ಹೊಸದಿಲ್ಲಿ: ಲಂಡನ್ ನಲ್ಲಿ ನೆಲೆಸಿರುವ ಅರುಣಾಚಲ ಮೂಲದ ಭಾರತೀಯ ಮಹಿಳೆಯನ್ನು ಚೀನಾ ಆಕೆಯ ಭಾರತೀಯ ಪಾಸ್ ಪೋರ್ಟ್ ಅಮಾನ್ಯ ಎಂದು ಹೇಳಿ 18 ಗಂಟೆಗಳ ಕಾಲ ಆಕೆಯನ್ನು ಬಂಧಿಸಿ, ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊದಲಬಾರಿಗೆ ಅಧಿಕೃತ ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯ ಚೀನಾದ ಈ ನಡೆಯನ್ನು ಖಂಡಿಸಿದ್ದು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಗಟ್ಟಿಯಾಗಿ ಪುನರುಚ್ಚರಿಸಿದೆ.
ಚೀನಾ ಅರುಣಾಚಲ ತನ್ನ ದೇಶದ ಭೂಭಾಗ ಎಂದು ಮತ್ತೊಮ್ಮೆ ಪುನರುಚ್ಚರಿಸುವ ಮೂಲಕ ಅರುಣಾಚಲ ಪ್ರದೇಶದ ಮೇಲಿನ ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸಿ ವಿವಾದಕ್ಕೆ ಎಡೆ ಮಾಡಿಕೊಟ್ಟ ಬೆನ್ನಲ್ಲೆ, ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್ ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.


