಗಿ ಎಸ್ ಎಸ್ ಆರ್ ಕಾಲೇಜಿನ ವರೆಗೆ ಬಂದು ಬಿಇಓ ಆಫೀಸ್ ಹತ್ತಿರ ಸಾಗುತ್ತ ಲಕ್ಷೀ ನಗರ ಮಾರ್ಗವಾಗಿ ಬಸ್ ನಿಲ್ದಾಣ ಹತ್ತಿರ ಬಂದು, ಚನ್ನಮ್ಮ ವೃತ್ತ, ಕರೆಮ್ಮ ವೃತ್ತಗಳನ್ನು ಬಳಸುತ್ತಾ ಕೊನೆಗೆ ಬಸವೇಶ್ವರ ವೃತ್ತದ ಬಳಿ ಇರುವ ಬಸವ ಮಂಟಪದ ವೇದಿಕೆಯಲ್ಲಿ ದುರ್ಗಾ ಮಾತೆಯ ಭವ್ಯ ಮೂರ್ತಿಯನ್ನು ಬರಮಾಡಿಕೊಳ್ಳಲಾಗುವುದು, ಮರುದಿನ ದಿ.3ರಂದು ಮೂರ್ತಿ ಪ್ರತಿಷ್ಠಾಪಿಸಿ ವೇದಿಕೆಯಲ್ಲಿ 9ದಿನಗಳ ಕಾಲ ದುರ್ಗಾ ಮಾತೆಯ ಪೂಜಾ ಕೈಂಕರ್ಯಗಳು ಸಾಗುತ್ತ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಈ ಸಂದರ್ಭದಲ್ಲಿ ನವರಾತ್ರಿ ಉತ್ಸವ ಕಮೀಟಿಯ ಸದಸ್ಯರುಗಳಾದ ಹಣಮಂತ ಸತರಡ್ಡಿ, ಅಜ್ಜಪ್ಪ ಅಂಗಡಿ, ಅಜ್ಜಪ್ಪ ಬಳಿಗಾರ, ಯಲ್ಲಪ್ಪ ಪೂಜೇರಿ, ಸದಾಶಿವ ನಿಡಗುಂದಿ, ಸಂಜು ಕಮತೆ, ಪ್ರಭು ತೇರದಾಳ, ಮಹೇಶ ಒಡೆಯರ್, ಅಜ್ಜಪ್ಪ ಜೀರಾಳೆ, ಬಸು ಅಂಗಡಿ, ಚೇತನ ನಿಶಾನಿಮಠ, ಪ್ರದೀಪ ದರೂರ, ಕಾಡಪ್ಪ ಮೇಳ್ಳಿಗೇರಿ, ಶ್ರೀರಂಗ ಜೋಶಿ ಸೇರಿದಂತೆ ಸಮೀತಿಯ ಅನೇಕ ಸದಸ್ಯರು ಉಪಸ್ಥಿತರಿದ್ದರು.