ಲೇಖನ: ನಾಳೆ ವಿಶ್ವಕರ್ಮ ಜಯಂತ್ಯೋತ್ಸವ

Ravi Talawar
ಲೇಖನ: ನಾಳೆ ವಿಶ್ವಕರ್ಮ ಜಯಂತ್ಯೋತ್ಸವ
WhatsApp Group Join Now
Telegram Group Join Now

ಕುಲುಮೆ ಹುಟ್ಟದ ಮುನ್ನ ಕುಲಛಲಗಳೂ ಎಲ್ಲಿದ್ದವೋ
ಹಲವು ಪರಿಯಲಿ ಬಡಿದು ಬತ್ತೀಸ ಆಯುಧ ಮಾಡಿ
ಕೊಟ್ಟ ಮೇಲೆ ಇದು ನನ್ನ ಕುಲ ಇದು ನನ್ನ ಕುಲ
ಎಂದು ಬಡಿದಾಡುವ ತುಚ್ಛ ಮಾನವರೇ
ಇದು ಅಲ್ಲಮನ ಕುಲ ಕೇಳೋ ಬಸವಣ್ಣ

ದಿ.17.09.2024 ರಂದು ವಿಶ್ವಕರ್ಮ ಜಯಂತ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತ ಹಾಗೂ ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೊದಿಯವರ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳುತ್ತ ಇಂದು ಪ್ರಧಾನ ಮಂತ್ರಿಯವರು ಹೇಳುವಂತೆ ಮೇಕ್ ಇನ್ ಇಂಡಿಯಾ ಇಂದಿನ ಯಾಂತ್ರಿಕಯುಗದಲ್ಲಿ ಹೇಳುವ ಕೆಲಸವನ್ನು ಪ್ರಾಚೀನ ಕಾಲದಲ್ಲಿ ಯಾವುದೇ ತಂತ್ರಜ್ಞಾನ ಇಲ್ಲದ ಕಾಲದಲ್ಲಿ ವಿಶ್ವಕರ್ಮರು ವಿವಿಧ ತಂತ್ರಜ್ಞಾನ ಕೆಲಸವನ್ನು ಮಾಡಿ ತೋರಿಸಿದ್ದಾರೆ. ವಿಶ್ವ ಅಂದರೆ ಜಗತ್ತು ಕರ್ಮ ಅಂದರೆ ಕೆಲಸ ಪ್ರಪಂಚದಲ್ಲಿ ಮೊದಲ ಕುಶಲಕರ್ಮಿಗಳು ವಿಶ್ವಕರ್ಮರು, ಅಂದರೆ ಕೆಲಸ ಮಾಡಿ ಜೀವನ ನಡೆಸುವರೇ ವಿಶ್ವಕರ್ಮರು.

ಪ್ರಾಚೀನ ಕಾಲದಿಂದಲೂ ವಿಶ್ವಕರ್ಮರಿಗೆ ತನ್ನದೇ ಆದ ಸಾಂಸ್ಕೃತಿಕ ಹಾಗೂ ಇತಿಹಾಸ ಪರಂಪರೆ ಇದೆ. ಇಂತಹ ವಿಶ್ವಕರ್ಮರ ಮೂಲವನ್ನು ಹುಡುಕುತ್ತಾ ನಡೆದಾಗ ನಮಗೆ ದೊರಕುವ ಅತ್ಯಂತ ಪ್ರಾಚೀನ ದಾಖಲೆಯಂದರೆ ವೇದ, ಸಾಹಿತ್ಯ ಅಂತಹ ವೇದಗಳೇ ವಿಶ್ವಕರ್ಮನನ್ನು ಪದೇ ಪದೇ ಸ್ತುತಿಸುತ್ತಿವೆ ಮತ್ತು ಅವನ ವಿಶ್ವವ್ಯಾಪಕ ಶ್ರೇಷ್ಠತ್ವನ್ನು ಹೇಳುತ್ತಿವೆ.

ಈತನು ವಿಶ್ವವನ್ನೆ ವ್ಯಾಪಿಸಿರುವ ಕಣ್ಣು ಕಾಲು ಮುಖ ಬಾಹುಗಳನ್ನು ಹೊಂದಿದ್ದಾನೆ ಇಂತವನು ತನ್ನ ರೆಕ್ಕೆಗಳಂತಿರುವ ಬಾಹುಗಳಿಂದ ಈ ಭೂವಿ ಸ್ವರ್ಗಗಳೆಂಬ ಲೋಕಗಳನ್ನು ಸೃಷ್ಠಿಸಿದ ಅಂತಹ ದೇವನು ಇವನೊಬ್ಬನೇ. ಇವನೇ ವಿಶ್ವಕರ್ಮ ಸಕಲ ಶಿಲ್ಪಗಳಿಗೆ ಏಕೈಕ ಮೂಲನೂ ಈ ಜಗತ್ತ ಎಂಬ ಶಿಲ್ಪದ ಸೃಷ್ಠಿಕರ್ತನು ಆಗಿರುವ ಶ್ರೀ ವಿಶ್ವಕರ್ಮ ಪರಮೇಶ್ವರನು ತನ್ನ ಪಾದಕಮಲಗಳಲ್ಲಿ ಸಕಲ ವಿದ್ಯಾದೇವತೆ ಸರಸ್ವತಿ ದೇವತೆಗೆ ಆಶ್ರಯ ನೀಡಿ ವೇದರ್ಷಿಗಳಿಂದ ವಾಚಸ್ಪತಿ ಎಂದು ಕರೆಸಿಕೊಂಡಿದ್ದಾರೆ. ಸ್ವತ: ಸಕಲ ವೇದಾಗಮಗಳ ಮೂಲ ಸಾಗರನಾಗಿದ್ದು, ಕಣ್ಣು ಕೋರೈಸುವಂತಹ ಮಿಂಚಿನ ಹೊಳಪುಳ್ಳವನು ಆಗಿದ್ದಾನೆ. ಸಕಲ ಸೃಷ್ಠಿಯ ರಕ್ಷಾಕವಚವಾಗಿರುವ ಗಾಯತ್ರಿ ಮಾತೆಯನ್ನು ತನ್ನ ಹೃಯದಲ್ಲಿರಿಸಿಕೊಂಡು ಸಕಲ ಸೃಷ್ಠಿಗಳ ಪಾಲನೆ ಮಡುತ್ತಿರುವವನೂ, ಮೇರು ಪರ್ವತಾಗ್ರದಂತೆ ಉತ್ತುಂಗವಾಗಿದ್ದು ವಿರಾಜಮಾನವಾಗಿರುವ ಪೀಠವನ್ನು ಅಲಂಕರಿಸಿದ್ದು ಆಶ್ರಿತರ ಪಾಲಿಗೆ ಕಲ್ಪವೃಕ್ಷವೇ ತಾನಾಗಿದ್ದಾನೆ. ದೇವ ,ಋಷಿ, ಸಿದ್ದ, ಯಕ್ಷ, ಗಂಧರ್ವ, ಕಿನ್ನರ, ಕಿಂಪುರುಷ, ನರರಾದಿಯಾಗಿ ಸಕಲರಿಂದಲೂ ಪೂಜಿಸಲ್ಪಡುತ್ತಿರುವವನಾದ ಪಂಚಾನನ ಮಹಾಪ್ರಭುವು ಪರಮ ಸುಂದರ ಸ್ವರೂಪನಾಗಿ ಸಕಲರಿಗೂ ಸುಖಶಾಂತಿ ಪ್ರದಾಯಕನಾಗಿ ತನ್ನ ಕಿರುನಗೆಯಿಂದ ಸರ್ವಲೋಕಗಳಲ್ಲೂ ಶೋಭಾಯಮಾನನಾಗಿದ್ದಾನೆ. ಇಂತಹ ಪರಮ ಮೂಲನೂ, ಆದ್ಯನೂ ಆಗಿರುವ ಶ್ರೀ ವಿಶ್ವಕರ್ಮ ಪ್ರಭುವಿಗೆ ಸಾಷ್ಟಾಂಗ ನಮಸ್ಕಾರಗಳು. ಜಗತ್ತಿನ ಮೊದಲ ಇಂಜಿನಿಯರ ಕೂಡಾ ವಿಶ್ವಕರ್ಮನೆ ಇಂತಹ ವಿಶ್ವಕರ್ಮನ ಜಯಂತಿ ಆಚರಿಸುವದು ನಮ್ಮ ಸೌಭಾಗ್ಯ.

ಪುರಾಣದಲ್ಲಿ ಓದುತ್ತಾ ಹೋದರೆ ವಿಶ್ವಕರ್ಮ ದೇವಾನು ದೇವತೆಗಳಿಗೆ ಆಯುಧಗಳನ್ನು, ಚತ್ರ ಚಾಮರಗಳನ್ನು, ಸ್ವರ್ಗ ಲೋಕವನ್ನು ನಿರ್ಮಿಸಿದ ಕೀರ್ತಿ ಪುರಾಣ ಉಲ್ಲೇಖಗಳಿವೆ. ಅದರಂತೆ ಮುಂದೆ ಹೋಗಿ ರಾಜ ಮಹಾರಾಜರಿಗೆ ಅರಮನೆ ಆಯುಧಗಳನ್ನು ನಿರ್ಮಿಸಿ ಕೊಟ್ಟದ್ದು ವಾಸ್ತು ಶಿಲ್ಪ ಶಾಸ್ತ್ರದಲ್ಲಿ ವಿಶ್ವಕರ್ಮರ ಕೊಡುಗೆ ಅಪಾರವಾದದ್ದು. ವಿಶ್ವಕರ್ಮರಿಗೆ ಇನ್ನೊಂದು ಹೆಸರು ಪಂಚಾಳರು ಎನ್ನುತ್ತಾರೆ. ಪಂಚಾಳರು ಎಂದರೆ ಪಂಚಕುಲಕಸಬು ಮಾಡುವರು.

ಕಬ್ಬಿನ ಕೆಲಸ ಮಾಡುವರು ಕಮ್ಮಾರ ಲೋಹಾರ, ಕಟ್ಟಿಗೆ ಕೆಲಸ ಮಾಡುವರು ಬಡಿಗ ಸುತಾರ, ಕಂಚಿನ ಲೋಹದ ಕೆಲಸ ಮಾಡುವ ಯಕರಹೋಯುವರು ಯರಕದವರು, ಕಲ್ಲಿನ ಶಿಲ್ಪ ಮೂರ್ತಿ ಮಾಡುವವರು ಶಿಲ್ಪ ಕಲಾಚಾರ್ಯರು, ಸ್ವರ್ಣ ಶಿಲ್ಪ ಆಭರಣ ಬೆಳ್ಳಿ ಬಂಗಾರದ ಕೆಲಸ ಮಾಡುವವರು ಪೋತದಾರರು, ಪತ್ತಾರ, ಅಕ್ಕಸಾಲಿಗ, ಸೋನಾರ ಎಂದು ಇವರೆಲ್ಲ ಪಂಚ ಶಿಲ್ಪಗಳ ಉದ್ಯೋಗದಲ್ಲಿ ತೊಡಗಿಕೊಂಡವರು.

ಮುಂದುವರೆದು ನಾಗರಿಕತೆ ಬೆಳೆಯಬೇಕಾದ ಸಮಯದಲ್ಲಿ ವಿಶ್ವಕರ್ಮ ಜನಾಂಗದ ಕೊಡುಗೆ ಅಪಾರವಾದದ್ದು, ೧೨ನೇ ಶತಮಾನದ ಅಣ್ಣ ಬಸವಣ್ಣನವರು ಹೇಳಿದಂತಹ ಕಾಯಕವೇ ಕೈಲಾಸವೆಂಬ ನಾಣ್ಣುಡಿಯಂತೆ ವಿಶ್ವಕರ್ಮ ಜನಾಂಗ ಕುಶಲಕರ್ಮಿಗಳು ತಮ್ಮ ಜೀವನಕ್ಕೆ ಅಣ್ಣ ಬಸವಣ್ಣನವರ ಮಾತಿನಂತೆ ದುಡಿದು ಜೀವಿಸುವ ಜನಾಂಗ. ರೈತ ರಾಷ್ಟ್ರದ ಬೆನ್ನೆಲಬು ಆದರೆ ರೈತನಿಗೆ ವಿಶ್ವಕರ್ಮರೆ ಬೆನ್ನೆಲಬು. ಅಣ್ಣದಾತ ರೈತನಿಗೆ ಬೇಕಾದ ಸಕಲ ಸಾಮರ್ಗಿಗಳು ನೇಗಿಲು, ಕುಂಟೆ, ರೆಂಟೆ, ಚಕ್ಕಡಿ ಮುಂತಾದ ವಸ್ತುಗಳನ್ನು ಬಡಿಗ ಕಂಬಾರರು ಮಾಡುವರು. ಅದರಂತೆ ಮನೆ ಕಟ್ಟಡ ಕೆಲಸಕ್ಕೆ ಬೇಕಾದ ಬಾಗಿಲು, ಕಿಟಕಿ, ಮಾಳಿಗೆ ಕೆಲಸವನ್ನು ಮಾಡುವ ಕಾಯಕದಲ್ಲಿ ಇವರದೇ ಮೇಲುಗೈ ಅಂದರಂತೆ ಸ್ವಾಭಿಮಾನಿಗಳು ಕೂಡಾ ಹೌದು.

ಅಕ್ಕಸಾಲಿಗರು ಅಂದರೆ ಜನರ ಮಂಗಳಕರ ಸಮಾರಂಭಗಳಿಗೆ ಬೇಕಾಗುವ ವಿವಿಧ ಬಂಗಾರದ ಆಭರಣಗಳನ್ನು ತಯಾರಿಸಿ ಕೊಡುವುದರಲ್ಲಿ ಇವರ ಕೊಡುಗೆ ತುಂಬಾ ಇದೆ. ದೇವಸ್ಥಾನದ ಕಟ್ಟಡ, ದೇವರ ಮೂರ್ತಿ ತಯಾರಿಕೆ, ಕಲ್ಲಿನ ಮೂರ್ತಿ, ಬೆಳ್ಳಿ ಬಂಗಾರದ ಮೂರ್ತಿ ತಯಾರಿಕೆ ಕೂಡಾ ಇವರ ಕಾಯಕ. ಅದರಂತೆ ಈ ಜನಾಂಗದಲ್ಲಿ ಚಿತ್ರ ಕಲಾವಿದರು ಕೂಡಾ ತುಂಬಾ ಜನರಿದ್ದಾರೆ. ಮಗು ಹುಟ್ಟಿದಾಗ ತೊಟ್ಟಿಲನ್ನು ತಯಾರಿಸುವದರಿಂದ ಹಿಡಿದು ಮನುಷನ ಕೊನೆಯ ಎಲ್ಲ ಹಂತದಲ್ಲಿ ವಿಶ್ವಕರ್ಮರ ಪಾತ್ರ ಬಹುಮುಖ್ಯವಾಗಿದೆ. ಕುಲ ಕುಲವೆಂದು ಬಡಿದಾಡದಿರಿ ಕುಲದ ನೆಲೆಯನೆನಾದರೂ ಬಲ್ಲಿರಾ ಎಂದು ಕನಕದಾಸರು ತಮ್ಮ ಸಾಹಿತ್ಯದಲ್ಲಿ ನುಡಿದಂತೆ ಎಲ್ಲ ಕುಲ ಬಾಂಧವರೊಂದಿಗೆ ಯಾವುದೇ ಕುಲಗೋತ್ರಗಳನ್ನು ಲಕ್ಷಿಷಿಸದೇ ಎಲ್ಲರನ್ನು ಒಂದಾಗಿ ತಿಳಿದು ವ್ಯವಹರಿಸುತ್ತಾ ಎಲ್ಲ ಜನರ ಪ್ರೀತಿಗೆ ಪಾತ್ರರಾಗಿ ತಮ್ಮ ಕೆಲಸವನ್ನು ನಿರ್ವಹಿಸುತ್ತಾರೆ. ಒಟ್ಟಿನಲ್ಲಿ ಹೇಳುವದಾದರೆ ವಿಶ್ವಕರ್ಮ ಜನಾಂಗದ ಕೊಡುಗೆ ಅಪಾರವೆಂದು ಹೇಳಬಹುದು.
ಅದರಂತೆ ಶಿವನ ಅವತಾರವನ್ನೆ ಧರಿಸಿಬಂದ ತಿಂಥಣಿಯ ಶ್ರೀ ಮೌನೇಶ್ವರರು ಕೂಡಾ ವಿಶ್ವಕರ್ಮ ಕುಲದಲ್ಲಿ ಜನಿಸಿದರು. ಅದರಂತೆ ಹುಬ್ಬಳ್ಳಿಯ ಸಿದ್ದಾರೂಢರ ಸಮಕಾಲಿನವರಾದ ನವಲಗುಂದದ ಶ್ರೀ ಅಜಾತ ನಾಗಲಿಂಗ ಅಜ್ಜನವರು ಕೂಡಾ ವಿಶ್ವಕರ್ಮರೆ, ಮಡಿ ಮಡಿ ಎಂದು ಹೇಳುವರೆ ನಿಮ್ಮ ಮನಸ್ಸೆ ಮಡಿ ಇಲ್ಲದಿದ್ದರೆ ಕಾಲ್ಮಡಿ ಎಂದು ನಮ್ಮ ಜನರಿಗೆ ಮಡಿವಂತಿಕೆ ಬಗ್ಗೆ ತಮ್ಮ ವಚನದಲ್ಲಿ ಅಜಾತ ನಾಗಲಿಂಗ ಅಪ್ಪನವರು ಹೇಳಿದ್ದಾರೆ. ಗುಡ್ಡಾಪೂರದ ದಾನಮ್ಮಾ ದೇವಿಯು ಕೂಡಾ ಈ ಜನಾಂಗದವರೆ, ಇಂತಹ ದೈವಿ ಪುರುಷರು ಕೂಡಾ ಇಂತಹ ಜನಾಂಗದಲ್ಲಿ ಜನಿಸಿ ಜಗತ್ತಿನ ಜನರನ್ನು ಉದ್ದರಿಸಿದ್ದಾರೆ. ಇದು ನಮ್ಮ ಹೆಮ್ಮೆ.

ಇಂದಿಗೂ ದೇಶದ ಎಲ್ಲ ಹಳ್ಳಿ ಪಟ್ಟಣಗಳಲ್ಲಿ ಈ ಎಲ್ಲ ಜನಾಂಗ ತಮ್ಮ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಈ ಸಮಾಜಕ್ಕೆ, ಈ ದೇಶಕ್ಕೆ ಈ ಜನಾಂಗದ ಕೊಡುಗೆ ಅನನ್ಯ ಅಪಾರ ಭಾರತೀಯ ಸಂಸ್ಕೃತಿ ಉಳಿಯಬೇಕಾದರೆ ಅದಕ್ಕೆ ಕಾರಣ ವಿಶ್ವಕರ್ಮರು ಎಂದು ಘಂಟಾಘೋಷವಾಗಿ ಹೇಳಬಹುದು. ಭವ್ಯ ಸುಂದರ ಶಿಲ್ಪಗಳು ದೇವಸ್ಥಾನಗಳು ಸೋಮನಾಥಪೂರ, ಹಳೆಬೀಡು, ಬೇಲೂರ, ಐಹೊಳೆ ಪಟ್ಟದ ಕಲ್ಲು, ಅಜಂತಾ, ಯಲ್ಲೂರಾದಲ್ಲಿ ಇರುವ ಮಂದಿಗಳನ್ನು ನಿರ್ಮಿಸಿರುವ ಶಿಲ್ಪಿಗಳೆಲ್ಲರೂ ಜಕನಾಚಾರ್ಯ, ಡಕನಾಚಾರ್ಯ, ಡಂಕನ, ಮಲ್ಲೋಜಾ, ಕೇಧಾರೋಜ ಹಂಪ ಎಂಬ ಶಿಲ್ಪಿಗಳು ಕೂಡಾ ವಿಶ್ವಕರ್ಮರೆ.

ಇತ್ತಿಚೀನ ಮೈಸೂರ ಅರಮನೆ ಹಾಗೂ ದೇಶದ ಹಲವಾರು ದೇವಸ್ಥಾನ ಅರಮನೆಗಳನ್ನು ನಿರ್ಮಿಸುವಲ್ಲಿ ವಿಶ್ವಕರ್ಮರ ಕೊಡುಗೆ ಅಪಾರ. ಅದರಂತೆ ೨೨ನೇ ಜನೇವರಿ ೨೦೨೪ ರಂದು ಭಾರತದ ಹೆಮ್ಮೆಯ ಜಗತ್‌ವಿಖ್ಯಾತ ಅಯೋದ್ಯ ರಾಮಮಂದಿರದ ನಿರ್ಮಾಣದಲ್ಲಿ ಕಂಬಗಳ ಕೆತ್ತನೆ, ಬಾಗಿಲಗಳ ಕೆತ್ತನೆಯಲ್ಲಿ ವಿಶ್ವಕರ್ಮ ಜನಾಂಗದವರು ಅತ್ಯಂತ ಶ್ರಮವಹಿಸಿ ಕಾರ್ಯನಿರ್ವಹಿಸಿದ್ದಾರೆ. ಹಾಗೆಯೇ ಆ ದೇವಸ್ಥಾನ ಕೇಂದ್ರ ಬಿಂದು ಬಾಲರಾಮನ ಮೂರ್ತಿಯನ್ನು ಅತ್ಯಂತ ಜೀವಕಳೆ ತುಂಬಿ ತಯಾರಿಸಿದ ನಮ್ಮ ರಾಜ್ಯದವರೇ ಆದ ಅದುನಿಕ ಜಕನಾಚಾರ್ಯ ಎನ್ನಬಹುದಾದ ವಿಶ್ವಕರ್ಮ ಜನಾಂಗದ ಮೈಸೂರಿನ ಶ್ರೀ ಅರುಣ ಯೋಗಿರಾಜ ಅವರನ್ನು ಈ ಸಮಯದಲ್ಲಿ ಸ್ಮರಿಸುವದು ಕೂಡಾ ಅತ್ಯಂತ ಸೂಕ್ತ. ವಿಶ್ವಕರ್ಮ ದೇವನನ್ನು ನೆನೆಯುವ ಭಾಗ್ಯ ಇಂದು ನಮ್ಮದಾಗಿದೆ.
ಇಂದು ಸರಕಾರದ ಮಟ್ಟದಲ್ಲಿ ವಿಶ್ವಕರ್ಮ ಜಯಂತಿಯನ್ನು ಆಚರಿಸಲು ಅನುವು ಮಾಡಿಕೊಟ್ಟ ಮುಖ್ಯಮಂತ್ರಿಯವರು ಹಾಗೂ ಘನವೆತ್ತ ಕರ್ನಾಟಕ ಸರಕಾರಕ್ಕೆ ಧನ್ಯವಾದಗಳು.

♦ಗೋಪಾಲ ಗುಂಡೂಪಂತ ಪತ್ತಾರ
ಚಿತ್ರಕಲಾ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಕಬ್ಬೂರ 

WhatsApp Group Join Now
Telegram Group Join Now
Share This Article