ಹನ್ನೆರಡನೆಯ ಶತಮಾನದ ಬಸವಾದಿ ಪ್ರಮಥರ ಕಾಲದ ಸಮಕಾಲಿನರು,ಜಾಗತಿಕ ಮಹಿಳೆಯರಿಗೆ ಸಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಿ, ಸಮಾನತೆ ಸಾರಿದ ಧೀಮಂತ ಮಾಹಾ ಶಿವಶರಣರೆ, ಶರಣರ ಚಳುವಳಿಯ ಪ್ರಮುಖ ಘಟ್ಟದ ರೂವಾರಿಯಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರಿವಾದಿ ಚಳವಳಿಯ ಹೋರಾಟದ ನಾಯಕಿಯಾಗಿ, ಬಡವರ – ನೊಂದವರ ಪ್ರೀತಿಯ ಅಕ್ಕರೆಯ ಅಕ್ಕನಾಗಿ,ಕನ್ನಡ ಸಾಹಿತ್ಯ ಲೋಕದ ಮೊದಲ ಬಂಡಾಯ ಕವಯತ್ರಿ ಮತ್ತು ವಚನಗಾರ್ತಿಯಾಗಿ, ಮಹಿಳಾ ಕುಲದ ಸರ್ವೋತ್ತಮ ಬೆಳವಣಿಗೆಯ ಆಶಾಕಿರಣವಾಗಿ, ತಾಳ್ಮೇಯ – ಸ್ನೇಹಜೀವಿ ಪ್ರತಿನಿಧಿಯಾಗಿ, ಅಭಿವ್ಯಕ್ತಿಯಲ್ಲಿ ಪುರುಷ ಪ್ರಧಾನ ಸಮಾಜವನ್ನು ಪ್ರತಿಭಟಿಸಿ, ಹಿಮ್ಮೆಟಿಸಿ ಸಮಾನತೆಯನ್ನು ಸಾಕಾರ ಮಾಡುವಲ್ಲಿ ಪ್ರೇರಣೆದಾಯಕಿಯಾಗಿ,ಸಮತವಾದಿಯಾಗಿ,ಧಾರ್ಮಿಕ ನ್ಯಾಯ ಮತ್ತು ಮಹಿಳೆಯರಿಗೆ ಆಧ್ಯಾತ್ಮಕವಾಗಿ ಮುನ್ನಡೆಯಲು ಮಾರ್ಗದರ್ಶಕಿಯಾಗಿ,ಭಕ್ತಿಯಿಂದಲೇ ಸರ್ವರನ್ನೊ ಒಲಿಸಿಕೊಂಡ ಅದ್ವಿತೀಯ ಅನುಭಾವಿಯಾಗಿ,ಕನ್ನಡ ಭಾಷೆಯ ಸಾಹಿತ್ಯದ ಬೆಳವಣಿಗೆಗೆ ಸ್ವೂರ್ತಿಯಾಗಿ, ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿ, ನಮ್ಮೆಲ್ಲರ ಮಾರ್ಗದರ್ಶಕರಾಗಿ ಕಂಗೊಳಿಸಿ, ಇಂದಿಗೂ ಈ ಸಮಾಜ ಸ್ಮರಣೆ ಮಾಡಿಕೊಳ್ಳುತ್ತಿರುವ ಕರುನಾಡಿನ ಪುಣ್ಯ ಭೂಮಿಯ ಹೆಮ್ಮೆಯ ಸುಪುತ್ರಿ ಮಾಹಾ ಮಾನವತಾವಾದಿ,ವಿಚಾರವಾದಿ, ಆಧ್ಯಾತ್ಮಿಕ ಶ್ರೇಷ್ಠ ಚಿಂತಕಿ,ಮಾಹಾ ಶಿವಶರಣೆ ಅಕ್ಕಮಹಾದೇವಿ ಅಕ್ಕನವರು. ಹೀಗೆ ಜಾಗತಿಕ ಪ್ರಪಂಚಕ್ಕೆ ಪ್ರೇರಣೆದಾಯಕರು ಹಾಗೂ ಇಂದಿನ ಆಧುನಿಕ ಸಮಾಜಕ್ಕೆ ಮಾದರಿಯಾದವರು.
ಅಕ್ಕ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ ಗ್ರಾಮದ ನಿರ್ಮಲ ಶೆಟ್ಟಿ (ಓಂಕಾರ ಶೆಟ್ಟ) ಮತ್ತು ಸುಮತಿ (ಲಿಂಗಮ್ಮ )ದಂಪತಿಗಳ ಮಗಳಾಗಿ ಜನಸಿದ ಅಕ್ಕಮಹಾದೇವಿ.
ಸಕಲ ಸುಖವನ್ನು ತೇಜಿಸಿದ ಸರ್ವತ್ಯಾಗಿ, ಎದುರಿಸಿದ ಕಷ್ಟದ ದಿನಗಳು ಲೆಕ್ಕಕ್ಕೇ ಇಲ್ಲವೇ ಇಲ್ಲ,ಅನುಭವಿಸಿದ ದುಃಖದ ಪರೀಕ್ಷೆಗಳು ಲೆಕ್ಕವಿಲ್ಲದಷ್ಟು. ಸಾಕ್ಷಾತ್ ಸೃಷ್ಟಿಕರ್ತನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕನವರ ಹಾದಿ ಬಲು ರೋಚಕ ಮತ್ತು ರೋಮಾಂಚನಕಾರಿ.ಚಿಕ್ಕ ವಯಸ್ಸಿನಲ್ಲೇ ಅನೇಕ ಕಷ್ಟಗಳನ್ನು ಎದುರಿಸಿ ಧಾರ್ಮಿಕ ಲೋಕದತ್ತ ಪಯಣಸಿದ ಅಕ್ಕ ಶ್ರೇಷ್ಠ ಚಿಂತಕಿಯಾಗಿ ರೂಪುಗೊಂಡರು. ಅನೇಕ ಸಂತರೊಂದಿಗೆ ಚಿಂತನ- ಮಂಥನಗಳು ಮಾಡಿ ಆಧ್ಯಾತ್ಮಿಕ ಶ್ರೇಷ್ಠ ಸಂತರಾದರು.
ತದನಂತರ ಜಾತಿ ವ್ಯವಸ್ಥೆ ಮತ್ತು ಪೂಜಾರಿಗಳ ಮೂಲಕ ನಡೆಯುವ ದೇವರುಗಳ ಪೂಜೆಯನ್ನು ಖಂಡಿಸಿ – ವಿರೋಧಿಸಿ, ಬಸವಾದಿ ಶರಣರ ಸಿದ್ದಾಂತದಂತೆ ಇಷ್ಟಲಿಂಗವನ್ನು ಎದೆಯ ಮೇಲೆ ತೊಟ್ಟು, ವೀರ ಗಣಾಚಾರಿಯಂತೆ ಜನರಲ್ಲಿ ಬೇರೊರಿರುವ ಅಂಧಕಾರ, ಕಂಧಾಚಾರ, ಮೂಢನಂಬಿಕೆಗಳನ್ನು ಹೋಗಲಾಡಿಸಲು ಪ್ರಯತ್ನ ಪಟ್ಟರು.ಆದರೆ ಈ ದಿಸೆಯಲ್ಲಿ ಅವರು ಸತತ ಹೋರಾಟ ಯಶಸ್ವಿಯಾಗಲಿಲ್ಲಾ,ಕಾರಣ ಮನನೊಂದು ಇನ್ನು ಹೆಚ್ಚು ಆಧ್ಯಾತ್ಮಿಕ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕೆಂದು, ಅಂದು ಆಧ್ಯಾತ್ಮಿಕ ಹಾಗೂ ಧಾರ್ಮಿಕ ಲೋಕದ ಉತ್ತುಂಗ ಶಿಖರದ ಕೀರ್ತಿ ಪತಾಕೆಯಲ್ಲಿ ಕಂಗೊಳಿಸುತ್ತಿದ್ದ ಮತ್ತು ಸರ್ವ ಜನಾಂಗದ ಸಹಬಾಳ್ವೆಯ ಅಭಿವೃದ್ಧಿಗಾಗಿ ಹಾಗೂ ಸಮತವಾದದ ಸಮಾನತೆಯ ಸಂದೇಶಗಳನ್ನು ವಿಶ್ವದಾದ್ಯಂತ ಪಸರಿಸುತ್ತಿದ್ದ ಅನುಭವ ಮಂಟಪದ ವಿಚಾರಧಾರೆಗಳನ್ನು ಅರಿತು ಅನುಭವ ಮಂಟಪಕ್ಕೆ ತೆರಳುವ ಸಂಕಲ್ಪವನ್ನು ಮಾಡಿ ಲೋಕಸಂಚಾರಿಯಾಗಿ ಕಲ್ಯಾಣದ ಅನುಭವ ಮಂಟಪದ ಕಡೆ ಹೆಜ್ಜೆ ಹಾಕಿದರು .
ಅಕ್ಕ ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅನುಭವ ಮಂಟಪ ಬಂದ ಸಂದರ್ಭದಲ್ಲಿ ಅಕ್ಕ ಎದುರಿಸಿದ ಸಮಸ್ಯೆಗಳು ಲೆಕ್ಕಕ್ಕಿಲ್ಲ. ಇಂತಹ ಸಮಯದಲ್ಲಿ ಸಾಮಾಜಿಕ ಮತ್ತು ತಾತ್ವಿಕ ಪ್ರಶ್ನೆಗಳನ್ನು ಅಲ್ಲಮಪ್ರಭುಗಳು ಅನುಭವ ಮಂಟಪದಲ್ಲಿ ಅಕ್ಕನಿಗೆ ಕೇಳಿದಾಗ,ಅಷ್ಟೇ ತಾಳ್ಮೆ, ಸಹನೆ, ನಮ್ರತೆ ಮತ್ತು ವಿನಯದ ವೈಚಾರಿಕತೆಯ ಆಧ್ಯಾತ್ಮಿಕ ಪರಿಧಿಯೊಳಗೆ ಉತ್ತರಿಸುವ ದಿಟ್ಟತನ ಕೆಚ್ಚೆದೆಯ ತೋರಿದರು.ಇಡೀ ಶರಣರ ಸಂಕುಲ ನೋಡಿ ಗಾಬರಿಪಡದೇ, ಎದೆಗುಂದದೆ ಆತ್ಮಬಲದ ಮನೋಸ್ಥಿತಿ – ಮನೋಧರ್ಮದ ಸಮಾಜಿಕ ನೆಲೆಗಟ್ಟಿನ ಆಧಾರದ ಮೇಲೆಯೇ ವಿಚಾರಗಳನ್ನು ಹಾಗೂ ನೈತಿಕ ಚಿಂತನೆಯಗಳ ಮೂಲಕ ಉತ್ತರಿಸುವ ಕೈಂಕರ್ಯ ಕಾರ್ಯ ಮಾಡಿದ ಹಿರಿಮೆ – ಗರಿಮೆ ಅಕ್ಕನದಾಗಿತ್ತು ಬಂಧುಗಳೇ. ತರುವಾಯ ಈ ಎಲ್ಲಾ ಕಾರಣದಿಂದ ಇಡೀ ಶರಣರ ಬಳಗದ ಮಚ್ಚುಗೆಗೆ ಪಾತ್ರವಾದರು.ಪಾತ್ರವಾಗುವ ಮೂಲಕ ಎಲ್ಲಾ ಶಿವಶರಣರು ಅಕ್ಕನಲ್ಲಿ ಸನ್ಮಾರ್ಗದ ನೈಜತೆ ಕಂಡರು,
ಈ ವೈಶಿಷ್ಟ್ಯತೆ ಶ್ರೇಷ್ಠತೆ ಮಾಹಾಮೂರ್ತ ಜ್ಜಾನನಿಧಿ – ವೈರಾಗ್ಯನಿಧಿ ಮಹಾತಾಯಿ ಅಕ್ಕನದಾಗಿತ್ತು ಅನ್ನುವುದು ಯಾರು ಮರಿಯಬೇಡಿ.ಹೀಗೆ ಹಲವಾರು ಸಂಕಷ್ಟಗಳ ಸರಮಾಲೆನ್ನು ದಾಟಿ ಅಕ್ಕಮಹಾದೇವಿ ತಾಯಿ ಶಿವಶರಣರ ಚಳುವಳಿಯಲ್ಲಿ ಬಹು ಎತ್ತರದ ಮಾಹಾಚೇತನ ಮೂರ್ತಿಯಾಗಿ ಮೂಡಿ ಬಂದ ವ್ಯಕ್ತಿತ್ವ ಈ ಶಿವಶರಣೆದಾಗಿತ್ತು.ಹಾಗಾಗಿ ಅಂದು ಭಾರತದಲ್ಲಿದ್ದ ಕೆಲವೊಂದು ಸಾಂಪ್ರದಾಯ ಢಾಂಬಿಕ ಅರ್ಥವಿಲ್ಲದ ಆಚರಣೆಗಳನ್ನು ಖಂಡಿಸಿ, ಪರ್ಯಾಯವಾಗಿ ಜನಸಾಮಾನ್ಯರ ಅಕ್ಕರೆಯ ಬಸವ ತತ್ವವನ್ನು ಜನಮನಕ್ಕೆ ಮುಟ್ಟಿಸುವ ಕಾಯಕ ಮಾಡಿದರು, ಶಿವಶರಣರ ವಚನಗಳನ್ನು ಜನರಿಗೆ ಕೊಡುವ(ನೀಡುವ) ಮೂಲಕ ಓದಲು ಪ್ರೇರೇಪಿಸುವ ಕೆಲಸವನ್ನು ಅದ್ಬುತವಾಗಿ ಮಾಡಿದ ಶ್ರೇಯಸ್ಸು ಅಕ್ಕನದು.
ಹೀಗಾಗಿ ಅವರ ಇಡೀ ಜೀವನ ಕಥನ, ಐತಿಹ್ಯ, ವಿಸ್ಮಯ, ಪ್ರಭಾವಗಳಿಂದ ತುಂಬಿದ್ದರೂ ಸಹ, ಅವರ ಬಗ್ಗೆ ಅವರ ಸಮಕಾಲೀನ ವಚನಕಾರರೂ, ಅಕ್ಕನ ಕಾಲಕ್ಕೆ ತುಂಬಾ ಹತ್ತಿರದವನಾದ ಹರಿಹರ ಮಹಾಕವಿಯು ರಚಿಸಿರುವ ಮಹಾದೇವಿಯಕ್ಕಗಳ ರಗಳೆ ಮತ್ತು ಸ್ವತಃ ಅಕ್ಕಮಹಾದೇವಿ ಯವರೇ ರಚಿಸಿರುವ ವಚನಗಳು ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎನ್ನುವ ಮೌಲ್ಯಿಕ ಮಾತುಗಳು ನಾವ್ಯಾರು ಮರೆಯಬಾರದು.
ಈ ಸಂದರ್ಭದಲ್ಲಿ ಅಕ್ಕನ ಘನ ವ್ಯಕ್ತಿತ್ವದ ಕುರಿತು ಚಿನ್ಮಯಿಜ್ಞಾನಿ ಚೆನ್ನಬಸವಣ್ಣನವರ ವಚನ ಹೀಗಿದೆ. “ಅಜಕೋಟಿ ಕಲ್ಪವರುಷದವರೆಲ್ಲರೂ ಹಿರಿಯರೇ? ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ? ನಡು ಮುರಿದು ಗುಡುಗೂರಿ ತಲೆ ನಡುಗಿ ನೆರೆತೆರೆ ಹೆಚ್ಚಿ ; ಮತಿಗೆಟ್ಟು ಒಂದನಾಡ ಹೋಗಿ ಒಂಭತ್ತನಾಡುವ ಅಜ್ಞಾನಿಗಳೆಲ್ಲರೂ ಹಿರಿಯರೇ? ಅನುವನರಿದು ಘನವ ಬೆರೆಸಿ ಹಿರಿದು ಕಿರಿದೆಂಬ ಭೇದವ ಮರೆದು ಕೂಡಲ ಚೆನ್ನಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲದಿಪ್ಪ ಹಿರಿಯತನ ನಮ್ಮ ಮಹಾದೇವಿಯಕ್ಕಂಗಾಯಿತ್ತು.”
ಜೊತೆಗೆ ಇನ್ನೊಂದು ವಚನದಲ್ಲಿ “ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ! ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ! ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ! ಅಜಗಣ್ಣನ ಐದು ವಚನಕ್ಕೆ ಕೂಡಲ ಚೆನ್ನಸಂಗಯ್ಯನಲ್ಲಿ ಮಹಾದೇವಿಯಕ್ಕನ ಒಂದು ವಚನ ನಿರ್ವಚನ ಕಾಣಾ ಸಿದ್ಧರಾಮಯ್ಯ”.
ಎನ್ನುವ ಈ ಎರಡು ವಚಗಳಲ್ಲಿ ಸಾಹಿತ್ಯದ ಮಧುರ ಭಕ್ತಿಯ ಸೌಜನ್ಯ ಗುಣ, ಮಹಾದೇವಿಯಕ್ಕನ ವಚನಗಳಲ್ಲಿ ಭಕ್ತಿಯ ತೀವ್ರತೆ, ವೈರಾಗ್ಯದ ಉತ್ಕಟತೆ ಇದೆ. ಪ್ರಕೃತಿಯ ಸಂಗತಿ ಅನುರಣಿತವಾಗಿದೆ. ಸಮಕಾಲೀನ ಸಮಾಜದ ಸಾಂಸ್ಕೃತಿಕ ಚಿತ್ರವಿದೆ, ವೈಚಾರಿಕ ಪ್ರಜ್ಞೆ ಮತ್ತು ಆತ್ಮಸ್ಥೈರ್ಯವಿದೆ, ಸಾಮಾಜಿಕ ವಿಡಂಬನೆ ಇದೆ. ಧರ್ಮತತ್ವದ ವಿವೇಚನೆ ಇದೆ, ಸತಿಪತಿಭಾವದ ವಿಭಿನ್ನ ನೆಲೆಯಿದೆ, ಮೇಲಾಗಿ ಮಹಿಳಾ ಅಭಿವ್ಯಕ್ತಿಯ ದನಿಯಿದೆ.
ಇದುವೇ ಅಕ್ಕನ ವಚನಗಳ ಭಾಷೆ ರಚನಾ ವಿನ್ಯಾಸದ ವಿಶಿಷ್ಟತೆ. ಅಕ್ಷರ ಜ್ಞಾನ, ಜೀವನಾನುಭದ ಉತ್ಕಟ ಭಾವಸ್ಥಿತಿಯನ್ನು ಹಾಡಾಗಿಸಿದ ಅಕ್ಕ ಹಾಗೂ ಇತರ ಮಹಿಳಾ ವಚನಕಾರ್ತಿಯರ,ಕಾವ್ಯಪ್ರತಿಭೆ,ಕಲ್ಪನಾಶಕ್ತಿ ಸೃಜನಶೀಲತೆ,ಬೌದ್ಧಿಕತೆಗೆ ಕನ್ನಡದ ಮೌಖಿಕ ಸಾಹಿತ್ಯದ ಸಮೃದ್ಧ ಪರಂಪರೆಯ ನಿದರ್ಶನವಿದೆ. ಮೋಹ-ಮಾಯೆ,ಅಡ್ಡಿ-ಆತಂಕ,ನಿಂದೆ-ಕಟಕಿಗಳೆಲ್ಲವನ್ನೂ ಮೀರಿದವಳು ಮಹಾದೇವಿ ಅಕ್ಕ. ಹಾಗಾಗಿ ಅಕ್ಕನ ವಿಚಾರಧಾರೆ ಮತ್ತು ಅವರ ಜೀವನ ಮೌಲ್ಯಗಳು ಈ ವಚನಗಳಲ್ಲಿ ಮಾರ್ಮಿಕವಾಗಿ ನಮ್ಮೆಲ್ಲರಿಗೂ ಅರ್ಥವಾಗುತ್ತವೆ.
ಆದ್ದರಿಂದ ಇವರ ಹೋರಾಟಗಳು ಜನಸಾಮಾನ್ಯರಿಗೆ ಆದರ್ಶ ಹಾಗೂ ಅಸಾಮಾನ್ಯವಾದದ್ದು ಎನ್ನಬಹುದು, ಆದಕಾರಣ ಅಕ್ಕನ ವೈಚಾರಿಕ ವೈಶಿಷ್ಟ್ಯತೆಯ ನಿಲುಗಳು ಇಂದಿನ ಜನಸಮುದಾಯಕ್ಕೆ ಮಾದರಿಯಾಗಿವೆ.ಹಾಗಾಗಿ ಅಕ್ಕನ ವೈಜ್ಞಾನಿಕ, ಅನುಭಾವ ಜೀವನ ಪೂರ್ಣವಾದ ನೈಜ ಘಟನೆಗಳಿಂದ ಕೂಡಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಸ್ನೇಹಿತರೆ.
ಅನುಭಾವಿ ಕವಿಯೂ ಆಗಿದ್ದ ಅಕ್ಕಮಹಾದೇವಿ ಅಕ್ಕನವರ ವಚನಗಳು ಕನ್ನಡ ಸಾರಸ್ವತ ಲೋಕದ ಮೌಲ್ಯಾಧಾರಿತ ಬರವಣಿಗೆಗಳಾಗಿವೆ ಅಂದರೆ ತಪ್ಪಾಗಲಾರದು. ವಚನಕಾರರಲ್ಲಿಯೇ ಅತ್ಯಂತ ಕಿರಿಯರಾಗಿದ್ದರೂ ಸಹ, ವಿಶಿಷ್ಟ ವೈಜ್ಞಾನಿಕ ಜೀವನಾನುಭವವನ್ನು ಹೊಂದಿದ ಕಾರಣದಿಂದ, ಅವರ ಬರಹಗಳು ಗಮನಾರ್ಹವಾಗಿವೆ ಮತ್ತೊಂದು ಮೈಲಿಗಲ್ಲು. ಅಂದು ಅಕ್ಕ
ಶರಣ ಚಳುವಳಿಯಲ್ಲಿ ಭಾಗವಹಿಸಲು ನಿರ್ಣಯಿಸಿ, ಅನುಭವ ಮಂಟಪವನ್ನು ಪ್ರವೇಶ ಮಾಡಿದ್ದು ಐತಿಹಾಸಿಕ ನಿರ್ಧಾರ. ಈ ಹಿನ್ನೆಲೆಯಲ್ಲಿ ಅಕ್ಕನವರ ಅನುಭವ ಮಂಟಪದ ಪ್ರವೇಶದ ಮೊದಲ ದಿನವನ್ನು ಸ್ಮರಿಸದ ಶರಣ ಸಾಹಿತ್ಯಕಾರನಿಲ್ಲ, ಎನ್ನುವಷ್ಟು ಅಪೂರ್ವ ಸ್ವಾಗತ ಅವರಿಗೆ ಶಿವಶರಣರಿಂದ ದೊರಕಿತು.
ಅಲ್ಲಿ ಅಲ್ಲಮಪ್ರಭು ಮತ್ತು ಅಕ್ಕನವರ ನಡುವೆ ನಡೆಯಿತೆನ್ನಲಾದ ಸಂಭಾಷಣೆ, ಅನುಭಾವದ ಉತ್ತುಂಗದ ಋಷಿವಾಣಿಯ ರೂಪದಲ್ಲಿ ವಚನಗಳಲ್ಲಿ ಸಂಗ್ರಹಿತವಾಗಿದೆ. ‘ಯೋಗಾಂಗತ್ರಿವಿಧಿ’ ಅಕ್ಕಮಹಾದೇವಿ ಯವರ ಪ್ರಮುಖ ಕೃತಿಯಾಗಿದೆ. ಸೃಷ್ಟಿಕರ್ತನ ಪರಮ ಭಕ್ತಳಾಗಿ, ಅವನನ್ನೇ ಆರಾಧ್ಯದೈವ, ಪತಿಯನ್ನಾಗಿ ಸ್ವೀಕರಿಸಿ, ತನ್ನನ್ನು ಅವನ ಸತಿ ಎಂದು ಭಾವಿಸಿಕೊಂಡು, ಸತಿ – ಪತಿಭಾವದಿಂದ, ಶರಣ ಸತಿ – ಲಿಂಗ ಪತಿ ಎಂದು ತಿಳಿದಳು ಬಾಳಿದಳು ಅಕ್ಕ. ‘ಚೆನ್ನಮಲ್ಲಿಕಾರ್ಜುನ’ ಎಂಬ ಅಂಕಿತದಲ್ಲಿ 430 ಕ್ಕೂ ಹೆಚ್ಚು ವಚನಗಳು ರಚಿಸಿದ ಮೇಧಾವಿ ಮಾಹಾದೇವಿ ಅಕ್ಕ.
ಆಶಯ ಮಾತು: ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಇಡೀ ಶರಣರ ಸಂಕುಲಕ್ಕೆ ಆದರ್ಶ ಪ್ರಾಯಳು.
ಗುರು ಬಸವಣ್ಣನವರಿಗೆ ಅಕ್ಕನಾಗಿ, ಸಮಸ್ತ ಶರಣ ಸಂಕುಲದ ಬಳಗಕ್ಕೆ, ಮಾಹಾಶಿವಶರಣೆಯಾಗಿ, ಸರ್ವ ಜನಾಂಗಕ್ಕೂ ಜಗನ್ಮಾತೆಯಾಗಿ,ಕನ್ನಡ ನಾಡಿನ ಮೊದಲ ಕವಿಯತ್ರಿಯಾಗಿ, ಸಮಾನತೆ ಹಾಗೂ ಮಹಿಳೆಯ ಹಕ್ಕುಗಳಿಗಾಗಿ ಧ್ವನಿ ಎತ್ತಿ ಹೋರಾಡಿದ ಕೀರ್ತಿ ಇವರದು.ಮಹಿಳೆಯರೂ ಸೇರಿ, ಸರ್ವರಿಗೂ ಸಮಾನತೆಯ ಸೌಹಾರ್ದ ತತ್ವವನ್ನು ಸಾರುವ ಲಿಂಗಾಯತ ಧರ್ಮಪ್ರಚಾರಕಿಯಾಗಿ ದುಡಿದರು.
ಕ್ರಾಂತಿಕಾರಿ ಜಂಗಮಮೂರ್ತಿಯಾಗಿ ಉಡತಡೆಯಿಂದ ಕದಳಿಯವರೆಗೆ ತಮ್ಮ ತಲೆಯ ಮೇಲೆ ವಚನಗಳನ್ನು ಹೊತ್ತುಕೊಂಡು ಜನಮನಕ್ಕೆ ತಿಳಿಯುವಾಗೆ ಪ್ರಚಾರ ಮಾಡಿದ ಶ್ರೇಯಸ್ಸು ಅಕ್ಕನಿಗೆ ಸಲ್ಲಬೇಕು.ಪುರುಷ-ಪ್ರಧಾನ ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಆಧ್ಯಾತ್ಮಿಕ ಹೋರಾಟಗಳಿಗೆ ಮಾರ್ಗದರ್ಶನ ನೀಡಿದರು. ಜೊತೆಗೆ ಕನ್ನಡ ಮಾತೃಭಾಷೆಯನ್ನು ದೇವ ಭಾಷೆಯನ್ನಾಗಿ ಮಾಡುವಲ್ಲಿ ಎಲ್ಲಾ ಶರಣರೊಂದಿಗೆ ಶ್ರಮಿಸಿ – ಕೈಜೋಡಿಸಿದರು.
ನಮ್ಮಲ್ಲರ ಅಜ್ಞಾನವನ್ನು ತೊಡೆದು, ಸುಜ್ಞಾನವನ್ನು ಹಂಚಿರುವ ಸ್ವತಂತ್ರ ವಿಚಾರವಾದಿ,ಸ್ವಾಭಿಮಾನ ಧೀರ ಮಹಿಳೆ, ಅನುಭಾವಿ ವಚನಕಾರ್ತಿಯಾಗಿ,ದಾರ್ಶನಿಕ ತತ್ವಜ್ಞಾನಿ, ಸ್ತ್ರೀಪರ ಹೋರಾಟಗಾರ್ತಿಯಾಗಿ ಮಾಡಿದ ಅನುಪಮ ಸೇವೆಯನ್ನು ಇಂದು ವಿಶ್ವ ನಿಮ್ಮನ್ನು ಅತ್ಯಂತ ಭಕ್ತಿ ಭಾವ – ಹೃದಯ ಹೃನ್ಮನದಿಂದ ಸ್ಮರಿಸುತ್ತದೆ ಮತ್ತು ಅಭಿಮಾನದಿಂದ ನೆನೆಯುತ್ತೇವೆ.
ಗೌರವ ನುಡಿ – ಕನ್ನಡ ಸಾಹಿತ್ಯ ಮೊದಲ ಬಂಡಾಯ ಕವಯತ್ರಿ ಮತ್ತು ವಚನಗಾರ್ತಿ ಹಾಗೂ ಮಹಿಳೆಯರ ಪ್ರತಿನಿಧಿಯಾಗಿ ಅಭಿವ್ಯಕ್ತಿಯಲ್ಲಿ ಪುರುಷ ಸಮಾಜವನ್ನು ಪ್ರತಿಭಟಿಸಿದವರು. ಸಾಮಾಜಿಕ ಬದಲಾವಣೆಗೆ ಹಗಲಿರುಳು ಶ್ರಮಿಸಿದವರು.
ಅಧಿಕಾರ, ಸಂಪತ್ತು, ವೈಭವ, ಆಡಂಬರ, ಭೋಗ ಜೀವನಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಈ ಎಲ್ಲ ಬಂಧನಗಳಿಂದ ಬಿಡುಗಡೆ ಪಡೆದು, ಸಾಮಾನ್ಯರಲ್ಲಿ ಸಾಮಾನ್ಯಳಂತೆ ಜೀವನ ನಡೆಸಿದ ಧೀರೆ,ಧೀಮಂತೆ ವೀರ ವೀರಾಗಿಣಿ ಅಕ್ಕನವರ ಜಯಂತಿಯ ಈ ಶುಭ ಸಂದರ್ಭದಲ್ಲಿ, ಅಕ್ಕನವರ ಅಂತರಾತ್ಮಕ್ಕೆ ಭಕ್ತಿಯ ಶರಣಾರ್ಥಿಗಳು ಸಲ್ಲಿಸುತ್ತಾ, ಅಕ್ಕನವರು ನಡೆದು ಬಂದ ದಾರಿ ನಮ್ಮೆಲ್ಲರಿಗೂ ಪ್ರೇರಣದಾಯಕವಾಗಲೆಂದು ಆಶಿಸುತ್ತೇವೆ.
…………
ಲೇಖಕರು : ಸಂಗಮೇಶ ಎನ್ ಜವಾದಿ.
ಬರಹಗಾರರು,ಪತ್ರಕರ್ತರು, ಸಾಮಾಜಿಕ ಸೇವಕರು.
ಜಿಲ್ಲಾಧ್ಯಕ್ಷರು : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ ಜಿಲ್ಲಾ